ಚಿತ್ರದುರ್ಗ : ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಬಸವ ಪ್ರಭು ಶ್ರೀ
ಚಿತ್ರದುರ್ಗ, ಮಾ. 6 – 12ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ ಕೊಟ್ಟರು. ಸಮಾಜದಲ್ಲಿ ಮಡಿವಂತಿಕೆ ಇನ್ನೂ ಜೀವಂತ ಇದೆ. ಗಂಡು ಹುಟ್ಟಿದರೆ ಪೇಡ ಹಂಚುವರು, ಹೆಣ್ಣು ಹುಟ್ಟಿದರೆ ಪೀಡೆ ಎಂಬರು. ಇಂತಹ ಆಲೋಚನೆಗಳು ಸಮಾಜಕ್ಕೆ ಮಾರಕವಾಗಿವೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಭಾನುವಾರ ನಡೆದ ಮುವತ್ಮೂರನೇ ವರ್ಷದ ಮೂರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಭ್ರೂಣ ಹತ್ಯೆ ಕಾರಣದಿಂದ ಇಂದು ವಧುಗಳು ಸಿಗುತ್ತಿಲ್ಲ. ಇತ್ತೀಚೆಗೆ ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಇದು ಮಹಾಪಾಪ. ವರದಕ್ಷಿಣೆ ಕೊಡುವುದು, ತೆಗೆದುಕೊಳ್ಳುವುದು ಎರಡೂ ತಪ್ಪು. ನಾವು ಆದರ್ಶ ಸಮಾಜದ ಕಡೆ ಸಾಗಬೇಕು. ಸಂಸಾರ ಸುಗಮವಾಗಬೇಕಾದರೆ ಪ್ರೀತಿ ಇರಬೇಕು. ನುಡಿದರೆ ಮುತ್ತಿನ ಹಾರದಂತಿರ ಬೇಕು. ನಮ್ಮ ಮಾತುಗಳು ಮುತ್ತು ಪೋಣಿಸಿದಂತಿರಬೇಕು. ಸತಿ ಪತಿಗಳು ಹಂಗಿಸಿ, ಚುಚ್ಚಿ ಮಾತನಾಡಬಾರದು. ನಮ್ಮ ಮಾತಿನಲ್ಲಿ ಸ್ವರ್ಗ ಮತ್ತು ನರಕ ಎರಡೂ ಇವೆ. ಅವುಗಳನ್ನು ಬಳಸಿಕೊಳ್ಳುವ ಬುದ್ಧಿ ವಂತಿಕೆ ವ್ಯಕ್ತಿಯಲ್ಲಿರಬೇಕಾಗುತ್ತದೆ ಎಂದರು.
ರಾಣೇಬೆನ್ನೂರಿನ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ವಧು-ವರರಲ್ಲಿ ತಾಳ್ಮೆ ಮುಖ್ಯ. ತಾಳ್ಮೆ ಇದ್ದರೆ ಏನೆಲ್ಲವನ್ನು ಜಯಿಸಬಹುದು. ಮನೆಯಲ್ಲಿರುವ ಹಿರಿಯರು ನವ ದಂಪತಿಗಳಿಗೆ ತಿಳುವಳಿಕೆ ನೀಡಬೇಕು. ತಾಳ್ಮೆಯಿಂದ ಬದುಕುವ ಕುಟುಂಬದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಹಾಗಾಗಿ ಮನುಷ್ಯ ದ್ವೇಷವನ್ನು ಇಟ್ಟುಕೊಂಡು ಬದುಕಬಾರದು ಎಂದು ಹೇಳಿದರು.
ಜಮಖಂಡಿ ಬಸವ ಕೇಂದ್ರದ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಮದುವೆ ಮುಖ್ಯ ಘಟ್ಟ. ನಾವು ಬದುಕನ್ನು ಹೇಗೆ ಬದುಕುತ್ತಿದ್ದೇವೆ ಎನ್ನುವುದು ಮುಖ್ಯ. ಮನುಷ್ಯನಲ್ಲಿ ಸಹನಾಶೀಲತೆ ಇರಬೇಕೆಂದರು.
ಕಾರ್ಯಕ್ರಮದಲ್ಲಿ ಭೋವಿ (ವರ) ಮತ್ತು ಬೆಸ್ತರು (ವಧು) ಅಂತರ್ಜಾತಿ ವಿವಾಹ ಸೇರಿದಂತೆ ಒಟ್ಟು 8 ಜೋಡಿಗಳ ವಿವಾಹ ನೆರವೇರಿಸಲಾಯಿತು. ಜ್ಞಾನ ಮೂರ್ತಿ, ಪೈಲ್ವಾನ್ ತಿಪ್ಪೇಸ್ವಾಮಿ ಇದ್ದರು.