ಸ್ವರಾಜ್ಯ, ಸ್ವಾತಂತ್ರ್ಯ ದೊರೆತಿದ್ದು ಕಾರ್ಮಿಕರಿಂದಲೇ

1946ರಲ್ಲಿ ನಾವಿಕರು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದದ್ದು ಭಾರತಕ್ಕೆ ಸ್ವಾತಂತ್ರ್ಯ ತರಲು ಕಾರಣವಾಯಿತು 

– ವಿಜಯಭಾಸ್ಕರ್‌, ಎ.ಐ.ಟಿ.ಯು.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ

ದಾವಣಗೆರೆ, ನ. 22 – ದೇಶ ಸ್ವರಾಜ್ಯಕ್ಕಾಗಿ ಹೋರಾಟ ನಡೆಸಿದ್ದು ಹಾಗೂ  ಸ್ವಾತಂತ್ರ್ಯ ಪಡೆದಿದ್ದು ಕಾರ್ಮಿಕರ ಹೋರಾಟದಿಂದ. ಕಾಂಗ್ರೆಸ್ ಮೊದಲ ಬಾರಿಗೆ ಸ್ವರಾಜ್ಯದ ಮಾತನಾಡಿದ್ದೂ ಕಾರ್ಮಿಕರ ಹೋರಾಟದ ಫಲ ಎಂದು  ಎ.ಐ.ಟಿ.ಯು.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯಭಾಸ್ಕರ್ ಹೇಳಿದ್ದಾರೆ.

ಎಐಟಿಯುಸಿಯ ಶತಮಾನೋತ್ಸವ ಸಂದರ್ಭದಲ್ಲಿ ಜಿಲ್ಲಾ ಸಮಿತಿ ವತಿಯಿಂದ ನಗರದ ಸಿ.ಪಿ.ಐ. ಕಾಂಪ್ಲೆಕ್ಸ್‌ನಲ್ಲಿ ಇಂದು   ಆಯೋಜಿಸಲಾಗಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

1921ರಲ್ಲಿ ಎ.ಐ.ಟಿ.ಯು.ಸಿ. ಮೊದಲ ಬಾರಿಗೆ ಪೂರ್ಣ ಸ್ವರಾಜ್ ಘೋಷಣೆ ಮಾಡಿತು. ಆಗಿನ್ನೂ ಕಾಂಗ್ರೆಸ್ ಸ್ವಾತಂತ್ರ್ಯದ ಬಗ್ಗೆ ಚಿಂತನೆಯನ್ನೂ ನಡೆಸಿರಲಿಲ್ಲ. ಬ್ರಿಟಿಷರಿಂದ ಸಿಗಬಹುದಾದ ಸೌಲಭ್ಯಗಳು, ಸಣ್ಣ ಪುಟ್ಟ ಬೇಡಿಕೆಗಳಿಗಷ್ಟೇ ಸೀಮಿತವಾಗಿತ್ತು. ಆದರೆ, ಎಐಟಿಯುಸಿ ಈ ತೇಪೆದಾರಿ ಹೋರಾಟವನ್ನು ವಿರೋಧಿಸಿ, ಬ್ರಿಟಿಷರು ತೊಲಗಬೇಕು ಎಂಬ ನಿಲುವು ತಳೆದಿತ್ತು ಎಂದು ಹೇಳಿದರು.

ಕಾಂಗ್ರೆಸ್ ಸಹ ಸ್ವರಾಜ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕೆಂದು 1928ರಲ್ಲಿ ಕಾಂಗ್ರೆಸ್ ಅಧಿ ವೇಶನದಲ್ಲಿ ಎಐಟಿಯುಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ 1929 ರ ಲಾಹೋರ್ ಅಧಿವೇಶನದಲ್ಲಿ ಅನಿವಾ ರ್ಯವಾಗಿ ಪೂರ್ಣ ಸ್ವರಾಜ್ ಘೋಷಣೆ ಮಾಡಬೇ ಕಾಯಿತು ಎಂದು ವಿಜಯಭಾಸ್ಕರ್ ತಿಳಿಸಿದರು.

1942 ರ ಕ್ವಿಟ್ ಇಂಡಿಯಾ ಹೋರಾಟದ ಸಮಯದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಜೈಲು ಸೇರಿದರು. ಆನಂತರ ಕಾಂಗ್ರೆಸ್‌ನಿಂದ ಯಾವುದೇ ಪ್ರಮುಖ ಹೋರಾಟ ನಡೆಸಲು ಸಾಧ್ಯವಾಗಲಿಲ್ಲ. ಈ ನಡುವೆಯೇ, 1946ರಲ್ಲಿ 1,500ಕ್ಕೂ ಹೆಚ್ಚು ನಾವಿಕರು ಬ್ರಿಟಿಷ್ ಸರ್ಕಾರ ಧಿಕ್ಕರಿಸಿ ತ್ವಿವರ್ಣ ಧ್ವಜ, ಮುಸ್ಲಿಮ್ ಲೀಗ್ ಧ್ವಜ ಹಾಗೂ ಕಾರ್ಮಿಕರ ಕೆಂಬಾವುಟ ಹಾರಿಸಿದರು. ಇವರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾದಾಗ ಆಗಿನ ಬಾಂಬೆಯ ಲಕ್ಷಾಂತರ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಿದರು ಎಂದು ವಿಜಯಭಾಸ್ಕರ್ ಹೇಳಿದರು.

ನೌಕಾ ದಳದ ನಾವಿಕರೇ ತಿರುಗಿ ಬಿದ್ದಾಗ ದೇಶ ತಮ್ಮ ಕೈಯಲ್ಲಿ ಉಳಿಯದು ಎಂಬುದು ಬ್ರಿಟಿಷರಿಗೆ ಅರ್ಥವಾಯಿತು. ಹೀಗಾಗಿ ಅವರು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟರು. ದೇಶದ ಸ್ವರಾಜ್ಯದ ಘೋಷಣೆಯಿಂದ ಹಿಡಿದು ಸ್ವಾತಂತ್ರ್ಯ ಘೋಷಣೆಯಾಗುವವರೆಗೆ ಕಾರ್ಮಿಕರದೇ ಪ್ರಮುಖ ಪಾತ್ರ ಎಂದವರು ಪ್ರತಿಪಾದಿಸಿದರು.

ಆದರೆ, ಸ್ವಾತಂತ್ರ್ಯಾನಂತರ ಸಮಾಜವಾದಿ ವ್ಯವಸ್ಥೆ ಬರಬಾರದು ಎಂದು ಕಾಂಗ್ರೆಸ್ ಪಕ್ಷವು ಎ.ಐ.ಟಿ.ಯು.ಸಿ. ಒಡೆದು ಐ.ಎನ್.ಟಿ.ಯು.ಸಿ. ಸ್ಥಾಪಿಸಿತು. ಬಿಜೆಪಿಯು ಧರ್ಮದ ಆಧಾರದ ಮೇಲೆ ಕಾರ್ಮಿಕರಲ್ಲಿ ಒಡಕು ತಂದು ಬಿ.ಎಂ.ಎಸ್. ಸ್ಥಾಪಿಸಿತು. ಲೋಹಿಯಾ ಅವರು ಸಮಾಜವಾದಿ ಹಿನ್ನೆಲೆಯಲ್ಲಿ ಹೆಚ್.ಎಂ.ಎಸ್. ಸ್ಥಾಪಿಸಿದರು. ಈ ರೀತಿ ಕಾರ್ಮಿಕ ಸಂಘಟನೆಗಳು ಒಡೆದವು ಎಂದವರು ವಿಷಾದಿಸಿದರು.

error: Content is protected !!