ಬೆಂಗಳೂರು, ಮಾ. 7 – ಕರ್ನಾಟಕ ಸಾಬೂನು ಕಾರ್ಖಾನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿದ್ದ ಬಿಜೆಪಿಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿರುಪಾಕ್ಷಪ್ಪ ಕಾರ್ಖಾನೆಯ ಅಧ್ಯಕ್ಷರಾಗಿದ್ದು, ಅವರ ಪುತ್ರ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿದ್ದಾರೆ.
ವಿರುಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ಕ್ರಿಮಿನಲ್ ಪ್ರಕರಣದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಷರತ್ತುಬದ್ಧ ಜಾಮೀನು ನೀಡಿದ್ದಾರೆ.
ಅರ್ಜಿದಾರರು 48 ಗಂಟೆಯೊಳಗಾಗಿ ಲೋಕಾಯುಕ್ತ ಮುಂದೆ ಹಾಜರಾಗಿ, ವಿಚಾರಣೆಗೆ ಒಳಪಡಬೇಕು ಎಂದು ಐದು ಲಕ್ಷ ಮೊತ್ತ ಬಾಂಡ್ ಪಡೆದು, ಜಾಮೀನು ಮಂಜೂರು ಮಾಡಿದೆ.
ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು. ತನಿಖೆಗೆ ಸಹಕರಿಸಬೇಕೆಂದು ಆದೇಶ ನೀಡಿರುವ ಪೀಠ, ವಿಚಾರಣೆಯನ್ನು ಇದೇ 17ಕ್ಕೆ ನಿಗದಿಪಡಿಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಕೆ.ಸುಮನ್ ಅವರು ಎಫ್‍ಐಆರ್‍ನಲ್ಲಿ ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷಿಗಳಿಲ್ಲ. ಟೆಂಡರ್‍ಗೆ ಲಂಚ ನೀಡುವಂತೆ 30 ಪರ್ಸೆಂಟ್ ಬೇಡಿಕೆ ಇಟ್ಟಿರುವ ಬಗ್ಗೆ ಯಾವುದೇ ಪುರಾವೆಗಳು ಇಲ್ಲ.
ಮಗ ಮತ್ತು ತಂದೆಗೆ ಇದರಲ್ಲಿ ಯಾವುದೇ ಸಂಬಂಧವಿಲ್ಲ. ವಿರೂಪಾಕ್ಷಪ್ಪ ಅವರಿಗೆ 75 ವರ್ಷ ತುಂಬಿದೆ. ನಾಲ್ಕು ಬಾರಿ ಶಾಸಕರಾಗಿದ್ದಾರೆ. ಮಿಗಿಲಾಗಿ ಹೃದಯ ಸಂಬಂಧಿ ಸಮಸ್ಯೆಗಳಿವೆ. ವಿಚಾರಣೆಗೆ ಹಾಜರಾದರೆ, ಲೋಕಾಯುಕ್ತ ಪೊಲೀಸರು ಬಂಧಿಸುವ ಭೀತಿ ಇದೆ.
ಆದ್ದರಿಂದ ನಮ್ಮ ಕಕ್ಷಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಯಾಗಿ ಲೋಕಾಯುಕ್ತ ಪರ ಹಾಜರಾಗಬೇಕಿದ್ದ ವಕೀಲ ವಿ.ವಿ. ಪಾಟೀಲ್ ಗೈರು ಹಾಜರಾಗಿದ್ದರು.
ಈ ಹಂತದಲ್ಲಿ ನನ್ನ ವಿರುದ್ಧ ಕಾನೂನು ಬಾಹಿರವಾಗಿ ಮತ್ತು ಕಿರುಕುಳ ಕೊಡುವ ದುರುದ್ದೇಶದಿಂದ ಎಫ್‍ಐಆರ್ ದಾಖಲು ಮಾಡಲಾಗಿದೆ.
ನಾನು ಲಂಚವನ್ನು ಕೇಳಿಯೂ ಇಲ್ಲ ಮತ್ತು ಪಡೆದೂ ಇಲ್ಲ. ಪ್ರಕರಣದಲ್ಲಿ ನನ್ನನ್ನು ಮೊದಲ ಆರೋಪಿಯನ್ನಾಗಿ ಮಾಡಿದ್ದಾರೆ. ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ವಕೀಲರು ತಮ್ಮ ಕಕ್ಷಿದಾರರ ಪರ ವಾದ ಮಂಡಿಸಿದರು.
ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಟೆಂಡರ್ ಪ್ರಕ್ರಿಯೆಯಲ್ಲಿ 40 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ, ಲೋಕಾಯುಕ್ತ ಪೊಲೀಸರು ಇದೇ 2 ರಂದು ದೂರು ದಾಖಲಿಸಿದ್ದರು.