ನವದೆಹಲಿ, ಆ. 31 – ಕಾಂಗ್ರೆಸ್ನ ಮೂವರು ಪ್ರಧಾನ ಮಂತ್ರಿಗಳ ನಂಬಿಕೆಯ ಬಂಟ ಹಾಗೂ ಪಕ್ಷದ ನಿಷ್ಠಾವಂತರಾಗಿದ್ದ ಪ್ರಣಬ್ ಮುಖರ್ಜಿ ಅವರು, ಪ್ರಧಾನ ಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಯಿಂದ ಸ್ವಲ್ಪದರಲ್ಲೇ ದೂರ ಉಳಿದರಾದರೂ, ರಾಷ್ಟ್ರಪತಿ ಭವನ ತಲುಪುವ ಮೂಲಕ ದೇಶದ ಪ್ರಥಮ ಪ್ರಜೆಯಾದರು.
ದೇಶದ 13ನೇ ರಾಷ್ಟ್ರಪತಿಯಾಗಿದ್ದ ಮುಖರ್ಜಿ, ರಾಜಕೀಯ ದಿನಗಳಲ್ಲಿ ಕಾಂಗ್ರೆಸ್ನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ದೇಶದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.
ಕೊನೆಯ ದಿನಗಳವರೆಗೂ ಜನತೆಯ ಒಡನಾಡಿಯಾಗಿದ್ದ ಮುಖರ್ಜಿ, ಆಗಸ್ಟ್ 10ರಂದು ತಮಗೆ ಕೊರೊನಾ ಸೋಂಕು ಬಂದಿರುವುದನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದರು. ಇದು ಸಾರ್ವಜನಿಕ ಜೀವನದಲ್ಲಿ ಅವರ ಕೊನೆಯ ಮಾತಾಗಿತ್ತು. ಸಮಸ್ಯೆಗಳು ಎದುರಾದಾಗಲೆಲ್ಲಾ ತ್ವರಿತವಾಗಿ ಬಗೆಹರಿಸುವ ದಕ್ಷತೆ ತೋರುತ್ತಾ ಬಂದಿದ್ದ ಮುಖರ್ಜಿ, ಸಾರ್ವಜನಿಕ ಜೀವನದಲ್ಲಿ ಎಂದೂ ನೇಪಥ್ಯಕ್ಕೆ ಸರಿದವರಲ್ಲ. ರಾಷ್ಟ್ರಪತಿ ಸ್ಥಾನ ತೊರೆದ ನಂತರವೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು. ಹಲವಾರು ಉಪನ್ಯಾಸಗಳು ಹಾಗೂ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಅವರು ಪಾಲ್ಗೊಳ್ಳುತ್ತಾ ಬಂದಿದ್ದರು.
ಪಶ್ಚಿಮ ಬಂಗಾಳದ ರಾಜಕಾರಣಿಯಾದ ಮುಖರ್ಜಿ, ಅಪಾರ ಜ್ಞಾಪಕ ಶಕ್ತಿ, ಹರಿತವಾದ ಬುದ್ಧಿವಂತಿಕೆ ಹಾಗೂ ವಿಷಯಗಳ ಕುರಿತ ಆಳವಾದ ತಿಳುವಳಿಕೆಯಿಂದ ರಾಜಕೀಯ ಸಾಧನೆಯ ಹಾದಿಯಲ್ಲಿ ಸಾಗಿದ್ದರು.
1982ರಲ್ಲಿ ಅವರು 47ನೇ ವಯಸ್ಸಿನಲ್ಲಿ ಹಣಕಾಸು ಸಚಿವರಾಗುವ ಮೂಲಕ ಅತ್ಯಂತ ಯುವ ಹಣಕಾಸು ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಂತರದ ದಿನಗಳಲ್ಲಿ ಅವರು ವಿದೇಶಾಂಗ, ರಕ್ಷಣೆ, ಹಣಕಾಸು ಹಾಗೂ ವಾಣಿಜ್ಯ ಸಚಿವಾಲಯಗಳನ್ನು ನಿರ್ವಹಿಸಿದ್ದರು. ಈ ಎಲ್ಲ ಸಚಿವಾಲಯಗಳನ್ನು ನಿಭಾಯಿಸಿದ ಮೊದಲ ರಾಷ್ಟ್ರಪತಿ ಅವರಾಗಿದ್ದರು.
ಇಂದಿರಾ ಗಾಂಧಿ, ಪಿ.ವಿ. ನರಸಿಂಹ ರಾವ್ ಹಾಗೂ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಅವರ ಜೊತೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಮುಖರ್ಜಿ ಅವರದ್ದಾಗಿದೆ.
ಪ್ರಧಾನ ಮಂತ್ರಿಯಾಗಿರದೆ ಎಂಟು ವರ್ಷ ಕಾಲ ಲೋಕಸಭೆಯ ನಾಯಕರಾದ ಕೀರ್ತಿಯೂ ಅವರದ್ದಾಗಿದೆ. ಅವರು 1980-85ರ ಅವಧಿಯಲ್ಲಿ ರಾಜ್ಯಸಭಾ ನಾಯಕರೂ ಆಗಿದ್ದರು.
1969ರಲ್ಲಿ ಬಾಂಗ್ಲಾ ಕಾಂಗ್ರೆಸ್ ಸದಸ್ಯರಾಗಿದ್ದ ಅವರು, ರಾಜ್ಯಸಭೆಗೆ ಆಯ್ಕೆಯಾಗಿದ್ದರು. ನಂತರ ಈ ಪಕ್ಷ ಕಾಂಗ್ರೆಸ್ನಲ್ಲಿ ವಿಲೀನವಾಯಿತು.
2012ರಲ್ಲಿ ರಾಷ್ಟ್ರಪತಿಯಾಗುವುದಕ್ಕೆ ಮುಂಚೆ ಅವರು 39 ಸಚಿವರ ಸಮಿತಿಗಳ ಪೈಕಿ 24ಕ್ಕೆ ಮುಖ್ಯಸ್ಥರಾಗಿದ್ದರು.
ಆರ್.ಎಸ್.ಎಸ್. ಜೊತೆ ವಿವಾದ
2018ರಲ್ಲಿ ರಾಷ್ಟ್ರಪತಿ ಸ್ಥಾನ ದಿಂದ ನಿರ್ಗಮಿಸಿದ ನಂತರ ಪ್ರಣಬ್ ಮುಖರ್ಜಿ ಅವರು ನಾಗಪುರ ದಲ್ಲಿರುವ ಆರ್.ಎಸ್.ಎಸ್. ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆರ್.ಎಸ್.ಎಸ್.ನ ಸಭೆಯ ಸಮಾರೋಪ ಭಾಷಣ ಮಾಡಿದ್ದ ಮುಖರ್ಜಿ ಅವರ ಕ್ರಮಕ್ಕೆ ರಾಜಕೀಯ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು.
ಆನಂತರದಲ್ಲಿ 2019ರಲ್ಲಿ ಅವರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಸರ್ವೋನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಕಟಿಸಿತ್ತು. ಇದೂ ಸಹ ಚರ್ಚೆಯ ವಿಷಯವಾಗಿತ್ತು.
ರಾಜಕೀಯ ವಲಯದಲ್ಲಿ ಸರ್ವಸಮ್ಮತಿ ಮೂಡಿಸುವ ವ್ಯಕ್ತಿ ಎಂದೇ ಮುಖರ್ಜಿ ಗುರುತಿಸಲ್ಪಟ್ಟಿದ್ದರು. ಹಲವಾರು ರಾಜಕೀಯ ಪಕ್ಷಗಳಲ್ಲಿ ವಿಶ್ವಾಸಾರ್ಹತೆ ಹೊಂದಿದ್ದ ಮುಖರ್ಜಿ, ಚುನಾವಣಾ ಸಮಯದಲ್ಲಿ ರಾಷ್ಟ್ರಪತಿಯಾಗುವ ಮೂಲಕ ಉಪಯುಕ್ತತೆ ಸಾಬೀತು ಪಡಿಸಿದ್ದರು.
ಸುದೀರ್ಘ ರಾಜಕೀಯ ಹಾದಿಯಲ್ಲಿ ಸಾಗಿ ಬಂದ ಮುಖರ್ಜಿ, ರಾಷ್ಟ್ರಪತಿ ಭವನವನ್ನು ಅಲಂಕರಿಸುವುದರೊಂದಿಗೆ ತಮ್ಮ ರಾಜಕೀಯ ಜೀವನ ಪೂರ್ಣಗೊಳಿಸಿದರು. ಆದರೆ, ಪ್ರಧಾನ ಮಂತ್ರಿ ಆಕಾಂಕ್ಷಿಯಾಗಿದ್ದರೂ ಆ ಹುದ್ದೆ ಕೊನೆವರೆಗೂ ಅವರಿಗೆ ಲಭಿಸಲೇ ಇಲ್ಲ.
‘ದಿ ಕೊಯಲೇಷನ್ ಎರಾ’ ಎಂಬ ಪುಸ್ತಕ ಬರೆದಿದ್ದ ಮುಖರ್ಜಿ, ತಮಗೆ ಪ್ರಧಾನ ಮಂತ್ರಿ ಹುದ್ದೆಯ ಅಪೇಕ್ಷೆ ಇದ್ದುದನ್ನು ತಿಳಿಸಿದ್ದರು. ಪ್ರಧಾನಿಯಾಗುವ ಬಯಕೆಯನ್ನು ಅವರು ಗೌಪ್ಯವಾಗೇನೂ ಇಟ್ಟಿರಲಿಲ್ಲ. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನ ಮಂತ್ರಿಯಾಗಲು ನಿರಾಕರಿಸಿದಾಗ, ಪ್ರಣಬ್ ಆ ಹುದ್ದೆಗೆ ಬರುವ ಬಯಕೆ ಹೊಂದಿದ್ದರು. ಆದರೆ, ಅಂತಿಮವಾಗಿ ಆ ಹುದ್ದೆ ಡಾ. ಮನಮೋಹನ್ ಸಿಂಗ್ ಅವರ ಪಾಲಾಯಿತು. ಒಂದು ಕಾಲದಲ್ಲಿ ತಮ್ಮ ಕಿರಿಯರಾಗಿದ್ದ ಸಿಂಗ್ ಅವರ ಸಂಪುಟಕ್ಕೆ ಸೇರ್ಪಡೆಯಾಗಲು ನಾನು ನಿರಾಕರಿಸಿದ್ದೆ ಎಂದೂ ಪ್ರಣಬ್ ಹೇಳಿದ್ದರು.
ಆದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯದ ನಂತರ ಅವರು ಸಚಿವ ಸ್ಥಾನ ಅಂಗೀಕರಿಸಿದ್ದರು. 2004ರ ನಂತರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರ ಸಂಕಷ್ಟ ಎದುರಿಸಿದ ಸಂದರ್ಭಗಳಲ್ಲೆಲ್ಲಾ ಮುಖರ್ಜಿ ನೆರವಿನ ಹಸ್ತ ಚಾಚಿದ್ದರು. ಅಂತಿಮವಾಗಿ ಅವರು ಜುಲೈ 25, 2012ರಂದು ರಾಷ್ಟ್ರಪತಿಯಾದರು.
ಡಿಸೆಂಬರ್ 11, 1935ರಂದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಿರಾತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ್ದ ಮುಖರ್ಜಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಮ್ಮ ಪೋಷಕರಿಂದ ಜೀವನದ ಆರಂಭಿಕ ಪಾಠ ಕಲಿತಿದ್ದರು. ಅವರ ತಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವು ಬಾರಿ ಜೈಲಿಗೆ ಹೋಗಿ, ಕುಟುಂಬ ಆರ್ಥಿಕ ಸಂಕಷ್ಟಕ್ಕೂ ಸಿಲುಕಿತ್ತು.
ಈ ಕಷ್ಟದ ದಿನಗಳನ್ನು ಎಂದೂ ಮರೆಯದ ಮುಖರ್ಜಿ, ಅಧಿಕಾರದ ಉನ್ನತ ಹಂತಗಳಿಗೆ ತಲುಪಿದರೂ, ದುರ್ಗಾ ಪೂಜೆ ಮಾಡಲು ತಮ್ಮ ಗ್ರಾಮಕ್ಕೆ ಬರುತ್ತಿದ್ದರು. ಸಚಿವರಾಗಿ ಹಾಗೂ ನಂತರದಲ್ಲಿ ರಾಷ್ಟ್ರಪತಿಯಾದ ನಂತರವೂ ಧೋತಿ ಉಟ್ಟು ಪೂಜೆ ನಡೆಸುವ ಚಿತ್ರಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುತ್ತಿದ್ದರು.
2015ರಲ್ಲಿ ಪತ್ನಿ ಸುವ್ರ ಮುಖರ್ಜಿ ಅವರನ್ನು ಕಳೆದುಕೊಂಡ ಮುಖರ್ಜಿ, ಇಬ್ಬರು ಮಕ್ಕಳಾದ ಇಂದ್ರಜಿತ್ ಹಾಗೂ ಅಭಿಜಿತ್ ಹಾಗೂ ಮಗಳಾದ ಷರ್ಮಿಷ್ಠ ಅವರನ್ನು ಅಗಲಿದ್ದಾರೆ.
ಐದು ಬಾರಿ ರಾಜ್ಯಸಭಾ ಸದಸ್ಯರಾಗಿ ಹಾಗೂ ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಮುಖರ್ಜಿ, ಸುದೀರ್ಘ ಕಾಲ ಸಂಸದರಾಗಿ ಕಾರ್ಯ ನಿರ್ವಹಿಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ. 1977ರಲ್ಲಿ ಮಾಲ್ಡಾ ಹಾಗೂ 1980ರಲ್ಲಿ ಬೋಲಪುರ ಲೋಕಸಭಾ ಕ್ಷೇತ್ರಗಳಲ್ಲಿ ಅವರು ಸೋಲು ಸಹ ಕಂಡಿದ್ದರು.