ಸೊರಗಿದ ಸಹಕಾರಿ ಸೊಸೈಟಿಗಳು

ಅನ್‌ಲಾಕ್‌ ಆದರೂ ಸಹಕಾರಿ ಸೊಸೈಟಿಗಳಿಗಿಲ್ಲ ಶುಕ್ರದೆಸೆ

ದಾವಣಗೆರೆ, ಜೂ. 10 – ಕೊರೊನಾ ಲಾಕ್‌ಡೌನ್‌ ಬಡವರ ಸಣ್ಣ ಉಳಿತಾಯ ಹಾಗೂ ಸಾಲಕ್ಕೆ ನೆರವಾಗುತ್ತಿದ್ದ ಸಹಕಾರಿ ಸೊಸೈಟಿಗಳು ಸೊರಗುವಂತೆ ಮಾಡಿದೆ. ಲಾಕ್‌ಡೌನ್‌ಗೆ ಮುಗಿದು §ಅನ್‌ಲಾಕ್‌’ ಆರಂಭವಾದರೂ ಸೊಸೈಟಿಗಳಿಗೆ ಇನ್ನೂ ಶುಕ್ರದೆಸೆ ಆರಂಭವಾಗಿಲ್ಲ.

ಬ್ಯಾಂಕುಗಳು ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಯ ನಿರ್ವಹಣೆಗೆ ಅನುಮತಿ ನೀಡಲಾಗಿತ್ತಾದರೂ, ಸೊಸೈಟಿಗಳು ಬಹುತೇಕ ಎರಡು ತಿಂಗಳ ಕಾಲ ಸಂಪೂರ್ಣ ವಹಿವಾಟು ಬಂದ್ ಮಾಡಿದ್ದವು. ಆನಂತರ ಸೊಸೈಟಿಗಳ ಕಾರ್ಯ ನಿರ್ವಹಣೆಗೆ ಅವಕಾಶ ನೀಡಲಾಗಿದೆಯಾದರೂ, ಹೆಚ್ಚು ಉತ್ಸಾಹ ಕಂಡು ಬರುತ್ತಿಲ್ಲ.

ಆರ್ಥಿಕತೆ ತೆರವುಗೊಳಿಸಲಾಗಿದೆಯಾದರೂ, ಜನರು ಇನ್ನೂ ಮೊದಲಿನ ಸ್ಥಿತಿಗೆ ಮರಳಿಲ್ಲ. ಹೀಗಾಗಿ ಮೇ ಹಾಗೂ ಜೂನ್ ತಿಂಗಳಲ್ಲಿ ಸಹಕಾರಿ ಸೊಸೈಟಿಗಳ ಸಾಲ ವಸೂಲಾತಿ ಪ್ರಮಾಣ ಕಡಿಮೆಯೇ ಆಗಿದೆ. ಏಪ್ರಿಲ್ ತಿಂಗಳಿಡೀ ಸಾಲ ವಸೂಲಾತಿ ಇರಲೇ ಇಲ್ಲ. ಮೇ ಹಾಗೂ ಜೂನ್ ತಿಂಗಳಲ್ಲಿ ಶೇ.20ರಷ್ಟು ಜನರು ಮಾತ್ರ ಸಾಲ ಮರು ಪಾವತಿ ಮಾಡಿದ್ದಾರೆ ಎಂದು ನಗರದ ಶ್ರೀ ಶಶಿ ವಿವಿಧೋದ್ದೇಶ ಸಹಕಾರ ಸಂಘದ ಸಿಇಒ ಮುರಳಿ ಮೋಹನ್ ತಿಳಿಸಿದ್ದಾರೆ.

ಸಾಲ ವಸೂಲಿ ಪೂರ್ಣ ಕಡಿಮೆ, ಹಣ ಬಿಡಿಸುವವರೇ ಹೆಚ್ಚು, ಪಿಗ್ಮಿ ಕಟ್ಟುವವರೂ ಕಡಿಮೆ.

ಸರ್ಕಾರ ಸಹ ಸಾಲ ವಸೂಲಾತಿಗೆ ಒತ್ತಡ ಹೇರದಂತೆ ತಿಳಿಸಿದೆ. ಅಲ್ಲದೇ ಸಾಲ ಮರು ಪಾವತಿಗೆ ಆರು ತಿಂಗಳ ವರೆಗೆ ಗಡುವು ನೀಡಲಾಗಿದೆ. ಹೀಗಾಗಿ ಸಾಲ ವಸೂಲಾತಿ ಬಹಳಷ್ಟು ಕಡಿಮೆಯಾಗಿದೆ ಎಂದವರು ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಆದಾಯವಿಲ್ಲದೇ ಸಾಕಷ್ಟು ಠೇವಣಿದಾರರು ತಾವು ಉಳಿಸಿಟ್ಟ ಹಣವನ್ನು ಬಿಡಿಸಿಕೊಂಡಿದ್ದಾರೆ. ಸೊಸೈಟಿಗಳಲ್ಲಿ ಸಾಲ ವಸೂಲಿಗಿಂತ ಹಣ ಬಿಡಿಸಿಕೊಡುವುದೇ ಹೆಚ್ಚಾಗಿದೆ ಎಂದವರು ಹೇಳಿದ್ದಾರೆ. ಪಿಗ್ಮಿ ಮೂಲಕ ಜನರು ಉಳಿತಾಯ ಮಾಡುವ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಸೊಸೈಟಿ ನಿಯಮಗಳೂ ಸಹ ಪಿಗ್ಮಿಗೆ ಪೂರಕವಾಗಿಲ್ಲ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಿಗ್ಮಿ ಸಂಗ್ರಹ ಶೇ.90ರವರೆಗೂ ಕಡಿಮೆಯಾಗಿದೆ ಎಂದು ಪಿಗ್ಮಿ ಸಂಗ್ರಹಕಾರ ಸುರೇಶ್ ತಿಳಿಸಿದ್ದಾರೆ.

ಪಿಗ್ಮಿ ಕಟ್ಟಲು ಷೇರುದಾರರು ಆಗಿರಲೇಬೇಕು ಎಂಬ ನಿಯಮವಿದೆ. ಇದು ಸಣ್ಣ ಉಳಿತಾಯ ಮಾಡುವವರಿಗೆ ತೊಂದರೆಯಾಗುತ್ತಿದೆ ಎಂದವರು ಹೇಳಿದ್ದಾರೆ.

ಆರ್ಥಿಕತೆಗೇ ಬ್ರೇಕ್ ಬಿದ್ದ ಕಾರಣ ಎಲ್ಲ ವಲಯಗಳಲ್ಲೂ ಹಿನ್ನಡೆಯಾಗಿದೆ. ಇದಕ್ಕೆ ಸಹಕಾರ ವಲಯವೂ ಹೊರತಾಗಿಲ್ಲ. ಬಹುತೇಕ ಸೊಸೈಟಿಗಳು ಇದೇ ಸವಾಲುಗಳನ್ನು ಎದುರಿಸುತ್ತಿವೆ ಎಂದು ತೆರಿಗೆ ಸಲಹೆಗಾರ ಅಣ್ಣಪ್ಪ ಕೆ. ಸುರ್ವೆ ಹೇಳಿದ್ದಾರೆ.

ಸಾಲ ಮರು ಪಾವತಿಗೆ ಒತ್ತಡ ಹೇರಬಾರದು ಎಂದು ಸರ್ಕಾರ ತಿಳಿಸಿದೆ. ಆದರೆ, ಸೊಸೈಟಿಗಳ ನಿರ್ವಹಣೆಗೆ ಮಾಸಿಕ ವೆಚ್ಚ ಆಗೇ ಆಗುತ್ತಿದೆ. ಉದ್ಯೋಗಿಗಳಿಗೆ ವೇತನ ನೀಡಬೇಕಿದೆ. ಇದೆಲ್ಲವೂ ಈಗ ಹೊರೆಯಾಗಿ ಪರಿಣಮಿಸುತ್ತಿದೆ ಎಂದು ಸಹಕಾರಿ ವಲಯದವರು ಹೇಳುತ್ತಿದ್ದಾರೆ.

ಈ ನಡುವೆಯೇ, ಲಾಕ್‌ಡೌನ್ ನ್ಯಾಯಾಲಯಗಳ ಕಾರ್ಯ ನಿರ್ವಹಣೆಯ ಮೇಲೂ ಪರಿಣಾಮ ಬೀರಿದೆ. ಸಾಲ ವಸೂಲಾತಿಗಾಗಿ ಸೊಸೈಟಿಗಳು ದಾಖಲಿಸಿದ್ದ ಪ್ರಕರಣಗಳು ವಿಳಂಬವಾಗುತ್ತಿವೆ. ಇದೂ ಸಹ ಸಾಲ ವಸೂಲಾತಿಗೆ ಹಿನ್ನಡೆಯಾಗಲು ಕಾರಣವಾಗಲಿದೆ ಎಂಬ ಕಳವಳ ವ್ಯಕ್ತವಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಸಣ್ಣ ಉದ್ಯಮಗಳಿಗೆ ನೀಡಿರುವ ನೆರವಿನ ರೀತಿಯಲ್ಲೇ ಸೊಸೈಟಿಗಳಿಗೂ ಸಹ ನೆರವು ಕಲ್ಪಿಸಬೇಕಿದೆ. ಅವುಗಳ ಸುಗಮ ಕಾರ್ಯ ನಿರ್ವಹಣೆಯಿಂದ ಸಣ್ಣ ಉಳಿತಾಯ ಮಾಡುವವರು ಹಾಗೂ ಬಡವರಿಗೆ ನೆರವಾಗಲಿದೆ ಎಂಬ ಆಶಯ ಕೋ ಆಪರೇಟಿವ್ ಸೊಸೈಟಿಗಳದ್ದಾಗಿದೆ.

error: Content is protected !!