57 ಕೆರೆ ಯೋಜನೆ ತ್ವರಿತ ಕಾಮಗಾರಿಗೆ ಒತ್ತಾಯ

57 ಕೆರೆ ಯೋಜನೆ ತ್ವರಿತ ಕಾಮಗಾರಿಗೆ ಒತ್ತಾಯ - Janathavaniದಾವಣಗೆರೆ, ನ.21-  ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆ ಗಳ ದೀಟೂರು ಏತ ನೀರಾವರಿ ಯೋಜನೆಗೆ ತ್ವರಿತವಾಗಿ ನಡೆಯಬೇಕು. ಸರ್ಕಾರ ಶೀಘ್ರವೇ ಹಣ ಬಿಡುಗಡೆ ಮಾಡಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆ ತಜ್ಞರ ಸಮಿತಿ ಸದಸ್ಯ ಕೆ.ಬಿ. ಕಲ್ಲೇರುದ್ರೇಶ್ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಯೋಜನೆ ಪ್ರಕಾರ ಡಿಸೆಂಬರ್ ವೇಳೆಗೆ ಕೆರೆಗಳಿಗೆ ನೀರು ಹರಿಸಬೇಕಾಗಿತ್ತು. ಆದರೆ ಗುತ್ತಿಗೆದಾರರು ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಯೋಜನೆ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ ಎಂದರು.

ಇನ್ನೂ 20ಕಿ.ಮೀ. ರೈಸಿಂಗ್ ಲೈನ್ ಕಾಮಗಾರಿ ಬಾಕಿ ಇದೆ. ಸದ್ಯ ಭದ್ರಾ ನಾಲೆ ನೀರು ನಿಲ್ಲಿಸಲಾಗಿದ್ದು ಮತ್ತೆ ಜನವರಿ ಅಥವಾ ಫೆಬ್ರವರಿ ವೇಳೆಗೆ ಬೇಸಿಗೆ ಬೆಳೆಗೆ ನಾಲೆ ನೀರು ಹರಿಸುತ್ತಾರೆ. ಆ ವೇಳೆಗೆ ಹತ್ತು ಕಿ.ಮೀ. ಪೈಪ್ ಲೈನ್ ಕಾಮಗಾರಿ ನಡೆಸ ಬೇಕು. ಮುಂದಿನ ಮೇ-ಜೂನ್ ವೇಳೆಗೆ ಉಳಿದ 10 ಕಿ.ಮೀ. ಕಾಮಗಾರಿ ನಡೆಸಿ, ಜುಲೈ ವೇಳೆಗೆ ನೀರು ಮುಟ್ಟಿಸುವ ವ್ಯವಸ್ಥೆ ಮಾಡಬೇಕು ಎಂದರು.

ಯೋಜನೆ ಕಾಮಗಾರಿ ಬಗ್ಗೆ ನಾವಷ್ಟೇ ಗಮನ ಹರಿಸಿದರೆ ಸಾಲದು. ಸ್ಥಳೀಯ ರೈತರು, ಯುವಕರೂ ಕಾಮಗಾರಿ ಗುಣಮಟ್ಟ ಪರಿಶೀಲಿಸಿ, ಹರಿಸಿ ಯೋಜನೆ ಸಾಕಾರಗೊಳಿಸಲು ಶ್ರಮಿಸಬೇಕು. ಅದಕ್ಕಾಗಿ 40 ಸಾವಿರ ಕರ ಪತ್ರಗಳನ್ನು ಮನೆಗಳಿಗೆ ಮುಟ್ಟಿಸಲಾಗಿದೆ. 22 ಕೆರೆ ಏತ ನೀರಾವರಿ ಯೋಜನೆಯಂತೆ ಈ ಯೋಜನೆ ಯಲ್ಲೂ ಲೋಪಗಳಾಗಬಾರದು ಎಂದರು.

ಹೊಸ ಜಿಲ್ಲೆಗೆ ಸ್ವಾಗತ: ವಿಜಯ ನಗರ ಜಿಲ್ಲೆ ಸ್ಥಾಪಿಸಿ ಹೊಸ ಪೇಟೆ ಕೇಂದ್ರವನ್ನಾಗಿಸಿದ್ದರಿಂದ ಹರಪನಹಳ್ಳಿಯ ಕೆಲವು ಗ್ರಾಮಗಳ ಜನತೆಗೆ ಅನುಕೂಲವಾಗಿದ್ದು, ಈ ಕ್ರಮವನ್ನು ಸ್ವಾಗತಿಸುವುದಾಗಿ ಕಲ್ಲೇರುದ್ರೇಶ್ ಹೇಳಿದರು.

error: Content is protected !!