ಕೊಟ್ಟೂರು, ಫೆ. 4 – ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಆಶಯದಂತೆ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಹಾಗೂ ಸಂಗಮೇಶ್ವರ – ಬಳಿಗಾನೂರು ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ತರಳಬಾಳು ಹುಣ್ಣಿಮೆಯ ಎಂಟನೇ ದಿನದ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೊಟ್ಟೂರು ಕೆರೆಗೆ ನೀರು ತುಂಬಿಸಲು ಆರು ಕಿ.ಮೀ. ದೂರದಿಂದ ವಿಶೇಷ ಪೈಪ್ಲೈನ್ ಹಾಕಿಸಬೇಕಿದೆ. ಎಷ್ಟೇ ಹಣ ಖರ್ಚಾದರೂ ಅದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಕೊಟ್ಟೂರು ಕೆರೆಗೆ ನೀರು ತರುವ ಹಾಗೂ ಸಂಗಮೇಶ್ವರ – ಬಳಿಗಾನೂರು ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಸಮ್ಮತಿ ಕೊಟ್ಟಿದ್ದೇನೆ. ಇಂದು ಬೆಂಗಳೂರಿಗೆ ಹೋದ ತಕ್ಷಣ ಆ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಸ್ವಾಮೀಜಿ ಅವರು ತರಳಬಾಳು ಹುಣ್ಣಿಮೆ ನಡೆದ ಸ್ಥಳಗಳಲ್ಲಿ ಆ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ, ವಿಶೇಷವಾಗಿ ರೈತರಿಗೆ ಕಾಣಿಕೆ ನೀಡುವ ಕೆಲಸ ಮಾಡಿದ್ದಾರೆ. ಜಗಳೂರು ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನಿರಂತರ ಶ್ರಮಿಸಿದ್ದಾರೆ ಎಂದರು.
ಅಡ್ಡಪಲ್ಲಕ್ಕಿ ಪರಂಪರೆಗೆ, ವ್ಯಕ್ತಿಗತ ಪ್ರತಿಷ್ಠೆಗಲ್ಲ
ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಇಂದು ಭಾನುವಾರ ನಡೆಯಲಿರುವ ಅಡ್ಡಪಲ್ಲಕ್ಕಿ ಉತ್ಸವ ಸಮಾಜದ ಗೌರವಕ್ಕಾಗಿ ಹಾಗೂ ಪರಂಪರೆ ಗಾಗಿಯೇ ಹೊರತು, ವ್ಯಕ್ತಿಗತ ಪ್ರತಿಷ್ಠೆಗೆ ಅಲ್ಲ ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅಡ್ಡಪಲ್ಲಕ್ಕಿ ಮೆರವಣಿಗೆಯ ಕುರಿತು ನ್ಯಾಯಾಲಯಗಳು 1873 ಹಾಗೂ 1912ರಲ್ಲಿ ಹೊರಡಿಸಿರುವ ಎರಡು ಆದೇಶಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದೇವೆ. ಉತ್ಸವ ಹಾಗೂ ಅಡ್ಡಪಲ್ಲಕ್ಕಿ ಮೆರವಣಿಗೆಗಳಿಗೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಈ ತೀರ್ಪುಗಳಲ್ಲಿ ಇದೆ ಎಂದು ಹೇಳಿದರು. ಆದರೆ, ಆದೇಶ ಚಲಾಯಿಸಲು ನಾವು ಇಲ್ಲಿಗೆ ಬಂದಿಲ್ಲ. ಎಲ್ಲ ಜನಾಂಗದವರನ್ನು ಒಗ್ಗೂಡಿಸಿ ಕಾರ್ಯಕ್ರಮ ನೋಡಿ ಸಂತೋಷ ಪಡಿ ಎಂದು ಹೇಳುತ್ತೇವೆ ಎಂದು ಶ್ರೀಗಳು ಹೇಳಿದರು.
ಈ ಹಿಂದೆ ಸಿರಿಗೆರೆ ಮಠದ ಸ್ವಾಮೀಜಿಗಳನ್ನು ವರ್ಷವಿಡೀ ಅಡ್ಡಪಲ್ಲಕ್ಕಿ ಮೇಲೆ ಮೆರವಣಿಗೆ ಮಾಡಲಾಗುತ್ತಿತ್ತು. ಇದು ಸಮಯದ ಪೋಲು ಎಂದು ನಾವು ಭಾವಿಸಿದ್ದೆವು. ಪರಂಪರೆಯ ದೃಷ್ಟಿಯಿಂದ ವರ್ಷಕ್ಕೆ ಒಮ್ಮೆ ಮಾತ್ರ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.
ಕೊಟ್ಟೂರಿನ ಸಂಪ್ರದಾಯದ ಹಿನ್ನೆಲೆಯಲ್ಲಿ ತರಳಬಾಳು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ರದ್ದು ಮಾಡಬೇಕೆಂದು ಕಟ್ಟಿಮನೆ ದೈವಸ್ಥರು ಹಾಗೂ ಇಲ್ಲಿನ ಕೆಲ ಮುಖಂಡರು ಒತ್ತಾಯಿಸಿದ್ದರಲ್ಲದೇ, ತಹಶೀಲ್ದಾರರಿಗೆ ಮನವಿಯನ್ನೂ ಸಲ್ಲಿಸಿದ್ದರು.
ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರು ಮಠಕ್ಕಾಗಿ ಏನೂ ಸಹಾಯ ಕೇಳಿಲ್ಲ. ನೀರಾವರಿ ಹಾಗೂ ಕೆರೆ ತುಂಬಿಸುವ ಮತ್ತು ರೈತರ ಸಮಸ್ಯೆಗೆ ಪರಿಹಾರ ನೀಡುವ ವಿಚಾರಗಳಲ್ಲಿ ಬದ್ಧತೆಯಿಂದ ಕೆಲಸ ಮಾಡುವುದು ನಮಗೆಲ್ಲ ಪ್ರೇರಣೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ತರಳಬಾಳು ಹುಣ್ಣಿಮೆ ಯಾವ ಊರಿನಲ್ಲಿ ನಡೆಯುತ್ತದೆಯೋ ಆ ಊರಿನಲ್ಲಿ ಶಾಶ್ವತ ಅಭಿವೃದ್ಧಿ ಯೋಜನೆ ನಡೆಯುವುದರಲ್ಲಿ ಸಂಶಯವಿಲ್ಲ. ಮಠದ ಕಾರ್ಯಕ್ರಮ ನಡೆಸುವ ಪ್ರದೇಶದ ಜೊತೆಗೆ ಹುಣ್ಣಿಮೆ ಕಾರ್ಯಕ್ರಮ ನಡೆಯುವ ಶಾಸಕರು – ಮುಖಂಡರ ಜೊತೆ ಚರ್ಚಿಸಿ ತುರ್ತು ಅಗತ್ಯವಿರುವ ಕಾಮಗಾರಿಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಕಾರ್ಯಗತಗೊಳಿಸುತ್ತಾ ಬಂದಿದ್ದಾರೆ ಎಂದರು.
ಸಿದ್ದಗಂಗಾ ಮಠ ಶಿಕ್ಷಣ ಹಾಗೂ ದಾಸೋಹದ ಕ್ರಾಂತಿಗೆ ಕಾರಣವಾಗಿದೆ. ಶ್ರೀ ಶಿವಮೂರ್ತಿ ಸ್ವಾಮೀಜಿ ಅವರು ಅಭಿವೃದ್ಧಿ ಕ್ರಾಂತಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ತರಳಬಾಳು ಮಠದ ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ದೂರದೃಷ್ಟಿ ಹೊಂದಿದ್ದರು. ಅವರು 60ನೇ ವರ್ಷದಲ್ಲಿ ನಿವೃತ್ತಿ ಪಡೆದು ಶ್ರೀ ಶಿವಮೂರ್ತಿ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮಠದ ಉಸ್ತುವಾರಿ ಬಿಟ್ಟುಕೊಟ್ಟರು. ಉಭಯ ಸ್ವಾಮೀಜಿಗಳು ಪರಿಶ್ರಮದಿಂದ ಮಠ ಬೆಳೆಸಿದ್ದಾರೆ. ಸಿರಿಗೆರೆ ಮಠವು ಭಕ್ತರ ಮಠವೇ ಹೊರತು ಸ್ವಾಮಿಗಳ ಮಠವಲ್ಲ ಎಂದರು.
ನೀರಾವರಿ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.