ಹರಪನಹಳ್ಳಿ, ಮಾ.6- ಪಟ್ಟಣದ ಜೋಯಿಸರಕೇರಿಯಲ್ಲಿರುವ ಲಕ್ಷ್ಮಿನರಸಿಂಹ ದೇವಸ್ಥಾನದಲ್ಲಿ ಇದೇ ದಿನಾಂಕ 10 ರಂದು ಲಕ್ಷ್ಮಿನರಸಿಂಹ ಸ್ವಾಮಿ ಅಷ್ಟಬಂಧ ಪೂರ್ವಕ ಪುನರ್ ಪ್ರತಿಷ್ಟಾಪನೆ ಹಾಗೂ ಶಿಖರ ಕಳಸ ಪ್ರತಿಷ್ಟಾ ಹಾಗೂ ಕಲಶಾಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ಪಟ್ಟಣದ ಶಂಕರ ಮಠದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಂಕರ ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ಶ್ಯಾಮಸುಂದರ ಭಟ್ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಶಿಥಿಲಗೊಂಡಿದ್ದರಿಂದ ನೂತನ ದೇವಸ್ಥಾನ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಸ್ವಾಮಿಯ ಪುನರ್ ಪ್ರತಿಷ್ಟಾಪನೆ, ಶಿಖರ ಕಲಶ ಪ್ರತಿಷ್ಟಾ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಇದೇ ದಿನಾಂಕ 10ರಂದು ಕೊಪ್ಪ ತಾಲ್ಲೂಕಿನ ಹರಿಹರಪುರದ ಆದಿಶಂಕರಚಾರ್ಯ ಶಾರದ ಲಕ್ಷ್ಮಿನರಸಿಂಹ ಪೀಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದರು.
ನಾಡಿದ್ದು ದಿನಾಂಕ 9 ರಂದು ಸಂಜೆ 4.30ಕ್ಕೆ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಪುರ ಪ್ರವೇಶ ಮಾಡುವರು. ಶ್ರೀಗಳನ್ನು ಹಳೇ ಬಸ್ ನಿಲ್ದಾಣದಲ್ಲಿ ವೀರಭದ್ರೇಶ್ವರ ದೇವಸ್ಥಾನದಿಂದ ಹೊಸಪೇಟೆ ರಸ್ತೆ ಮೂಲಕ ಐ.ಬಿ.ವೃತ್ತ ಹಾಯ್ದು ಪೂರ್ಣಕುಂಭದೊಂದಿಗೆ ಚಂಡೆ ವಾದ್ಯ, ಮೇಳದೊಂದಿಗೆ ಭವ್ಯ ಶೋಭಾಯಾತ್ರೆ ಮೂಲಕ ಶಂಕರ ಮಠಕ್ಕೆ ಬರಮಾಡಿಕೊಳ್ಳಲಾಗುವುದು.ನಂತರ ಶಂಕರ ಮಠದ ವಾಲುಕೇಶ್ವರ ಭಾರತಿ ಸಭಾ ಮಂಟಪದಲ್ಲಿ ಶ್ರೀಗಳವರ ಧೂಳಿ ಪಾದುಕ ಪೂಜಾ ಹಾಗೂ ಆರ್ಯಾಂಭ ಭಜನಾ ಮಂಡಳಿಯವರಿಂದ ಶಂಕರಚಾರ್ಯ ವಿರಚಿತ ಸೋತ್ರಗಳ ಪಠಣ ಹಾಗೂ ಭಜನೆ ನಡೆಯಲಿದೆ.
ದಿನಾಂಕ 10ಕ್ಕೆ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಪೂರ್ಣಗೊಂಡ ಬಳಿಕ ಶಂಕರ ಮಠದಲ್ಲಿ ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಶಂಕರ ಸೇವಾ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮಿನಾರಾಯಣಭಟ್, ಲಕ್ಷ್ಮಿನರಸಿಂಹ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಜೋಷಿ, ಗೌರವಾಧ್ಯಕ್ಷ ನರಸಿಂಗರಾವ್, ಭಜನಾ ಮಂಡಳಿ ಅಧ್ಯಕ್ಷೆ ಸುಶೀಲ ಆರ್.ರಾವ್, ಕಾರ್ಯದರ್ಶಿ ಜಿ.ವಿ.ರಾಜೇಶ್ವರಿ, ನರಸುಬಾಯಿ, ಎಸ್.ರೋಹಿಣಿ, ಅರುಣಲತಾ, ಯು.ಎಸ್.ವಾಣಿ, ಅಚ್ಚಪ್ಪ, ಮುರುಳೀಧರ ಜೋಷಿ, ಶ್ರೀನಾಥ ಜೋಷಿ, ಗಿರೀಶ ಸೋಮಯಾಜಿ, ಯು.ದತ್ತಾತ್ರೇಯ ಹಾಗು ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.