ಮಣ್ಣಿನಿಂದ ಅನ್ನ ತೆಗೆಯುವ ಜಾದೂಗಾರ ಕೃಷಿಕ

ಮಣ್ಣಿನಿಂದ ಅನ್ನ ತೆಗೆಯುವ ಜಾದೂಗಾರ ಕೃಷಿಕ - Janathavaniಕನ್ನಡ ನುಡಿ ಹಬ್ಬದಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್

ದಾವಣಗೆರೆ, ನ.18- ಕೃಷಿಕರು ಅದ್ಭುತ ಸಾಧಕರು. ಅವರು ಪ್ರಕೃತಿ ಮಾತೆಯ ಜೊತೆಗೆ ಮಹಾ ಅನುಸಂಧಾನ ಮಾಡಿಕೊಂಡು ಮಣ್ಣಿನಿಂದ ಅನ್ನವನ್ನು ಹೊರ ತೆಗೆಯುವಂತಹ ಜಾದೂಗಾರರು ಎಂಬ ಮಾತುಗಳನ್ನು  ಹಿರಿಯ ವಿಜ್ಞಾನಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಆಡಿದರು.

ಅವರು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಂತರ್ಜಾಲ ಕನ್ನಡ ನುಡಿ ಹಬ್ಬದ 15ನೇ ದಿನದಂದು ಕೃಷಿಯಲ್ಲಿ ಉದ್ಯಮಶೀಲತೆ ಹಾಗೂ ರೈತರ ಆದಾಯ ವೃದ್ಧಿ ವಿಷಯ ಕುರಿತು  ಉಪನ್ಯಾಸ ನೀಡಿದರು.

ಜಿಲ್ಲೆಯಲ್ಲಿ 4.21 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿಗೆ ಒಳಪಟ್ಟಿದೆ. ಇದರಲ್ಲಿ ಸುಮಾರು  ಎರಡು ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ರಾಜ್ಯದಲ್ಲಿಯೇ ದಾಖಲೆಯ ಉತ್ಪಾದನೆಯಾಗಿದೆ. ಜಿಲ್ಲೆಯಲ್ಲಿ 2.15 ಲಕ್ಷ ಕೃಷಿ ಕುಟುಂಬಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಯಾವುದೇ ಕೃಷಿ ಅಭಿವೃದ್ಧಿ ಕಾಣಬೇಕಾದರೆ ಕೃಷಿ ಬೆಳೆಗಳು, ತೋಟಗಾರಿಕಾ ಬೆಳೆಗಳು, ಅರಣ್ಯ ಬೆಳೆಗಳು, ಪಶುಸಂಗೋಪನೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಈ 5 ಸೂತ್ರಗಳನ್ನು ರೈತರು ತಮ್ಮ ಗಮನದಲ್ಲಿಟ್ಟುಕೊಳ್ಳಬೇಕು. ಆಗ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ. ಇದು ಹೇಳಿದ ಮಾತಲ್ಲ. ಕಲಿಕೆಯ ಮತ್ತು ಕಂಡಿರುವ ಸತ್ಯ. ಅನೇಕ ಕೃಷಿಕರ ಜೀವನಗಾಥೆಯಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು. ಜೊತೆಗೆ ಕೃಷಿ ಸಂಬಂಧಿತ ಅನೇಕ ಮಾಹಿತಿಗಳನ್ನು ನೀಡಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ    ನಮ್ಮದು ಕೃಷಿ ಪ್ರಧಾನ ದೇಶವಾಗಿದೆ. ರೈತನೇ ದೇಶದ ಬೆನ್ನೆಲುಬು. ಕೃಷಿ, ಉದ್ಯಮ ಹಾಗೂ ಕೈಗಾರಿಕೆಗಳಿಗೆ ಅವಿನಾಭಾವ ಸಂಬಂಧವಿದೆ ಎಂದರು. ಬಿ.ವಿ. ಕೀರ್ತಿ ಸ್ವಾಗತಿಸಿದರು. ದಾವಣಗೆರೆ ಸಪ್ತಸ್ವರ ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!