ಭದ್ರಾಗೆ 13 ಸಾವಿರ ಕ್ಯೂಸೆಕ್ಸ್ ಒಳ ಹರಿವು

ಶಿವಮೊಗ್ಗ, ಜು.8- ಮಲೆನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು, ತುಂಗಾ  ಜಲಾಶಯಕ್ಕೆ 25 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿರುವ ಕಾರಣ ಅಷ್ಟೇ ಪ್ರಮಾಣದ ನೀರನ್ನು ತುಂಗಾ ನದಿಗೆ ಬಿಡಲಾಗಿದೆ.

ತುಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಶಿವಮೊಗ್ಗ ನಗರದ ಕೋರ್ಪಲಯ್ಯನ ಛತ್ರದ ಬಳಿ ಇರುವ ಐತಿಹಾಸಿಕ ಮಂಟಪ ಮುಳುಗಲು 2 ಅಡಿ ಮಾತ್ರ ಬಾಕಿ ಇದೆ. ತುಂಗಾ ನೀರಿನಿಂದಾಗಿ ನಂದಿಗುಡಿ ಬಳಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು
ಹೆಚ್ಚಳವಾಗಿದೆ. ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಉಪ ತಹಶೀಲ್ದಾರ್‌ ರವಿ ಮನವಿ ಮಾಡಿದ್ದಾರೆ.

ಭದ್ರಾ ಡ್ಯಾಂ : ಭದ್ರಾ ಜಲಾನಯನ ಪ್ರದೇಶದಲ್ಲೂ ಮಳೆ ಜೋರಾಗುತ್ತಿದ್ದು, ಮಂಗಳವಾರ 8753 ಕ್ಯೂಸೆಕ್ಸ್ ಇದ್ದ ನೀರಿನ ಒಳ ಹರಿವು ಬುಧವಾರ ಸಂಜೆ 13 ಸಾವಿರ ಕ್ಯೂಸೆಕ್ಸ್‌ಗೆ ಏರಿಕೆ ಕಂಡಿದೆ. ಜಲಾಶಯದ ನೀರಿನ ಮಟ್ಟ 145 ಅಡಿ ಆಗಿದೆ. ಜಲಾಶಯ ಭರ್ತಿಗೆ ಇನ್ನೂ 41 ಅಡಿ ಬಾಕಿ ಇದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 128 ಅಡಿ 4 ಇಂಚು ನೀರಿತ್ತು.

error: Content is protected !!