ಮರೆಯಾದ ಮಾನವೀಯತೆ

ಕೇರಳ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ರಾಜ್ಯ. ಕೇರಳ ರಾಜ್ಯ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಹೆಚ್ಚಿನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಜನರು ಕಲೆ, ಸಾಹಿತ್ಯ, ಸಂಸ್ಕೃತಿ, ನಾಗರೀಕತೆ, ಸಂಪ್ರದಾಯ, ಭಾವೈಕ್ಯತೆ, ಶೌರ್ಯ – ಸಾಹಸ, ದೇಶಪ್ರೇಮ, ಸಾಮಾಜಿಕ ಬದ್ಧತೆ, ಸ್ವಾಭಿಮಾನ ಹಾಗೂ ಭಾಷಾಭಿಮಾನವನ್ನು ಮೈಗೂಡಿಸಿಕೊಂಡು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಮೆರೆದವರು ಎಂದರೆ ಅತಿಶಯೋಕ್ತಿ ಎನಿಸಲಾರದು. ಹಲವಾರು ವಿದ್ವಾಂಸರು, ವಿಜ್ಞಾನಿಗಳು, ಸ್ವಾತಂತ್ರ್ಯ ಯೋಧರು, ಶ್ರೇಷ್ಠ ಕವಿಗಳು, ಬುದ್ಧಿ ಜೀವಿಗಳು ಕೇರಳದಲ್ಲಿ ಜನಿಸಿರುವುದು ಗಮನಾರ್ಹವಾದ ವಿಷಯ.

ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ರಾಜ್ಯವಾಗಿರುವ ಕೇರಳದ ಮಲ್ಲಪುರಂ ಜಿಲ್ಲೆಯ ಅರಣ್ಯ ಪ್ರದೇಶದ ಬಳಿಯ ಒಂದು ಗ್ರಾಮದಲ್ಲಿ ಇತ್ತೀಚಿಗೆ ಕೆಲವು ದುರುಳರು ಆ ಗರ್ಭಿಣಿ ಆನೆಯನ್ನು ವಾಮಮಾರ್ಗದಲ್ಲಿ ಅಮಾನುಷವಾಗಿ ಕೊಲೆಗೈದಿರುವುದು ಅತ್ಯಂತ  ವಿಷಾದನೀಯವಾಗಿದೆ. ಮನುಷ್ಯ ದಿನ ಕಳೆದಂತೆ ಮಾನವೀಯತೆ, ಹೃದಯ ವೈಶಾಲ್ಯತೆ ಪರೋಪಕಾರ ಇತರರ ನೋವನ್ನು ಅರ್ಥಮಾಡಿಕೊಳ್ಳುವ ಭಾವನೆಯನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ. ಮನುಷ್ಯ ಹಕ್ಕಿಯಂತೆ ಹಾರುವುದನ್ನು ಕಲಿತ, ಮೀನಿನಂತೆ ಈಜುವುದನ್ನು ಕಲಿತ, ಆದರೆ ಮನುಷ್ಯ ನಿಜವಾಗಿಯೂ ಮನುಷ್ಯನಾಗುವುದನ್ನು ಕಲಿಯಲೇ ಇಲ್ಲ. ಜೊತೆಗೆ ತಾನು ಎಲ್ಲಾ ಬಲ್ಲವನೆಂಬ ಅಹಂಕಾರ ಬೆಳೆಸಿಕೊಂಡು, ಬದುಕಿಗೆ ಬೇಕಾದ ಮಾನವೀಯತೆ ಮತ್ತು ಮನುಷ್ಯತ್ವವನ್ನೇ ಮರೆತು ಬಿಟ್ಟ. ಯಾವ ಸದ್ಗುಣಗಳು ಮಾನವನಲ್ಲಿ ಇರಬೇಕಾಗಿತ್ತೊ ಅದನ್ನು ಬಿಟ್ಟು ಸ್ವಾರ್ಥಿಯಾಗಿರುವುದು ಬದುಕಿನ ವಿಪರ್ಯಾಸ! ಬದುಕಿನಲ್ಲಿ ಇಡೀ ಮನುಕುಲ  ಮಾನವೀಯತೆಯನ್ನು ಮರೆತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.

ಶ್ರೇಷ್ಠ ಸಾಹಿತಿ ಶ್ರೀ ಎಸ್.ಜಿ.ನರಸಿಂಹಾಚಾರ್ಯರವರ `ನೀನಾರಿಗಾದೆಯೋ ಎಲೆ ಮಾನವ’ ಎಂದು ಗೋವು ಮನುಷ್ಯರಿಗೆ ಹೇಳಿರುವ ಅದ್ಭುತವಾದ ಗೀತೆ  ಹಾಗೂ ದಿ|| ಚಿ. ಉದಯ ಶಂಕರ್ ರವರ `ಪ್ರಾಣಿಗಳೇ ಗುಣದಲಿ ಮೇಲು ಮಾನವನದಕಿಂತ ಕೀಳು, ಉಪಕಾರವ ಮಾಡಲಾರ ಬದುಕಿದರೆ ಸೈರಿಸಲಾರ’ ಎನ್ನುವ ಈ ಗೀತೆಯ ಸಾಲುಗಳು ಮನುಷ್ಯನ ನೈಜ ವ್ಯಕ್ತಿತ್ವವನ್ನು ಹಾಗೂ ಆತನ ಗುಣವನ್ನು ಪ್ರತಿಬಿಂಬಿಸುತ್ತದೆ.

ದಿನಾಂಕ 27-5-2020 ರ ಈ ದಿನ `ಮಾನವೀಯತೆಗೆ ಕೊಳ್ಳಿ ಇಟ್ಟು ಸಮಾಧಿ ಮಾಡಿದ ಕರಾಳ ದಿನ’ ಎಂದರೆ ತಪ್ಪಾಗಲಾರದು. ಕೇರಳದ ಮಲ್ಲಪ್ಪುರಂ ಜಿಲ್ಲೆಯ ಕಾಡಿನಲ್ಲಿದ್ದ ಗರ್ಭಿಣಿ ಆನೆಯೊಂದು ಆಹಾರವನ್ನು ಹರಸಿ ಹತ್ತಿರದ ಗ್ರಾಮದ ಬಳಿ ಬಂದು ಸುತ್ತಾಡುತ್ತಾ ಇತ್ತು. ಆ ಗ್ರಾಮದ ಕೆಲವು ದುಷ್ಕರ್ಮಿಗಳು ವನ್ಯಮೃಗಳ ಹತ್ಯೆಗಾಗಿ ಅನಾನಸ್ ಹಣ್ಣಿನೊಳಗೆ ಪಟಾಕಿ ತಯಾರಿಸಲು ಬಳಸುವ  ಸ್ಫೋಟಕ ವಸ್ತುಗಳನ್ನು ತುಂಬಿ ತಿನ್ನಲು ಎಸೆದಿದ್ದರು. ಮೊದಲೆ ಹಸಿವೆಯಿಂದ ಕಂಗೆಟ್ಟಿದ್ದ ಆ ಗರ್ಭಿಣಿಯಾನೆ ತನ್ನ ಸೊಂಡಿಲಿನಿಂದ ಅವಸರವಾಗಿ ಎತ್ತಿಕೊಂಡು ಬಾಯಲ್ಲಿಟ್ಟು ಅಗಿಯ ತೊಡಗಿದಾಗ, ಕೂಡಲೇ ಅನಾನಸ್ ಒಳಗಿದ್ದ ಸ್ಫೋಟಕ ವಸ್ತುಗಳು ಆನೆಯ ಬಾಯೊಳಗೆ ಸಿಡಿದ ಪರಿಣಾಮ ಒಳಗೆ ದೊಡ್ಡ ಗಾಯವಾಗಿ, ರಕ್ತ ಧಾರಾಕಾರವಾಗಿ ಸುರಿಯಲಾರಂಭಿಸಿತು. ನೋವು ಸಹಿಸಲಾಗದೆ ಗೀಳಿಡುತ್ತಿತ್ತು. ಒಂದು ಕಡೆ ತಡೆಯಲಾಗದ ನೋವು, ಮತ್ತೊಂದು ಕಡೆ ಸ್ಫೋಟಕ ಶಬ್ದಕ್ಕೆ ಬೆಚ್ಚಿದ ಆನೆ ಅರಣ್ಯದ ಕಡೆಗೆ ಓಡಿತು. ನೋವನ್ನು ತಾಳಲಾರದೆ  ಹತ್ತಿರದ ಒಂದು ನೀರಿನ ಹೊಂಡಕ್ಕೆ ಇಳಿದು ಒದ್ದಾಡುತ್ತಿತ್ತು. ತನ್ನ ಹೊಟ್ಟೆಯಲ್ಲಿ ಪುಟ್ಟ ಮರಿಯನ್ನು ಹೊತ್ತ  ಆನೆ ನೀರಿನಲ್ಲಿ ಸಾವು – ಬದುಕಿನ ಮದ್ಯೆ ಹೋರಾಟ ನಡೆಸುತ್ತಿತ್ತು. ಈ ಜಗತ್ತನ್ನೇ ಇನ್ನೂ ನೋಡದೆ ಇರುವ ತನ್ನ ಕಂದಮ್ಮನಿಗಾಗಿಯಾದರೂ ಬದುಕಲೇಬೇಕೆಂದು ಶತಪ್ರಯತ್ನ ನಡೆಸಿತು. ಆದರೆ ಆನೆಯ ಪ್ರಾರ್ಥನೆ ಆ ದೇವರಿಗೂ ಸಹ ಕೇಳಿಸಲಿಲ್ಲ. ತೀವ್ರ ವೇಧನೆಯಿಂದ ಕೊನೆಗೂ ಸ್ವಲ್ಪ ಹೊತ್ತಿನಲ್ಲೇ ತನ್ನ ಪ್ರಾಣ ಬಿಟ್ಟಿತು. ಕಾಡಿನಲ್ಲಿ ಸ್ವಚ್ಚಂದವಾಗಿ ಕಾಲ ಕಳೆಯುತ್ತಿದ್ದ ಆನೆ ಆಹಾರವನ್ನು ಹರಸಿ ನಾಡಿಗೆ ಬಂದು ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಕೊನೆಯುಸಿರೆಳೆಯಿತು.

ಹೆಣ್ಣಾನೆಯ ಗರ್ಭದಲ್ಲಿದ್ದ ಏನನ್ನೂ ಅರಿಯದ, ಯಾವ ತಪ್ಪನ್ನೂ ಮಾಡದ ಕಂದಮ್ಮ ಬಲಿಯಾಗಿದ್ದು ಒಂದು ದೊಡ್ಡ ದುರಂತ. ಇದು ಮನುಷ್ಯನ ಕ್ರೌರ್ಯ- ಅಟ್ಟಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಪಾಪ ಈ ಮೂಕಪ್ರಾಣಿ ಮಾಡಿದ ತಪ್ಪಾದರೂ ಏನು? ಸ್ವಾಭಾವಿಕ ಕಾಡಾನೆಯಾದರೂ ಆಹಾರ ಅರಸಿ ಊರಿನತ್ತ ಬಂದಾಗ ಯಾರೊಬ್ಬರಿಗೂ ತೊಂದರೆ ಕೊಡಲಿಲ್ಲಾ, ತೋಟ ಗದ್ದೆಗಳಿಗೆ ನುಗ್ಗಿ ಫಸಲನ್ನ ಹಾಳು ಮಾಡಲಿಲ್ಲಾ ತಾನು ನಡೆದು ಹೋಗುವ ಹಾದಿಯಲ್ಲಿ ಯಾರಾದರೂ ಏನಾದರೂ ಆಹಾರ ಕೊಟ್ಟರೆ ತಿಂದು ತನ್ನ ಪಾಡಿಗೆ ತಾನು ಕಾಡಿಗೆ ಹೊರಟು ಹೋಗುತ್ತಿತ್ತು. 

ಮನುಷ್ಯರನ್ನ ಅತಿಯಾಗಿ ನಂಬಿತ್ತು ಆ ನಂಬಿಕೆಯಿಂದಲೇ ಜನ ಏನು ಕೊಟ್ಟರೂ ಅನುಮಾನಿಸದೇ ಸೇವಿಸುತ್ತಿತ್ತು ಆದರೆ ನಂಬಿದವರ ಕತ್ತು ಕುಯ್ಯುವುದು ಸಜ್ಜನರನ್ನ ಗೋಳು ಹುಯ್ದುಕೊಳ್ಳುವುದು ಮಾನವನರ ಹುಟ್ಟುಗುಣ ತಾನೆ? ಅದೇ ದುಷ್ಟಬುದ್ಧಿಯನ್ನು ಈ ಅಮಾಯಕ ಆನೆಯ ಮೇಲೂ ಪ್ರಯೋಗಿಸಿಬಿಟ್ಟರು.

ಅನಾನಸ್ ಹಣ್ಣಿನಲ್ಲಿ ಸಿಡಿಮದ್ದನ್ನು ಹಾಕಿ ಈ ಆನೆಗೆ ಕೊಟ್ಟಿದ್ದಾರೆ ಅದರ ಅರಿವಿಲ್ಲದ ಆನೆ ತಿನ್ನುತ್ತಿದ್ದಂತೆಯೇ ಬಾಯಿ ದವಡೆ ಸಿಡಿದು ಚೂರು ಚೂರಾಗಿ‌ ಯಮಯಾತನೆ ತಾಳಲಾರದೇ ನದಿ ನೀರಿನಲ್ಲಿ ನೋವಿನಿಂದ ನರಳುತ್ತಲೇ ತನ್ನ ಗರ್ಭದೊಳಗೆ ಇಂದೋ ನಾಳೆಯೋ ಜನಿಸಿ ತಾಯ್ತನದ ಸುಖ ನೀಡಬಹುದಾದ ಮರಿಯನ್ನು ಹೊತ್ತುಕೊಂಡೇ ಪ್ರಾಣ ತ್ಯಾಗ ಮಾಡಿತು.

ಪ್ರತಿವರ್ಷ ದೇಶದ ಪ್ರತಿ ರಾಜ್ಯದಲ್ಲಿಯೂ ನೂರಾರು ಆನೆಗಳು ಬರ್ಬರವಾಗಿ ಸಾವನ್ನಪ್ಪುತ್ತಿವೆ. ಅವುಗಳಲ್ಲಿ ಈ ಹಿಂದೆ ಸತ್ತಂತಹ ಬಹಳಷ್ಟು ಆನೆಗಳು ಗರ್ಭಿಣಿ ಆನೆಗಳಾಗಿತ್ತವೆ. ಕೆಲವು ಹಸುಗೂಸು ಆನೆಗಳಾಗಿವೆ. ಕೆಲವು ವಯಸ್ಸಾದ ಹಿರಿಆನೆಗಳು ಆಗಿರುತ್ತವೆ.

 ದೇಶದ ಒಂದಲ್ಲ‌ ಒಂದು ಮೂಲೆಯಲ್ಲಿ ರೈಲು ಗಾಡಿಗೆ‌ ಸಿಲುಕಿ ಆನೆಗಳು ಸಾವನ್ನಪ್ಪುವ ವರದಿಗಳನ್ನು ನಾವು ಕೇಳುತ್ತವೆ, ರೈತರ ಜಮೀನುಗಳನ್ನು ಅಕ್ರಮವಾಗಿ ಬೇಲಿಗೆ ವಿದ್ಯುತ್ ಹಾಕಿಸಿ, ಎಷ್ಟೋ ಆನೆಗಳನ್ನು ಕೊಲ್ಲಲಾಗಿದೆ. ವೀರಪ್ಪನ್ ಕಾಲದಲ್ಲಿ ಸಾವಿರಾರು ಆನೆಗಳನ್ನು ಬೇಟೆಯಾಡಿದ್ದಾರೆ. ಈಗಲೂ ಹಲವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಸ್ವಲ್ಪ ವರ್ಷಗಳ ಹಿಂದೆ ನಮ್ಮದೇ ರಾಜ್ಯದ ಕೊಡಗಿನಲ್ಲಿ ಒಂದೇ ದಿನ ಆರು ಆನೆಗಳು ಅಕ್ರಮ ವಿದ್ಯುತ್ ತಂತಿಯಿಂದಾಗಿ ಪ್ರಾಣಬಿಟ್ಟಿದ್ದ ನೆನಪು ಇನ್ನೂ ಮರೆಯಾಗಿಲ್ಲ.

ಆನೆ, ಆನೆಯಾಗುವ ಮುನ್ನ ತಾನು ಆನೆ ಎಂಬುದನ್ನು ಅರಿಯಬೇಕಾಗುತ್ತದೆ. ಅಮ್ಮನ ಕಾಲಡಿಯಲ್ಲಿ ತೆವಳುತ್ತಾ ಕಾಡನ್ನು ಸುತ್ತಬೇಕು. ಕಿವಿಯನ್ನು ತೆರೆದಿಟ್ಟು ಕಾಡಿನಭಾಷೆಯನ್ನು ಆಲಿಸಬೇಕು. ಅಮ್ಮನ ಸೂಚನೆ, ಎಚ್ಚರಿಕೆಗಳನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ತನ್ನ ಹತ್ತಾರು ಅಕ್ಕ, ತಂಗಿ, ಚಿಕ್ಕಮ್ಮಂದಿರ ಸ್ಪರ್ಶ, ವಾಸನೆಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಅಜ್ಜಿಯಿಂದ ಸಮಾಜದ ನಡೆ, ನುಡಿಗಳನ್ನು ಮರಿ ಆನೆ ಕಲಿಯಬೇಕು. ತನ್ನ ಪರಿಸರದ ಅಕ್ಷಾಂಶ–ರೇಖಾಂಶಗಳನ್ನೆಲ್ಲ ಮನನ ಮಾಡಿಕೊಳ್ಳುತ್ತಾ ತನ್ನ ಮಣ್ಣಿನ ವಾಸನೆಯನ್ನು ಗ್ರಹಿಸಬೇಕು. ಮಿತ್ರರಾರು, ಶತ್ರುಗಳಾರು, ಯಾವುದು ವಿಷ, ಯಾವುದು ಆಹಾರ ಎಂದೆಲ್ಲ ಅರಿತುಕೊಳ್ಳಬೇಕು. ಬೆಳೆದ ಬಳಿಕ ಬಿದಿರಿನ ಮೆಳೆಗಳನ್ನು ಬುಡಮೇಲು ಮಾಡಿ, ನಿಂತ ಮರಗಳನ್ನು ಉರುಳಿಸಿ, ಕೆರೆಗಳಲ್ಲಿ ಇಳಿದು, ನದಿಗಳಲ್ಲಿ ಮುಳುಗಿ ಕಾಡಿನಲ್ಲಿ ಅಂಡಲೆಯಬೇಕು. ಆಗಷ್ಟೆ ಅದು ಆನೆಯಾಗುತ್ತದೆ.

ಆದರೆ ಸಾಕಾನೆಗಳಾದಾಗ, ಅವುಗಳಿಗೆ ಈ ಯಾವ ಶಿಕ್ಷಣ, ಅನುಭವಗಳು ಇರುವುದಿಲ್ಲ. ದೇಗುಲಗಳಲ್ಲಿ, ಮಠಗಳಲ್ಲಿ, ಮೃಗಾಲಯಗಳಲ್ಲಿ ಏಕಾಂಗಿಯಾಗಿ, ತಬ್ಬಲಿಯಾಗಿ ಬದುಕುತ್ತವೆ. ತಮ್ಮ ಭಾಷೆ ಗೊತ್ತಿಲ್ಲದವರೊಂದಿಗೆ ಜೀವನಪರ್ಯಂತ ಸಂವಾದ ಮಾಡಲೇಬೇಕಾದ ಸಂಕಷ್ಟ ಅವುಗಳದು. ಇದಲ್ಲದೆ ಟನ್‌ಗಳಟ್ಟಲೆ ತೂಗುವ ದೈತ್ಯಾಕಾರದ ಆನೆಗಳ ಎಷ್ಟೋ ಮಾತುಗಳು ಮನುಷ್ಯನ ಕಿವಿಗೆ ಕೇಳುವುದೇ ಇಲ್ಲ. ಆದರೆ ಕಾಡಿನಲ್ಲಿ ಅವು ಅದೇ ಸೂಕ್ಷ್ಮ ತರಂಗದ ಭಾಷೆ ಬಳಸಿ ಎರಡು ಕಿ.ಮೀ. ದೂರದಲ್ಲಿರುವ ಮತ್ತೊಂದು ಆನೆಯೊಂದಿಗೆ ನಿರಾಯಾಸವಾಗಿ ಸಂಭಾಷಿಸಬಲ್ಲವು. ಹಾಗಾಗಿ, ಸಾಕಾನೆಗಳಾದಾಗ ಭಾಷೆ ತಿಳಿದಿದ್ದರೂ ಮೂಕರಾಗಿ ಉಳಿಯುತ್ತವೆ.

ಸುಡು ಬೇಸಿಗೆಯಲ್ಲಿ ದೇಗುಲಗಳ ಕಾದ ಚಪ್ಪಡಿಯಲಿ ನಿಂತು, ನೆರಳಿಲ್ಲದ ಡಾಂಬರ್ ರಸ್ತೆಗಳಲ್ಲಿ ನಡೆಯುತ್ತಾ, ಮಂತ್ರಿಗಳ–ಗಣ್ಯರ ಕೊರಳಿಗೆ ಹಾರತುರಾಯಿಗಳನ್ನು ಹಾಕುತ್ತಾ ಬದುಕು ನೂಕಬೇಕು. ಸಂಸ್ಕೃತಿ, ನಂಬಿಕೆ, ಧಾರ್ಮಿಕ ನಡವಳಿಕೆಗಳ ಹೆಸರಿನಲ್ಲಿ ಮನುಷ್ಯನ ನೂರೆಂಟು ಡಾಂಭಿಕ ಆಚಾರಗಳನ್ನು ನೆರವೇರಿಸುತ್ತಾ ಖಾಸಗಿ ಬದುಕನ್ನು ತ್ಯಾಗ ಮಾಡಬೇಕು.

ಸಂಕೀರ್ಣ ಕುಟುಂಬ ವ್ಯವಸ್ಥೆಯಲ್ಲಿ ಬದುಕನ್ನು ರೂಪಿಸಿಕೊಳ್ಳುವ ಹೆಣ್ಣಾನೆಗಳ ಏಕಾಂತದ ದುಃಖದುಮ್ಮಾನಗಳು ನಮಗೆಂದೂ ಅರ್ಥವಾಗುವುದಿಲ್ಲ. ಅವು ತಮ್ಮ ಹುಟ್ಟುಗುಣಗಳನ್ನೆಲ್ಲ ಬದಿಗಿಟ್ಟು, ಮಾವುತನ ಆಜ್ಞೆಗಳಿಗೆ ಪೂರಕವಾಗಿ ಹೆಜ್ಜೆಹಾಕುತ್ತಾ ಸಾಗಬೇಕಾದ ಬದುಕು ಕರುಣಾಜನಕವಾಗಿರುತ್ತದೆ. ಹಾಗಾಗಿ ಕಾಡಿನ ಹೆಣ್ಣಾನೆಗಳನ್ನು ಹಿಡಿದು ಪಳಗಿಸಿ ನಮ್ಮ ಹೆಬ್ಬುಬ್ಬೆಗೆ ಬಳಸುವ ಈ ಪರಿಕಲ್ಪನೆಯ ಅಮಾನವೀಯ ಸಂಸ್ಕೃತಿ.

`ದಯವಿಲ್ಲದಾ ಧರ್ಮವಾವುದಯ್ಯ,
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ.’

ಜಗತ್ತಿನ ಎಲ್ಲಾ ಜೀವನಾಡಿಗಳಲ್ಲೂ ದಯೆ ಎಂಬ ಅಂತಃಕರಣ ಇರಬೇಕು ಎಂದು ಸಾರಿದ ದಾರ್ಶನಿಕ ಬಸವಣ್ಣನವರು ಹಾಗೂ ಸತ್ಯ, ಶಾಂತಿ, ಅಹಿಂಸೆಯನ್ನು ಸಾರಿದ ಮಹಾತ್ಮ ಗಾಂಧೀಜಿಯವರು ಹುಟ್ಟಿದ ಈ ಭೂಮಿಯಲ್ಲಿ ಮನುಷ್ಯತ್ವ ಹಾಗೂ ಪಾಪ ಪ್ರಜ್ಞೆಯನ್ನೇ ಮರೆತ ಕಿಡಿಗೇಡಿಗಳು ಕ್ರೌರ್ಯವನ್ನು ಮೆರೆದು, ಹಸಿವೆಯಿಂದ ಬಳಲುತ್ತಾ ಆಹಾರವನ್ನು ಹರಸಿ ಕಾಡಿನಿಂದ ಊರಿಗೆ ಬಂದ ಹೆಣ್ಣಾನೆಯನ್ನು ಕೊಂದು ಬಿಟ್ಟರು.ಆ ಗರ್ಭಿಣಿಯಾನೆ ಜನರನ್ನು ನಂಬಿಯೇ ಊರಿಗೆ ಬಂದು ತನ್ನ ಪ್ರಾಣವನ್ನೇ ಕಳೆದು ಕೊಂಡಿತು ಎಂದರೆ ಅತಿಶಯೋಕ್ತಿಯಾಗಲಾರದು.ಆನೆಯನ್ನು ಕೊಂದ ದುಷ್ಕರ್ಮಿಗಳಿಗೆ ಮಾನವೀಯತೆ ಇದೆಯೇ? ಎಲ್ಲಿ ಮರೆಯಾಯಿತು ಅವರ ಮನುಷ್ಯತ್ವ? ಈ ದುರುಳರ ಮನಸ್ಥಿತಿಗೆ ನಾವು ಏನೆನ್ನಬೇಕು!

ಮರೆಯಾದ ಮಾನವೀಯತೆ - Janathavaniಆ ಆನೆ ತನ್ನ ಬಾಯೊಳಗೆ ಅನಾನಸ್ ಹಣ್ಣಿನಲ್ಲಿದ್ದ ಸ್ಪೋಟಕ ವಸ್ತುವನ್ನು ಅಗಿದು ಆದ ತೀವ್ರ ಗಾಯದ ನೋವಿನಿಂದ ಆದ ವೇದನೆಯನ್ನು ಸಹಿಸಲಾರದೆ ಊರಿನಲ್ಲಿ ಸುತ್ತಾಡಿ ಇಡೀ ಊರನ್ನೇ ಧ್ವಂಸ ಮಾಡಬಹುದಿತ್ತು. ಆ ಶಕ್ತಿ ಖಂಡಿತಾ ಆ ಆನೆಗೆ ಇತ್ತು.ಊರಿನಲ್ಲಿ ಸಿಕ್ಕ ಸಿಕ್ಕ ಹತ್ತಾರು ಜನರನ್ನು ಸಾಯಿಸ ಬಹುದಿತ್ತು. ಆದರೆ ಗರ್ಭಿಣಿಯಾನೆ ಏನನ್ನೂ ಮಾಡದೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು ತನಗಾದ ಅತೀವ ನೋವನ್ನು ತಣಿಸಿಕೊಳ್ಳಲು ನೀರನ್ನು ಹುಡುಕುತ್ತಾ ಹೋಗಿ ಹತ್ತಿರದಲ್ಲೇ ಇದ್ದ ಹೊಂಡದೊಳಗೆ ಇಳಿದು ಗಂಟೆಗಟ್ಟಲೆ ಉರುಳಾಡಿತು. ದುಷ್ಕರ್ಮಿಗಳ ಪಾಪದ ಕೃತ್ಯದ ಹಿಂಸೆಯ ಯಾತನೆಯನ್ನು ಕ್ಷಣ – ಕ್ಷಣಕ್ಕೂ ಅನುಭವಿಸಿ, ಮನದಲ್ಲಿಯೇ ನೊಂದು ನರಳುತ್ತಲೇ ನೀರಿನಲ್ಲಿಯೇ ತನ್ನ ಕೊನೆಯುಸಿರೆಳೆಯಿತು.

ಗರ್ಭಿಣಿ ಆನೆಯನ್ನು ಕೊಂದ ಅಪರಿಚಿತ ಆರೋಪಿಗಳ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಪ್ರಕರಣ ದಾಖಲಾಗಿದೆ ನಿಜ. ಕೇರಳ ರಾಜ್ಯದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಆರೋಪಿಗಳ ದಸ್ತಗಿರಿ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಕೇರಳ ಸರ್ಕಾರ ಕೂಡಾ ಈ ಆನೆಯ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದು ಗಮನಾರ್ಹವಾದ ಅಂಶವಾಗಿದೆ. ಆದರೆ ಯಾವುದೇ ತಪ್ಪು ಮಾಡದ ಈ ಹೆಣ್ಣಾನೆ ಹಾಗೂ ಅದರ ಗರ್ಭದಲ್ಲಿ ಇದ್ದ ಆ ಎಳೆಯ ಕಂದಮ್ಮನ ಸಾವು ನ್ಯಾಯವೇ? ಇದನ್ನು ಕೇವಲ ಕೇರಳ ರಾಜ್ಯದ ಜನರಷ್ಟೇ ಚಿಂತಿಸಿದರೆ ಸಾಲದು, ಇಡೀ ವಿಶ್ವದ ಮನುಕುಲವೇ ಚಿಂತಿಸುವ ಅಗತ್ಯವಿದೆ. ವನ್ಯಜೀವಿಗಳ ಹತ್ಯೆ ಸಂಪೂರ್ಣ ಕೊನೆಗೊಳ್ಳಲೇಬೇಕು.  ಆಗಲೇ  ನಿಷ್ಕರುಣಿಗಳಿಂದ  ತುಂಬಿರುವ ಈ ಇಹಲೋಕ ತ್ಯಜಿಸಿದ ಆ ತಾಯಿಯಾನೆ ಹಾಗೂ ಅದರ ಹೊಟ್ಟೆಯೊಳಗಿನ ಕಣ್ಣು ಬಿಡದ (ಭ್ರೂಣ) ಮುದ್ದು ಕಂದಮ್ಮನ ಆತ್ಮಕ್ಕೆ ನಿಜವಾದ ಚಿರಶಾಂತಿ ಲಭಿಸುತ್ತದೆ.

ಕಾಡಿನಲ್ಲಿ ಆಹಾರ-ನೀರಿಗಾಗಿ ಹುಲಿ, ಚಿರತೆ, ಕರಡಿ,ಆನೆಗಳು ಹಾಗೂ ಇತರೆ ವನ್ಯಜೀವಿಗಳು ಅಲೆದಾಡಿ ಬೇಸತ್ತು ಸುಸ್ತಾಗಿ ಕೊನೆಯದಾಗಿ ಕಾಡಿನ ಹತ್ತಿರದ ಊರುಗಳಿಗೆ ನುಗ್ಗಿ ಆಹಾರ ನೀರಿಗಾಗಿ ಹುಡುಕಾಡುತ್ತವೆ. ಊರಿನ ನೂರಾರು ಜನರು ಗುಂಪು ಸೇರಿ ದೊಣ್ಣೆ ಮಾರಕಾಸ್ರ್ತಹಿಡಿದು ಬೆನ್ನಟ್ಟಿ ಎಲ್ಲರೂ ಸೇರಿ ಕೊಂದು ಕೇಕೆ ಹಾಕಿ ಯುದ್ಧ ಗೆದ್ದ ವೀರರಂತೆ ಜಯಭೇರಿ ಮಾಡಿ ನಂತರ ಸತ್ತ ಕಾಡು ಪ್ರಾಣಿಯನ್ನು ಹೊತ್ತು ಕೊಂಡು ಊರಿನಲ್ಲಿ ಮೆರವಣಿಗೆ ಮಾಡುತ್ತಾರೆ. ಆಹಾರವನ್ನು ಹರಸಿ ಬರುವ ಹುಲಿ, ಕರಡಿ,ಚಿರತೆಗಳು ಊರಿಗೆ ಬಂದಾಗ ಜನರು ಆಹಾರ ನೀರು ಒದಗಿಸುವ ಗೋಜಿಗೆ ಹೋಗದೆ ಮನುಷ್ಯರನ್ನು ಕೊಲ್ಲಲು ಬಂದಿದೆಯೆಂದು ಭಾವಿಸಿ ವನ್ಯಜೀವಿಗಳಿಗೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಾರೆ. ಊರಿನ ಜನರ ಆಕ್ರೋಶ, ಕ್ರೌರ್ಯ, ಅಟ್ಟಹಾಸ ಹಾಗೂ ಮೃಗಗಳಿಗೆ ನೀಡುವ ಚಿತ್ರಹಿಂಸೆಯ ಸ್ವರೂಪ ಪ್ರಾಯಶಃ ಬಹುತೇಕ ನಾಗರಿಕರು ಟಿವಿ ಮಾಧ್ಯಮಗಳು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದಾರೆ. ಕೆಲವು ಕಳ್ಳಸಾಗಣಿಕೆದಾರರು ದುರಾಸೆಯಿಂದ ಬೆಲೆಬಾಳುವ ಆನೆಯ ಧಂತಗಳಿಗಾಗಿ ಆನೆಗಳನ್ನು ಹಲವಾರು ಕುತಂತ್ರದಿಂದ ಕೊಂದು ಧಂತಗಳನ್ನು ಮಾರಾಟ ಮಾಡುತ್ತಾರೆ. ಹೀಗೆ ಮನುಷ್ಯ ವನ್ಯಮೃಗಗಳಿಗೆ ಟಾರ್ಗೆಟ್ ಆಗದೆ ವನ್ಯಜೀವಿಗಳೇ ಮನುಷ್ಯನಿಗೆ ಟಾರ್ಗೆಟ್ ಆಗಿದೆ ಎಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು.

ಮಾನವ ತನ್ನ ವಿಕಾಸದ ಹಾದಿಯಲ್ಲಿ ಅರಳಿ ನಾಗರಿಕ ಪ್ರಪಂಚವನ್ನು ಸೃಷ್ಟಿಸಿ ಜಗತ್ತಿನ ಶಾಂತಿಗಾಗಿ ಧರ್ಮಗಳನ್ನು ಹುಟ್ಟುಹಾಕಿ ಮಾನವೀಯತೆಯನ್ನು ಬೋಧಿಸಿದ್ದು, ಆಧ್ಯಾತ್ಮಿಕತೆಯನ್ನು ಕಂಡುಕೊಂಡಿದ್ದು ನಿಜ. ಅದರೊಂದಿಗೆ ಕ್ರೌರ್ಯ, ಅಪರಾಧ, ಅಸಮಾನತೆ, ಅಮಾನವೀಯತೆಯನ್ನು ಸಹ ಧಾರಾಳವಾಗಿ  ಹರಡುತ್ತಿದ್ದಾನೆ. ತಮ್ಮ  ವೈಯಕ್ತಿಕ ಲಾಭಕ್ಕಾಗಿ  ವನ್ಯಜೀವಿಗಳನ್ನು ಬರ್ಬರವಾಗಿ ಹತೈ ಮಾಡುವ, ಅವುಗಳ ಕಾಡನ್ನು  ದಿನೇ ದಿನೇ ಅತಿಕ್ರಮಿಸಿ ಅವುಗಳ ನೆಲೆ ಕಸಿದುಕೊಳ್ಳುತ್ತಿರುವ, ಇಂತಹವನ್ನು ಕಂಡು ಕಾಣದಂತಿರುವ  ಈ ನರ ಮಾನವರು ಕೊರೋನಾ, ಚಂಡಮಾರುತ, ಪ್ರವಾಹ, ಸುನಾಮಿ, ಭೂಕಂಪ ಎಲ್ಲದಕ್ಕೂ  ಅರ್ಹರು ಎನ್ನಲು ಯಾವುದೇ  ಹಿಂಜರಿಕೆ ಇಲ್ಲ.

ಆಹಾರ – ನೀರು ಅರಸಿ ಕಾಡಿನಿಂದ ನಾಡಿನ ಕಡೆಗೆ ಬರುವ ವನ್ಯಮೃಗಗಳ ಮೇಲೆ ನಮಗೇಕೆ ಮೃದು ಧೋರಣೆಯಿಲ್ಲ? ನಾವೇಕೆ ಖಗಮೃಗಗಳ ಸಂರಕ್ಷಣೆ ಮಾಡಬಾರದು? ಮನುಷ್ಯನ ವನ್ಯಮೃಗಗಳ ಮೇಲೆ ಕ್ರೌರ್ಯ ಅತಿರೇಕ ಅತಿಯಾದರೆ ವನ್ಯಜೀವಿಗಳ ಸಂತತಿ ಕ್ಷೀಣಿಸುವುದರಲ್ಲಿ ಸಂದೇಹವಿಲ್ಲ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ವನ್ಯಮೃಗಗಳ ಸಂರಕ್ಷಣೆಗೆ ಆದ್ಯತೆ ನೀಡೋಣ.


ಮರೆಯಾದ ಮಾನವೀಯತೆ - Janathavaniಜಿ. ಎ. ಜಗದೀಶ್
ನಿವೃತ್ತ ಪೊಲೀಸ್ ಅಧೀಕ್ಷಕರು, ದಾವಣಗೆರೆ.
9448839955
[email protected]

error: Content is protected !!