ಪಾಸಿಟಿವ್ ವರದಿಯಾದರೆ ಸಂಬಂಧಿಸಿದ ಆಸ್ಪತ್ರೆಗಳೇ ಆಂಬ್ಯುಲೆನ್ಸ್ ಕಳುಹಿಸಬೇಕು

ದಾವಣಗೆರೆ, ಜು.12-  ಖಾಸಗಿ ಆಸ್ಪತ್ರೆಗಳಲ್ಲಿದ್ದ ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದರೆ ಆ ಆಸ್ಪತ್ರೆಯವರೇ ಆಂಬ್ಯುಲೆನ್ಸ್ ಕಳುಹಿಸಬೇಕು. ನಂತರ ಅದರ ವೆಚ್ಚವನ್ನು ಭರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಮುಖ್ಯಮಂತ್ರಿಗಳ ವಿಡಿಯೋ ಸಂವಾದದ ಹಿನ್ನೆಲೆಯಲ್ಲಿ  ಜಿಲ್ಲಾಧಿಕಾರಿ ಕಛೇರಿ ಸಂಭಾಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲ ಖಾಸಗಿ ಆಸ್ವತ್ರೆಯವರು ಪಾಸಿಟಿವ್ ವರದಿಯಾದಾಗ ಸಿ.ಜಿ. ಆಸ್ವತ್ರೆಗೆ ಕರೆ ಮಾಡಿ ಆಂಬ್ಯುಲೆನ್ಸ್ ಕಳುಹಿಸಲು ಹೇಳುತ್ತಾರೆ ಎಂದು ಡಿಹೆಚ್‍ಒ ಅವರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿಗಳು ಮೇಲಿನಂತೆ ಪ್ರತಿಕ್ರಿಯಿಸಿ, ಶೀಘ್ರವೇ ಖಾಸಗಿ ಆಸ್ಪತ್ರೆಗಳಿಗೆ ಆದೇಶಿಸಲಾಗು ವುದು ಎಂದರು.

ತಾಲ್ಲೂಕು ಕೇಂದ್ರಗಳಲ್ಲಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ವ್ಯವಸ್ಥೆ, ವೆಂಟಿಲೇಟರ್ ಹಾಗು ಹೆಚ್ಚು ಕೇಸುಗಳು ಬಂದರೆ ಹೇಗೆ ಸಿದ್ದವಿರಬೇಕೆಂಬುದರ ಬಗ್ಗೆ ತಿಳಿಸಿ.  ಕೆಲ ತಾಲ್ಲೂಕು ಕೇಂದ್ರಗಳಲ್ಲಿ ನೋಂದಣಿ ಇಲ್ಲದ ವೈದ್ಯರುಗಳು ಚಿಕಿತ್ಸೆ ನೀಡುತ್ತಿದ್ದು ಕೊರೊನಾ ಪಾಸಿಟಿವ್ ಪ್ರಕರಣಗಳ ಮಾಹಿತಿಯನ್ನು ನೀಡುತ್ತಿಲ್ಲ. ಅಂತಹವರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಒಂದು ಅಂದಾಜಿನಂತೆ ನೂರು ಪಾಸಿಟಿವ್ ಪ್ರಕರಣಗಳಿಗೆ ಒಂದು ಸಾವು ಸಂಭವಿಸಬಹುದಾಗಿದೆ. ನಮ್ಮಲ್ಲಿ ಆ ಪ್ರಮಾಣ ಸ್ವಲ್ಪ ಹೆಚ್ಚಿದೆ. ಈ ಪ್ರಮಾಣ ತಗ್ಗಿಸಲು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ಸಾವಿನ ಪ್ರಮಾಣ ತಗ್ಗಿಸಲು ಶ್ರಮಿಸಬೇಕಾಗಿದೆ ಎಂದರು.

ಕಂಟೈನ್‍ಮೆಂಟ್ ಜೋನ್, ಬಫರ್
ಜೋನ್ ಸೇರಿದಂತೆ ಉಳಿದ ಪ್ರದೇಶಗಳಲ್ಲಿ
ಹೆಚ್ಚಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸುವ ಮೂಲಕ ಪಾಸಿಟಿವ್ ಇರುವವರನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕು. ಸೋಂಕು ಲಕ್ಷಣ ಇರುವವರು ತಡಮಾಡದೆ ಆಸ್ವತ್ರೆಗೆ ಬಂದರೆ ಅವರು ಎಂತಹದೆ ಕಠಿಣ ಪರಿಸ್ಥಿತಿಯಲ್ಲಿದ್ದರೂ ಶೀಘ್ರ ಗುಣಪಡಿಸಲು ನೆರವಾಗುತ್ತದೆ ಎಂದರು.

  ಪ್ರತಿ ವಾರ್ಡ್‌ಗಳಲ್ಲಿ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚಿಸಲಾಗಿದೆ. ಅದರಲ್ಲಿ  ಅಲ್ಲಿನ ಮುಖಂಡರು, ಜನಪ್ರತಿನಿಧಿಗಳು  ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದರೆ  ಯಶಸ್ಸು ಸಾಧ್ಯ. ಸಂಬಂಧಿಸಿದ ವಾರ್ಡ್‍ನ ಅಧಿಕಾರಿ  ಇದೆಲ್ಲವನ್ನೂ ಸರಿಯಾಗಿ ಪಾಲೋ ಅಪ್ ಮಾಡಬೇಕು ಮತ್ತು ವಾರ್ಡ್ ಮಟ್ಟದಲ್ಲಿ ರಚಿಸಿರುವ ಸಮಿತಿಯಲ್ಲಿರುವ ಎಲ್ಲಾ ಸದ್ಯಸ್ಯರಿಗೆ ಸರಿಯಾದ ತರಬೇತಿ ನೀಡಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಡಬೇಕೆಂದರು.

ಜಿ.ಪಂ. ಸಿಇಒ ಪದ್ಮ ಬಸವಂತಪ್ಪ,   ಎಸ್ಪಿ ಹನುಮಂತರಾಯ,  ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ,  ಡಿಹೆಚ್‌ಒ ರಾಘವೇಂದ್ರ ಸ್ವಾಮಿ, ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಾ ನಟರಾಜ್, ಡಾ.ಕಾಳಪ್ಪ ಹಾಗೂ ಇತರರು ಸಭೆಯಲ್ಲಿದ್ದರು.

error: Content is protected !!