ಎಪಿಎಂಸಿ ತಿದ್ದುಪಡಿ ರೈತರಿಗೆ ಮರಣ ಶಾಸನ – ಎಪಿಎಂಸಿ ಅಳಿವಿಗೆ ಕಾರಣ

ಎಪಿಎಂಸಿ ತಿದ್ದುಪಡಿ ರೈತರಿಗೆ ಮರಣ ಶಾಸನ - ಎಪಿಎಂಸಿ ಅಳಿವಿಗೆ ಕಾರಣ - Janathavaniದಾವಣಗೆರೆ, ಸೆ.26- ಕೇಂದ್ರ ಸಂಸತ್‍ನಲ್ಲಿ ಅನುಮೋದನೆ ಪಡೆದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯು ರೈತರಿಗೆ ಮರಣ ಶಾಸನ ಮತ್ತು ಎಪಿಎಂಸಿಗಳ  ಅಳಿವಿಗೆ ಕಾರಣವಾಗಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.

ಕೃಷಿ ಉತ್ಪನ್ನಗಳ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಟ್ಟು ಎಪಿಎಂಸಿಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸಿ ರೈತರನ್ನು ಜೀತದಾಳಾಗಿಸುವ ಹುನ್ನಾರ ಈ ತಿದ್ದುಪಡಿ ಹಿಂದೆ ಅಡಗಿದೆ. ರೈತರಿಗೆ ಈ ತಿದ್ದುಪಡಿಯಿಂದ ಯಾವುದೇ ರೀತಿಯಲ್ಲಿ ನ್ಯಾಯ ಸಿಗುವುದಿಲ್ಲ. ಹಣದ ಭದ್ರತೆಯಿಲ್ಲ. ಮೋಸ ಮಾಡುವ ಹುನ್ನಾರವಿದೆ ಎಂದು ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 

ಈ ಮಸೂದೆಯಿಂದಾಗುವ ತೊಂದರೆಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೈಕೋರ್ಟ್‍ನಲ್ಲಿ ಚಿಕ್ಕಬುಳ್ಳಾಪುರ ರೈತ ಡಿ.ಎಲ್. ನಾಗರಾಜ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಎಪಿಎಂಸಿ ನಿರ್ದೇಶಕರು ಮತ್ತು ಉತ್ತರ ಕರ್ನಾಟಕದಲ್ಲಿ  ರೈತರು ನ್ಯಾಯಾಂಗ ಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ರಾಜ್ಯದಲ್ಲಿ 50-60 ಎಪಿಎಂಸಿಗಳು ಮುಚ್ಚಿವೆ. ಸಂಪೂರ್ಣವಾಗಿ ಎಪಿಎಂಸಿಗಳನ್ನು ಮುಚ್ಚುವ ಷಡ್ಯಂತರ ಇದರ ಹಿಂದೆ ಅಡಗಿದೆ. ರಾಜ್ಯದ 162 ಎಪಿಎಂಸಿಗಳಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಈ ಕಾಯ್ದೆಯಿಂದಾಗಿ ಇವರು ನಿರುದ್ಯೋಗಿಗಳಾಗುತ್ತಾರೆ. 2 ಕೋಟಿ ಕೆಲಸ ನೀಡುವುದಾಗಿ ಹೇಳಿದ್ದ ಕೇಂದ್ರ ಸರಕಾರ ಈಗ ಉದ್ಯೋಗ ಕಸಿದುಕೊಳ್ಳುವ ಕೆಲಸಕ್ಕೆ ಕೈ ಹಾಕಿದೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಈ ಮಸೂದೆಗೆ ಯಾವುದೇ ಕಾರಣಕ್ಕೂ ಸಹಿ ಹಾಕಬಾರದು ಎಂದು ಮನವಿ ಮಾಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮಾತನಾಡಿ, ಎಪಿಎಂಸಿಗಳಿಗೆ ಶೇ. 6ರಷ್ಟು ಮಾತ್ರ ರೈತರು ತಮ್ಮ ಉತ್ಪನ್ನಗಳನ್ನು ತರುತ್ತಾರೆ. ಇನ್ನು ಶೇ.94 ರಷ್ಟು ರೈತರು ಮನೆ ಬಾಗಿಲಿನಲ್ಲೇ ವ್ಯಾಪಾರಿಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ರೈತರಿಗೆ ಅನುಕೂಲವಾಗಲಿದೆ ಎಂಬ ನೆಪವೊಡ್ಡಿ ದೊಡ್ಡ ದೊಡ್ಡ ಖಾಸಗಿ ಕಂಪನಿಗಳಿಗೆ ಸೆಸ್, ಶುಲ್ಕ ವಿಲ್ಲದೆ ಖರೀದಿಸಲು ಅವಕಾಶವನ್ನು ಈ ಕಾಯ್ದೆ ಮಾಡಿಕೊಡಲಿದೆ. ರೈತರು ಹಾಗೂ ಎಪಿಎಂಸಿ ಪದಾಧಿಕಾರಿಗಳು ಹಾಗೂ ವರ್ತಕರ ಅಭಿಪ್ರಾಯ ಸಂಗ್ರಹಿಸದೆ ಹಾಗೂ ವಿಸ್ತೃತವಾಗಿ ಚರ್ಚೆಗೆ ಒಳಪಡಿಸದೆ ಕಾಯ್ದೆ ಜಾರಿಗೆ ತರಲು ಹೊರಟಿರುವುದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಆಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೇವಣಸಿದ್ದಪ್ಪ, ಶಾಂತರಾಜ್, ಕೆ.ಪಿ. ಮಲ್ಲಿಕಾರ್ಜುನ್, ದೊಗ್ಗಳ್ಳಿ ಬಸವರಾಜ್, ರಾಜಣ್ಣ ಸೇರಿದಂತೆ ಇತರರು ಇದ್ದರು.

error: Content is protected !!