ಹರಪನಹಳ್ಳಿ, ಸೆ.21- ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಚಿಕಿತ್ಸೆ ವಿಳಂಬವಾಗಿ ರೋಗಿ ಸಾವನ್ನಪ್ಪಿದ್ದು, ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಆಕ್ರೋಶಗೊಂಡ ಘಟನೆ ಇಂದು ಜರುಗಿದೆ.
ಸಾರ್ವಜನಿಕ ಆಸ್ಪತ್ರೆಯ ಗೋಳನ್ನು ಕೇಳುವವರು ಇಲ್ಲದಂತಾಗಿದೆ. ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಸತಾಯಿಸುತ್ತಿರುವ ಸಿಬ್ಬಂದಿ, ಆಸ್ಪತ್ರೆಯ ಕೆಲ ವೈದ್ಯರುಗಳ ರಾಜೀನಾಮೆ, ಐದಾರು ಸಿಬ್ಬಂದಿಗೆ ಕೊರೊನಾ ಸೋಂಕು, ಉಳಿದಿರುವ ಸಿಬ್ಬಂದಿ ಹೇಗೆ, ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯ. ನಮನ್ನೇ ನಂಬಿರುವ ಕುಟುಂಬ ಸದಸ್ಯರಿದ್ದಾರೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದು, ಇದು ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪ್ರತಿದಿನದ ದೃಶ್ಯ.
ಇಂದು ಕಣಿವಿಹಳ್ಳಿ ಗ್ರಾಮದ ಸಿದ್ದಪ್ಪ (35) ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ತಮ್ಮ ಆಕ್ರೋಶವನ್ನು ವೈದ್ಯರ ಹಾಗೂ ಸಿಬ್ಬಂದಿಗಳ ಮೇಲೆ ತೋರಿಸಿ ಮಾತಿನ ಚಕಮಕಿ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಕೂಡಲೇ ಗ್ರಾಮಸ್ಥರನ್ನು ಸಂತೈಸಿದರು. ನಂತರ ಮನವರಿಕೆ ನಂತರ ಮೃತ ದೇಹವನ್ನು ಸಾಗಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳು ತಮಗೆ ದೊರೆಯಬೇಕಾದ ಚಿಕಿತ್ಸೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಬಡವರಿಗೆ ಸಹಕಾರಿಯಾಗಬೇಕಾದ ಆಸ್ಪತ್ರೆ ಅವರುಗಳ ಪ್ರಾಣಕ್ಕೆ ಮುಳವಾಗುತ್ತಿದೆ. ಮೇಲಾಧಿಕಾರಿ ಗಳು ಇನ್ನಾದರೂ ಇತ್ತ ಗಮನ ಹರಿಸಬೇಕಿದೆ.