ದಾವಣಗೆರೆ, ಜು.16- ಹೊನ್ನಾಳಿ ತಾಲ್ಲೂಕಿನ ರಾಂಪುರದ ಶ್ರೀ ಹಾಲಸ್ವಾಮೀಜಿ ಲಿಂಗೈಕ್ಯರಾದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಕಾರಿಯಾಗಿ ಚಿತ್ರಿಸಿರುವ ವ್ಯಕ್ತಿಯ ವಿರುದ್ಧ ರಾಷ್ಟ್ರೀಯ ಬಸವ ಸೇನೆ ಪದಾಧಿಕಾರಿಗಳು ನಗರದಲ್ಲಿ ಇಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರಲ್ಲದೇ, ಆತನ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಶ್ರೀಗಳು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜಿಲ್ಲೆಯಲ್ಲಿ ಮನೆಮಾತಾಗಿದ್ದರು. ಬುಧವಾರ ಶ್ರೀಗಳು ಲಿಂಗೈಕ್ಯರಾಗಿದ್ದು, ಈ ಬಗ್ಗೆ ವಿಶ್ವಾರಾಧ್ಯ ಸತ್ಯಂಪೇಟೆ ಎಂಬ ವ್ಯಕ್ತಿ ತನ್ನ ಫೇಸ್ ಬುಕ್‍ನಲ್ಲಿ ಶ್ರೀಗಳ ಸಾವಿನ ವಿಚಾರವಾಗಿ ಅವಹೇಳನಕಾರಿಯಾಗಿ ಸಂಭ್ರಮಿಸಿರು ವುದು ಖಂಡನೀಯ ಎಂದು ಸೇನೆಯ ರಾಜ್ಯಾಧ್ಯಕ್ಷ ಶಿವನಗೌಡ ಪಾಟೀಲ್ ತಿಳಿಸಿದ್ದಾರೆ.
ವಿಶ್ವಾರಾಧ್ಯ ಸತ್ಯಂಪೇಟೆ ತನ್ನ ಫೇಸ್‌ಬುಕ್‍ನಲ್ಲಿ ಶ್ರೀಗಳ ಭಾವಚಿತ್ರಗಳ ಜೊತೆಗೆ ವಚನಗಳನ್ನು ಬಳಸಿಕೊಂಡು ಬಸವಣ್ಣ ಮತ್ತು ಲಿಂಗೈಕ್ಯ ಶ್ರೀಗಳನ್ನು ಅವಮಾನಿಸಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತದೆ. ಹಾಗಾಗಿ, ಈ ವ್ಯಕ್ತಿಯ ವಿರುದ್ಧ ಸೈಬರ್ ಕ್ರೈಂ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಸೈಬರ್ ಕ್ರೈಂ ವಿಭಾಗಕ್ಕೆ ಮನವಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಟಿಂಕರ್ ಮಂಜಣ್ಣ, ಶ್ರೀಕಾಂತ್ ನೀಲಗುಂದ, ಗುರು ಸೋಗಿ, ಗಿರೀಶ್ ಬೇತೂರು, ಅಂಗಡಿ ನಾಗರಾಜ್, ಅಭಿಷೇಕ ಸಿ. ಎಳೆಹೊಳೆ, ಬಸವರಾಜ್ ಎಂ. ಬಾವಿ, ಮಹಾಂತೇಶ್ ಸೇರಿದಂತೆ ಇತರರು ಇದ್ದರು.