ಲಕ್ಷಣಗಳನ್ನು ಆಧರಿಸಿ ಕೊರೊನಾ ಚಿಕಿತ್ಸೆ ನೀಡಲು ಪರಿಣಿತರ ನಿಲುವು
ನವದೆಹಲಿ, ಜು. 12 – ಕೊರೊನಾ ಸೋಂಕಿದ್ದರೂ ಸಹ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬರುವ ಸಾಧ್ಯತೆ ಇದೆ ಎಂದು ಹೇಳಿರುವ ಪರಿಣಿತರು, ವರದಿ ಖಚಿತವಾಗು ವವರೆಗೆ ಕಾಯದೇ ಕೊರೊನಾ ಲಕ್ಷಣ ಇರುವ ವರಿಗೆ ಚಿಕಿತ್ಸೆ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಲವಾರು ಪ್ರಕರಣಗಳಲ್ಲಿ ಕೊರೊನಾ ಲಕ್ಷಣಗಳು ತೀವ್ರವಾಗಿದ್ದರೂ ಸಹ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿವೆ. ನಂತರದಲ್ಲಿ ಮತ್ತೆ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ.
ಕೊರೊನಾ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ಮಾಡಲು ಕೇವಲ ಆರ್.ಟಿ. – ಪಿ.ಸಿ.ಆರ್. ಫಲಿತಾಂಶವನ್ನು ಅವಲಂಬಿಸಬಾರದು. ಇದರ ಸಂವೇದನೆ ಕೇವಲ ಶೇ.70ರಷ್ಟಾಗಿದೆ. ಚಿಕಿತ್ಸೆಗಾಗಿ ಚಿಕಿತ್ಸಾತ್ಮಕ ಲಕ್ಷಣಗಳು ಹಾಗೂ ಸಿ.ಟಿ.ಸ್ಕ್ಯಾನ್ ವರದಿಗಳನ್ನು ಅವಲಂಬಿಸಬೇಕು ಎಂಬ ಬಗ್ಗೆ ಸಾಮಾನ್ಯ ಅಭಿಪ್ರಾಯ ಮೂಡಿ ಬರುತ್ತಿದೆ ಎಂದು ಸಫ್ದರ್ಜಂಗ್ ಆಸ್ಪತ್ರೆಯ ಪಲ್ಮನರಿ ವಿಭಾಗದ ವೈದ್ಯರಾದ ಡಾ. ನೀರಜ್ ಗುಪ್ತ ಹೇಳಿದ್ದಾರೆ.
ರಾಪಿಡ್ ಆಂಟಿಜನ್ ಪರೀಕ್ಷೆಯ ಸಂವೇದ ನಾಶೀಲತೆ ಸಹ ಕೇವಲ ಶೇ.40ರಷ್ಟಾಗಿದೆ. ಈ ಪರೀಕ್ಷೆಗಳನ್ನಷ್ಟೇ ನಾವು ಅವಲಂಬಿಸಿದರೆ ಹಲವಾರು ರೋಗಿಗಳಿಗೆ ಚಿಕಿತ್ಸೆ ಸಿಗುವುದಿಲ್ಲ ಎಂದು ಡಾ. ಗುಪ್ತ ತಿಳಿಸಿದ್ದಾರೆ.
ಆಂಟಿಬಡಿ ಟೆಸ್ಟ್ಗಳ ಸಂವೇದನಾಶೀಲತೆ ಶೇ.90ರಷ್ಟಾಗಿದೆ. ಆದರೆ, ಅವರು ಎಸ್.ಎ.ಆರ್.ಎಸ್. – ಸಿ.ಒ.ವಿ.2 ಹೊಂದಿದ್ದರೆ ಮಾತ್ರ ಟೆಸ್ಟ್ ಖಚಿತವಾಗುತ್ತದೆ. ಆರಂಭಿಕ ಹಂತದಲ್ಲಿ ರೋಗ ಗುರುತಿಸಲು ಸಾಧ್ಯವಾಗುವುದಿಲ್ಲ.
ಕೊರೊನಾ ಸೋಂಕಿನ ಪ್ರಮಾಣ ತೀವ್ರಗೊಳ್ಳುವುದನ್ನು ತಡೆಯುವುದರತ್ತ ಚಿಕಿತ್ಸೆ ಕೇಂದ್ರೀಕೃತವಾಗಿರಬೇಕಿದೆ. ಕೇವಲ ಟೆಸ್ಟ್ ವರದಿಗಳನ್ನು ಅವಲಂಬಿಸುವಂತಿಲ್ಲ. ನಾವು ರೋಗ ಲಕ್ಷಣಗಳನ್ನೂ ಪರಿಗಣಿಸಬೇಕಾಗುತ್ತದೆ ಎಂದವರು ವಿವರಿಸಿದ್ದಾರೆ.
ನೆಗೆಟಿವ್ ವರದಿಯಿಂದ ಪರಿಹಾರವೂ ಇಲ್ಲ : ಕೊರೊನಾದಿಂದ ಮೃತಪಟ್ಟರೂ ವಾರಿಯರ್ ಕುಟುಂಬಗಳಿಗೆ ನೆರವಿಲ್ಲ
ನವದೆಹಲಿ, ಜು. 12 –ಆರೋಗ್ಯ ಸೇವೆಯ ಮುಂಚೂಣಿಯಲ್ಲಿರುವ ಕಾರ್ಯಕರ್ತರು ಸಾವನ್ನಪ್ಪಿದಾಗ ಕೆಲವೊಮ್ಮೆ ಅವರ ವರದಿ ನೆಗೆಟಿವ್ ಬಂದಿರುತ್ತದೆ. ಇದರಿಂದಾಗಿ ಅವರು ಪರಿಹಾರದಿಂದ ವಂಚಿತರಾಗುತ್ತಾರೆ ಎಂದು ಎಐಐಎಂಎಸ್ ನಿವಾಸಿ ವೈದ್ಯರ ಒಕ್ಕೂಟ ಇತ್ತೀಚೆಗೆ ಐ.ಸಿ.ಎಂ.ಆರ್.ಗೆ ಪತ್ರ ಬರೆದಿತ್ತು.
ಮಹಾಮಾರಿಯ ಸಂದರ್ಭದಲ್ಲಿ ಅನಿರೀ ಕ್ಷಿತ ಹಾಗೂ ವಿವರಿಸಲಾಗದ ಸಾವುಗಳ ಬಗ್ಗೆ ವೃತ್ತಿಪರ ತನಿಖೆ ನಡೆಸಲು ಐ.ಸಿ.ಎಂ.ಆರ್. ಪರಿಣಿತರ ಸಮಿತಿ ರಚಿಸಬೇಕೆಂದು ಒಕ್ಕೂಟ ಒತ್ತಾಯಿಸಿತ್ತು.
ಯಾವುದೇ ಪರೀಕ್ಷೆಯೂ ಶೇ.100ರಷ್ಟು ಖಚಿತವಲ್ಲ. ಹೀಗಾಗಿ ಕೊರೊನಾ ಹೋರಾಟ ದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ನೆರವಾಗಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು.
ಇತ್ತೀಚೆಗೆ ದೆಹಲಿಯ ಮೌಲಾನಾ ಆಜಾದ್ ದಂತ ವೈದ್ಯಕೀಯ ಸಂಸ್ಥೆಯ ಕಿರಿಯ ನಿವಾಸಿ ವೈದ್ಯರಾದ ಡಾ. ಅಭಿಷೇಕ್ ಭಯಾನಾ ಅವರು ಸಾವನ್ನಪ್ಪಿದ್ದರು. ಅವರಲ್ಲಿ ಕೊರೊನಾ ರೀತಿಯ ಲಕ್ಷಣಗಳಿದ್ದವು. ಅವರ ಮರಣೋತ್ತರ ಪರೀಕ್ಷೆಯಲ್ಲೂ ಕೊರಾನಾದ ಇಂಗಿತ ವ್ಯಕ್ತವಾಗಿತ್ತು.ಆದರೆ, ಅವರಿಗೆ ನಡೆಸಲಾದ ಪರೀಕ್ಷೆಗಳು ನೆಗೆಟಿವ್ ಬಂದಿದ್ದವು ಎಂದು ಎಐಐಎಂಎಸ್ನ ನಿವಾಸಿ ವೈದ್ಯರ ಒಕ್ಕೂಟ ಹೇಳಿದೆ.
ಕೊರೊನಾ ವಾರಿಯರ್ಗಳಿಗೆ ಪರಿಹಾರವನ್ನು ನಿರ್ಧರಿಸುವ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೇವಲ ಮೈಕ್ರೋಬಯಾಲಜಿಕಲ್ ವರದಿಗಳನ್ನು ಅವಲಂಬಿಸಬಾರದು ಎಂದು ಎಐಐಎಂಎಸ್ನ ಗೆರಿಯಾಟ್ರಿಕ್ ಮೆಡಿಸಿನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ವಿಜಯ್ ಗುರ್ಜಾರ್ ಹೇಳಿದ್ದಾರೆ.
ಚಿಕಿತ್ಸೆಯ ಇತರೆ ಮಾಹಿತಿಗಳನ್ನು ಕಡೆಗಣಿಸಬಾರದು. ಕೊರೊನಾ ಬಗ್ಗೆ ಸಮಗ್ರ ನಿಲುವು ತಳೆಯಬೇಕು ಎಂದೂ ಅವರು ತಿಳಿಸಿದ್ದಾರೆ.
ಎಐಐಎಂಎಸ್ನ ಗೆರಿಯಾಟ್ರಿಕ್ ಮೆಡಿಸಿನ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ವಿಜಯ್ ಗುರ್ಜಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, ರೋಗಿಗಳಲ್ಲಿ ಕೊರೊನಾ ಲಕ್ಷಣವಿದ್ದ ಕೆಲ ಪ್ರಕರಣಗಳಲ್ಲಿ ಮೂರು ಹಾಗೂ ನಾಲ್ಕು ಬಾರಿ ಆರ್.ಟಿ. – ಪಿ.ಸಿ.ಆರ್. ಪರೀಕ್ಷೆ ನಡೆಸಿದರೂ ಸಹ ನೆಗೆಟಿವ್ ಬಂದಿರುವ ಪ್ರಕರಣಗಳಿವೆ. ಸಿ.ಟಿ. ಸ್ಕ್ಯಾನ್ ನಡೆಸಿದಾಗ ಅಟಿಪಿಕಲ್ ನ್ಯುಮೋನಿಯಾದ ಸುಳಿವು ಸಿಗುತ್ತದೆ. ಇದು ಕೊರೊನಾದ ಹೆಚ್ಚಿನ ಸಾಧ್ಯತೆ ತೋರಿಸುತ್ತದೆ ಎಂದಿದ್ದಾರೆ.
ನಂತರದಲ್ಲಿ ಅವರ ಪರೀಕ್ಷೆ ನಡೆಸಿದಾಗ ಆಂಟಿಬಡಿಗಳು ಕಂಡು ಬಂದಿರುತ್ತದೆ. ಇದು ಕೊರೊನಾ ವೈರಸ್ ಸೋಂಕನ್ನು ಖಚಿತ ಪಡಿಸುತ್ತದೆ. ಅವರಿಗೆ ಸೋಂಕಿದ್ದರೂ ಪಿ.ಟಿ.-ಪಿ.ಸಿ.ಆರ್. ಪರೀಕ್ಷೆಗಳಲ್ಲಿ ನೆಗೆಟಿವ್ ಬಂದಿರುತ್ತದೆ ಎಂದವರು ತಿಳಿಸಿದ್ದಾರೆ.
ಹೀಗಾಗಿ ರೋಗಿಗಳಲ್ಲಿ ಲಕ್ಷಣಗಳಿದ್ದರೆ ಹಾಗೂ ಅವರಲ್ಲಿ ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೊರೊನಾ ಮಾದರಿಯಲ್ಲೇ ಚಿಕಿತ್ಸೆ ನೀಡಬೇಕು. ಪರೀಕ್ಷೆ ಖಚಿತವಾಗುವವರೆಗೆ ಕಾಯಬಾರದು ಎಂದು ಡಾ. ಗುರ್ಜಾರ್ ಹೇಳಿದ್ದಾರೆ.
ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ನಿಖಿಲ್ ಮೋದಿ ಅವರು ಈ ಬಗ್ಗೆ ಮಾತನಾಡಿದ್ದು, ಗಂಟಲು ಹಾಗೂ ಮೂಗಿನಿಂದ ಪರೀಕ್ಷಾ ಮಾದರಿಗಳನ್ನು ಪಡೆಯುವಾಗ ತಪ್ಪು ಮಾಡುವುದೇ ನೆಗೆಟಿವ್ ಬರಲು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.
ಸರಿಯಾದ ರೀತಿಯಲ್ಲಿ ಮಾದರಿಯನ್ನೇ ಸಂಗ್ರಹಿಸಿಲ್ಲ ಎಂದ ಮೇಲೆ ಫಲಿತಾಂಶ ತಪ್ಪಾಗಿ ಬರುತ್ತದೆ. ಅಲ್ಲದೇ, ವೈರಸ್ ಪ್ರಮಾಣವೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ವೈರಸ್ ಪ್ರಮಾಣ ಕಡಿಮೆ ಇದ್ದರೆ ರೋಗಿಯಲ್ಲಿಸೋಂಕಿದ್ದರೂ ಫಲಿತಾಂಶ ನೆಗೆಟಿವ್ ಬರುತ್ತದೆ ಎಂದು ಡಾ. ಮೋದಿ ಹೇಳಿದ್ದಾರೆ.
ರೋಗ ಲಕ್ಷಣಗಳು ಕೊರೊನಾ ಕಡೆ ಇಂಗಿತ ವ್ಯಕ್ತಪಡಿಸುತ್ತಿದ್ದು, ಆರ್.ಟಿ. – ಪಿ.ಸಿ.ಆರ್. ಪರೀಕ್ಷೆ ಪದೇ ಪದೇ ನೆಗೆಟಿವ್ ಬಂದ ಸಂದರ್ಭದಲ್ಲಿ ಶ್ವಾಸಕೋಶಗಳ ಸಿ.ಟಿ. ಸ್ಕ್ಯಾನ್ ಸರಿಯಾದ ತಪಾಸಣೆಗೆ ಉಪಯುಕ್ತವಾಗುತ್ತದೆ ಎಂದವರು ವಿವರಿಸಿದ್ದಾರೆ