ಬಾಳ ಇಳಿ ಸಂಜೆಯಲಿ ಮೌನದನಿ …

ಮುಪ್ಪು ಒಂದು ವಾಸ್ತವ… ಪ್ರತಿಯೊಂದು ಜೀವಿಗೂ ಕೂಡ ಮುಪ್ಪು ಆವರಿಸುವುದು ಖಚಿತ. ದೇಹ ನಶಿಸುವ ಮುನ್ನ ನುಸುಳುವ ಮುಪ್ಪು ಸಕಲ ಪ್ರಾಣಿ ಸಮೂಹಕ್ಕೂ ಕಟ್ಟಿಟ್ಟ ಬುತ್ತಿ. ಇದು ಪ್ರಕೃತಿದತ್ತ ನಿಯಮ.ಶೈಶವ, ಬಾಲ್ಯ, ಕೌಮಾರ, ಯೌವನವು ಅರಳಿ ಉರುಳಿ ಹೊರಳಿ ವೃದ್ಧಾಪ್ಯವು ಆವರಿಸುವುದು ಜೀವನ ಕ್ರಮಿಸಿದ ಹೆಗ್ಗುರುತು. ಬಾಲ್ಯ, ಯೌವನಕ್ಕೆ ಇರುವಂತೆ ಮುಪ್ಪಿಗೂ ಒಂದು ಚೆಲುವಿದೆ. ಆದರೆ ಮುಪ್ಪು ಎಂದರೆ ಎಲ್ಲರಿಗೂ ಭಯವೆ. ಮುಪ್ಪು ಎನ್ನುವುದು ಸಂಸಾರ ಭಯ. ಮುಪ್ಪು ಎಂಬ ಮಹಾನೋವನ್ನು ನೆನೆಸಿಕೊಂಡರೂ ಭಯವಾಗುತ್ತದೆ. ಯೌವನ ಕಳೆಯುತ್ತ ವೃದ್ಧಾಪ್ಯವು ಶರೀರವನ್ನು ಆವರಿಸುತ್ತಿದ್ದಂತೆ ಈ ನೋವು ಕಾಣಿಸಿಕೊಳ್ಳುವುದು.ಮುಪ್ಪು ಎಂಬುದು ಅವಲ೦ಬನೆಯ ಬದುಕು ಬೇಡವೆ೦ದರೂ ಬಂದೇ ಬರುತ್ತದೆ. ಯಾರದೇ ಆಸರೆ ಇಲ್ಲದೇ ಹೋದರೆ ಮುಪ್ಪು ಸಹಿಸಲಾರದ ಯಾತನೆಯನ್ನು ನೀಡುತ್ತದೆ. ಪ್ರೀತಿ, ಆಸರೆ, ಆಶ್ರಯ, ಗೌರವಗಳು ಮುಪ್ಪಿನಲ್ಲಿರುವರಿಗೆ ಅತ್ಯಂತ ಅವಶ್ಯಕವಾದ ಬಾಳ ಇಳಿಸಂಜೆಯಲ್ಲಿಯ ಅಮೃತ ಸಂಜೀವಿನಿಗಳು.
ವೃದ್ಧಾಪ್ಯವೆಂಬುದು ಕಟ್ಟಿಟ್ಟ ಬುತ್ತಿ… ವೃದ್ಧಾಪ್ಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಾನವ ಬದುಕಿನಲ್ಲಿ ಬಾಲ್ಯ, ಯೌವನ, ಪ್ರೌಢಾವಸ್ಥೆಯನ್ನು ಅನುಭವಿಸಿದ ಬಳಿಕ ವೃದ್ಧಾಪ್ಯ ಬರಲೇಬೇಕಾಗಿದೆ. `ಜಾತಸ್ಯ ಮರಣಂ ಧ್ರುವ’ಎಂಬ ಮಾತಿನಂತೆ ಒಂದಲ್ಲ ಒಂದು ದಿನ ಎಲ್ಲರೂ ಸಾಯಲೇಬೇಕು. ಹುಟ್ಟು ಇದ್ದವರಿಗೆ ಮರಣವೂ ಅನಿವಾರ್ಯ.
ಬಾಲ್ಯ ಮತ್ತು ಯೌವನದ ವರ್ಣನೆಯನ್ನು ಕವಿಗಳು ಅತೀ ಸುಂದರವಾಗಿ ವರ್ಣಿಸಿದ್ದಾರೆ. ಮೃದುತ್ವ ಮಧುರತೆಯ ಮುದ ನೀಡುವ ಮಧುರಸ ಸೂಸುವ ಬಾಲ್ಯ ಯೌವನದ ಹಂತಗಳನ್ನು ಕಾವ್ಯ ಕಟ್ಟಿ ಹಾಡಿದ್ದಾರೆ. ಮುಪ್ಪಿನ ವರ್ಣನೆ ಅತ್ಯಂತ ವಿರಳ. ಆದರೆ ಸೂರ್ಯೋದಯದಂತೆ ಸೂರ್ಯಾಸ್ತಕ್ಕೂ ಒಂದು ಚೆಲುವಿರುವಂತೆ, ಯೌವನದಂತೆ ಮುಪ್ಪಿಗೂ ಸಹ ಒಂದು ಚೆಲುವಿದೆ, ಒಲವಿದೆ, ಘನತೆಯೂ ಇದೆ. ಆದರೂ ಮುಪ್ಪು ವಾಸ್ತವಾಗಿದ್ದು ದೇಹ ತನ್ನ ಸೌಷ್ಠವವನ್ನು ಕಳೆದುಕೊಳ್ಳುತ್ತಿರುವ ಕಠೋರ ಸ್ಠಿತಿ. ಹಲ್ಲು ಬಿದ್ದು ಕೂದಲು ನರೆತು, ಬೆನ್ನು ಬಾಗಿ, ಚರ್ಮ ಸುಕ್ಕುಗಟ್ಟಿ, ಕಿವಿ ಕೇಳದಿರೆ, ನೋಟ ಮಂದವಾಗಿ, ರೋಗಗಳು ಮುತ್ತಿ, ಅನ್ಯರ ಆಶ್ರಯ ಬಯಸುವ ವಾಸ್ತವ ಬದುಕೇ ಮುಪ್ಪು.
ಸ್ವಾತಂತ್ರದ ನಂತರ ನಮ್ಮ ದೇಶದಲ್ಲಿ ವ್ಯಕ್ತಿಯ ಆಯುಷ್ಯದ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಆರೋಗ್ಯ ಮತ್ತು ಕಾಯಿಲೆಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಅಧಿಕ ಮಾಹಿತಿ, ವೈದ್ಯಕೀಯ ವಿಜ್ಞಾನದ ಪ್ರಗತಿ, ಅತ್ಯಾಧುನಿಕ ಆಸ್ಪತ್ರೆ, ಆಧುನಿಕ ಚಿಕಿತ್ಸಾ ಕ್ರಮಗಳು, ಉತ್ತಮ ಆರೋಗ್ಯ ವ್ಯವಸ್ಥೆ ಮತ್ತು ಆರೈಕೆಗಳಿಂದಾಗಿ ಹೆಚ್ಚು ಜನರು ದೀರ್ಘಕಾಲದವರೆಗೆ ಬದುಕುತ್ತಿದ್ದು ಮಾನವನ ಸರಾಸರಿ ಆಯುಷ್ಯದ ಪ್ರಮಾಣ ಹೆಚ್ಚಾಗುತ್ತಿದೆ.
ಆಧುನಿಕತೆಯ ಬದುಕಿನೆಡೆಗೆ ಹೆಜ್ಜೆ ಹಾಕುತ್ತಿರುವ ನಮ್ಮ ಸಮಾಜದಲ್ಲಿ ನಾಗರೀಕರಣ ಔದ್ಯಮೀಕರಣ ಮುಂತಾದ ಆಧುನಿಕ ಪ್ರಕ್ರಿಯೆಗಳು ಕುಟುಂಬದ ಪಾರಂಪರಿಕೆ ಸಂಘಟನೆ ಹಾಗೂ ಸ್ಥಿರತೆಯನ್ನು ಬಹುಮಟ್ಟಿಗೆ ಅಸ್ಥಿರಗೊಳಿಸಿವೆ. ಕಾರಣ ಈ ದಿನಗಳಲ್ಲಿ ಕುಟುಂಬ ಹಲವಾರು ಸಾಮಾಜಿಕ, ಆರ್ಥಿಕ, ಮಾನಸೀಕ ವಿಷಯಗಳಲ್ಲಿ ಹಾಗೂ ಅದರ ಕಾರ್ಯ ವಿಧಾನಗಳಲ್ಲಿ ಮಹತ್ತರ ಬದಲಾವಣೆಯನ್ನು ಕಾಣುತ್ತಿದೆ. ಅವಿಭಕ್ತ ಕುಟುಂಬ ವ್ಯವಸ್ಥೆಯ ಅವನತಿ ಮತ್ತು ಯುವಜನರು ಮತ್ತು ಶ್ರಮಿಕರು ನಗರ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವುದರಿಂದ ವಯೋವೃದ್ಧರ ಯೋಗಕ್ಷೇಮ, ಆರೈಕೆಗಳ ಮೇಲೆ ಗಂಭೀರವಾದ ದುಷ್ಪರಿಣಾಮ ಬೀರಿದೆ. ದುಡಿಮೆಯೇ ಜೀವನಾಧಾರವಾದ ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವಯೋವೃದ್ಧರು ದುರ್ಲಕ್ಷಕ್ಕೆ ಒಳಗಾಗುತ್ತಿದ್ದಾರೆ. ಹಾಗೂ ಶೋಷಣೆ ಅನುಭವಿಸುತ್ತಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ. ಹೀಗಾಗಿ ಬಹುತೇಕರಿಗೆ ಮುಪ್ಪಿನ ಕಾಲ ನರಕವಾಗಿ ಪರಿಣಮಿಸ ತೊಡಗಿದೆ.
ಅವಿಭಕ್ತ ಕುಟುಂಬ ಪದ್ಧತಿಯಿಂದ ಇಂದಿನ ಸಮಾಜ ವಿಮುಖವಾಗುತ್ತಿರುವುದರಿಂದ ಹಾಗೂ ದುಡಿಮೆಯೇ ಜೀವನಾಧಾರವಾದ ಇಂದಿನ ದಿನಗಳಲ್ಲಿ ಮಕ್ಕಳು ಮೊಮ್ಮಕ್ಕಳಿಂದ ದೂರವಾಗಿ ದಿನಕಳೆಯ ಬೇಕಾದ ಅನಿವಾರ್ಯತೆಗಳು ನಮ್ಮ ವಯೋವೃದ್ದರನ್ನು ಕಾಡುತ್ತಿವೆ.ಇದರೊಂದಿಗೆ ವಯೋ ಸಹಜ ಕಾಯಿಲೆಗಳಾದ ರಕ್ತದ ಒತ್ತಡ, ಮಧುಮೇಹ, ಅಸ್ತಮಾ, ನಿದ್ರಾಹೀನತೆ, ಖಿನ್ನತೆ, ಮೂತ್ರಕೋಶದ ತೊಂದರೆ, ಮೂಳೆಗಳು ಸವಿದು ಮಂಡಿ ಮತ್ತು ಸೊಂಟಗಳಲ್ಲಿ ನೋವು, ಇನ್ನು ಮುಂತಾದವುಗಳ ನೋವಿನ ಸರಮಾಲೆ ಒಂದಾದ ಮೇಲೊಂದರಂತೆ ಎರಗಿ ವಯೋವೃದ್ದರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ. ಮಕ್ಕಳನ್ನು ಹೆತ್ತು, ಹೊತ್ತು, ಸಾಕಿ ಸಲುಹಿ ಓದಿಸಿ ಜೀವನ ಸಂಧ್ಯಾ ಕಾಲದಲ್ಲಿ ತಮಗೆ ಆಸರೆಯಾಗುತ್ತಾರೆ ಎಂಬ ನಿರೀಕ್ಷೆ ಸುಳ್ಳಾಗಿ ಬಹುತೇಕ ಹಿರಿಯರು ಮಕ್ಕಳಿಂದ ದೂರವಾಗಿ ಒಂಟಿಯಾಗಿ ಇಲ್ಲವೇ ವೃದ್ಧಾಶ್ರಮದಲ್ಲಿ ಬದುಕಿನ ಕೊನೆಯ ದಿನಗಳನ್ನು ಕಳೆಯುವ ದಾರುಣ ಸ್ಥಿತಿ ಉಂಟಾಗಿದೆ.

ಔದ್ಯೋಗಿಕ ಕ್ರಾಂತಿಯಿಂದಾಗಿ ಯುವಜನರು ಉದ್ಯೋಗ ಹುಡುಕಿ ನಗರದೆಡೆಗೆ ವಲಸೆ ಹೋಗುವುದು, ಗಂಡ-ಹೆಂಡತಿ ಇಬ್ಬರೂ ಜೀವನ ಸಾಗಿಸಲು ಉದ್ಯೋಗ ಮಾಡುವುದು, ಸ್ಪರ್ಧಾತ್ಮಕ ಜೀವನ ಶೈಲಿ, ವಿದೇಶಿ ಸಂಸ್ಕೃತಿಯ ಪ್ರಭಾವ, ಹೆಚ್ಚುತ್ತಿರುವ ವಿವಾಹ ವಿಚ್ಛೇದನೆಗಳಿಂದಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯು ಬದಲಾವಣೆಯನ್ನು ಕಂಡು ದೊಡ್ಡ ಕುಟುಂಬ ಒಡೆದು ದಂಪತಿ-ಮಕ್ಕಳ ವಿಭಕ್ತ ಕುಟುಂಬಗಳು ಹುಟ್ಟಿಕ್ಕೊಳ್ಳುತ್ತಿವೆ. ಬಿಜಿಯಾದ ಅಧುನಿಕ ಜೀವನ ಶೈಲಿ ಮತ್ತು ವಿದೇಶಿ ಸಂಸ್ಕೃತಿಯ ಪ್ರಭಾದಿಂದಾಗಿ ಯುವ ಜನರಲ್ಲಿ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿದೆ.
ಹಿರಿಯರ ಆರೈಕೆ ಮಾಡುವುದು ಕುಟುಂಬದ ಎಲ್ಲ ಸದಸ್ಯರ ಆದ್ಯ ಕರ್ತವ್ಯವಾಗಿದ್ದು ವೃದ್ಧ ಹೆತ್ತವರ ಭೌತಿಕ ಅಗತ್ಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ. ಆದಾಗ್ಯೂ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆಂದು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಟ ಬೆಳೆಯುತ್ತಿರುವುದು ನಿಜಕ್ಕೂ ದುರಂತದ ಸಂಗತಿ. ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಪಾಶ್ಚಾತ್ಯರ ಸಂಸ್ಕೃತಿ. ವಿದೇಶದಿಂದ ಆಮದಾದ ಈ ಪದ್ದತಿಗೆ ನಾವು ಬಲಿಯಾಗಿ ನಮ್ಮನ್ನು ಅಕ್ಕರೆಯಿಂದ ಪ್ರೀತಿಯಿಂದ ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿದ ಹೆತ್ತವರನ್ನು ಮುದಿತನ ಬಂತೆಂದು ವೃದ್ಧಾಶ್ರಮಕ್ಕೆ ಸೇರಿಸುವುದು ಎಷ್ಟು ಸರಿ…?
ಪಾಲಕರ ಮೇಲಿರುವ ನಿರ್ಲಕ್ಷತನ ಹಾಗೂ ಅಸಡ್ಡೆಯಿಂದಾಗಿ ಇಂದಿನ ಮಕ್ಕಳು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದರಿಂದ ದೇಶದ ಎಲ್ಲಾ ಭಾಗಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಇಂದು ದೊಡ್ಡ-ದೊಡ್ಡ ಉದ್ಯೋಗದಲ್ಲಿರುವ ಲಕ್ಷಾಂತರ ಸಂಬಳ ಸಂಪಾದಿಸುವ ಮಕ್ಕಳ ಪಾಲಕರೇ ಬಹುತೇಕ ವೃದ್ಧಾಶ್ರಮದಲ್ಲಿ ಕಾಣಸಿಗುತ್ತಿರುವುದು ಶೋಚನೀಯ ಸ್ಥಿತಿ. ಮಕ್ಕಳು ಉತ್ತಮ ಜೀವನ ಸಾಗಿಸುವಲ್ಲಿ ಅವರು ದೊಡ್ಡ ಸ್ಥಾನಕ್ಕೆ ತಲುಪುವಲ್ಲಿ ಪಾಲಕರ ಶ್ರಮ ಹಾಗೂ ತ್ಯಾಗ ಇದ್ದೇ ಇದೆ ಅನ್ನುವದಂತೂ ಸತ್ಯ. ತಮ್ಮ ಬಾಳಿನ ಮುಸ್ಸಂಜೆಯನ್ನು ಮಕ್ಕಳು-ಮೊಮ್ಮಕ್ಕಳೊಂದಿಗೆ ಆರಾಮವಾಗಿ ಕಳೆಯಬೇಕೆಂದುಕೊಂಡಿದ್ದ ಮುದಿಜೀವ ಬದುಕಿನ ಕೊನೆಗಾಲದಲ್ಲಿ ಮಗ ತನ್ನನ್ನು ಇಲ್ಲಿ ತಂದು ಬಿಟ್ಟನಲ್ಲ ಎಂದು ಕೊರಗುತ್ತ ಅನಾಥರಂತೆ ವೃದ್ಧಾಶ್ರಮದಲ್ಲಿ ಬದುಕುವ ಸ್ಥಿತಿ ನಿಜಕ್ಕೂ ಅಯೋಮಯ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಅದೆಷ್ಟೋ ತಂದೆ-ತಾಯಿಯರಿಗೆ ಬದುಕಿನ ಕೊನೆಗಾಲದಲ್ಲಿ ಸಿಗುವ ಉಡುಗೊರೆ ಈ ವೃದ್ಧಾಶ್ರಮದ ಜೀವನವೇ?
ಆಧುನಿಕತೆಯ ಬಿರುಗಾಳಿ, ಪಾಶ್ಚಾತ್ಯ ಸಂಸ್ಕೃತಿಯ ಅಳವಡಿಕೆಯಿಂದಾಗಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತು ಮಾನವೀಯತೆ ಸಂಸ್ಕಾರವನ್ನು ಮೂಲೆಗುಂಪಾಗಿಮಾಡಿ ಕೇವಲ ಹಣ-ಸ್ವಾರ್ಥಕ್ಕೆ ಬಲಿಯಾಗಿ ತಂದೆ-ತಾಯಿಯ ಪವಿತ್ರ ಸ್ಥಾನಕ್ಕೆ ಬೆಲೆ ನೀಡದೇ ವಯಸ್ಸಾದ ತಂದೆತಾಯಿಯನ್ನು ಮಕ್ಕಳು ವೃದ್ಧಾಶ್ರಮಕ್ಕೆ ತಳ್ಳುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ.
ಪ್ರೀತಿಯಿಂದ ಎತ್ತಿ-ಮುದ್ದಾಡಿ ಸಾಕಿ ಸಲುಹಿ ಮಮತೆ ವಾತ್ಸಲ್ಯ ಧಾರೆ ಎರೆದ ಹೆತ್ತ ತಂದೆ ತಾಯಿಗಳನ್ನು ಅವರ ಜೀವನದ ಕೊನೆಯ ಯಾನದಲ್ಲಿ ಬೆಸೆದ ನಂಟುಗಳನ್ನೆಲ್ಲ ಕಳಚಿ ವೃದ್ಧಾಶ್ರಮಕ್ಕೆ ನೂಕುತ್ತಿರುವುದು ಎಷ್ಟು ಸರಿ?.
ಎಚ್ಚರ! ತಿಳಿದಿರಲಿ ವೃದ್ಧಾಪ್ಯವೆಂಬುದು ಎಲ್ಲರಿಗೂ ಕಟ್ಟಿಟ್ಟ ಬುತ್ತಿ.ನೆನಪಿರಲಿ ಮುಂದೆ ನಿಮಗೂ ವಯಸ್ಸಾಗುತ್ತದೆ. ಇಂದು ನೀವು ನಿಮ್ಮ ತಂದೆತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ, ನಿಮಗೂ ವಯಸ್ಸಾದ ಮೇಲೆ ನಿಮ್ಮ ಮಕ್ಕಳೂ ನಿಮ್ಮನ್ನೂ ವೃದ್ಧಾಶ್ರಮಕ್ಕೆ ಸೇರಿಸಬಹುದು. ವಯಸ್ಸಾದ ತಂದೆ-ತಾಯಿಯನ್ನು ಬೀದಿಗಟ್ಟುವ ಅಥವಾ ವೃದ್ಧಾಶ್ರಮಕ್ಕೆ ದೂಡುವ ಸಂಸ್ಕೃತಿ ನಮ್ಮದಲ್ಲ. ನಮ್ಮನ್ನು ಪ್ರೀತಿಯಿಂದ ಸಾಕಿ ಸಲುಹಿದ ಪೋಷಕರಿಗೆ ಅವರ ಸಂಧ್ಯಾಕಾಲದಲ್ಲಿ ಸೇವೆ ಮಾಡುವುದೇ ಭಾರತೀಯ ಸಂಸ್ಕೃತಿ.ಹೆತ್ತವರಿಗೆ ಅವರ ಇಳಿವಯಸ್ಸಿನಲ್ಲಿ ಬದುಕಲು ನೆಮ್ಮದಿಯ ತಾಣದೊಂದಿಗೆ ಆರೊಗ್ಯಕರ ಸನ್ನಿವೇಶ ಒದಗಿಸುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ವೃದ್ಧಾಪ್ಯದಲ್ಲಿ ಹೆತ್ತವರಿಗೆ ಬೇಕಾಗಿರುವುದು ಮಕ್ಕಳ ಪ್ರೀತಿ ವಾತ್ಸಲ್ಯ, ಮೊಮ್ಮಕ್ಕಳ ಒಡನಾಟ ಕೌಟಂಬಿಕ ಪರಿಸರ ಪ್ರೀತಿಯ ಆರೈಕೆ ಅಷ್ಟೇ. ಇದೆಲ್ಲವುದರಿಂದ ವಂಚಿತರಾಗಿ ವೃದ್ಧಾಶ್ರಮಕ್ಕೆ ದೂಡಲ್ಪಡುವ ಹಿರಿಯರು ಅಲ್ಲಿ ಮಾನಸೀಕವಾಗಿ ನೊಂದು ಕುಗ್ಗುತ್ತಾ, ದಿನವೂ ಮಕ್ಕಳನ್ನು-ಮೊಮ್ಮಕ್ಕಳನ್ನು ನೆನೆಯುತ್ತಾ ಬಾಳ ಇಳಿಸಂಜೆಯಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರಲಿ.
ಸಂಸ್ಕಾರಗಳು ಮಾನವನಿಗೆ ಬಾಹ್ಯ ಮತ್ತು ಆತಂರಿಕ ಶುದ್ದತೆಯನ್ನು ಒದಗಿಸುವುದರಿಂದ ಅನುಭವದಿಂದ ಕೂಡಿರುವ ಹಿರಿಯರ ಹಿತನುಡಿಗಳು, ಮಕ್ಕಳು-ಮೊಮ್ಮಕ್ಕಳಿಗೆ ನೀತಿಪಾಠಗಳ ಮೂಲಕ ತಿಳುವಳಿಕೆ ನೀಡುವ ಹಿರಿಯರ ನುಡಿಗಳು ನಮ್ಮೊಳಗಿನ ಕತ್ತಲನ್ನು ನಿವಾರಿಸುತ್ತವೆ. ಭಾರತೀಯ ಮೂಲ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳು ಅವುಗಳ ಘನತೆ ದೂರದರ್ಶಕತೆ ಇನ್ನು ಮುಂತಾದ ಭಾರತೀಯ ಸಂಸ್ಕೃತಿಯ ಮಾನವ ಔನ್ನತ್ಯ ಗುಣಗಳನ್ನು ತಿಳಿಹೇಳುವ ಹಿರಿಯರು ಪ್ರತೀ ಮನೆಯಲ್ಲಿ ಇದ್ದರೆ ನಮ್ಮ ಶ್ರೇಷ್ಠ ಜೀವನಕ್ಕೆ ಆದರ್ಶದ ಹೊತ್ತಿಗೆಯಾಗಿ ಬದುಕು ಸಾರ್ಥಕ ವಾಗುವುದು. ವೃದ್ಧಾಪ್ಯ ವಿವೇಕದ ಸಾಕಾರ ರೂಪ. ಹಿರಿಯರು ಜ್ಞಾನ ಮತ್ತು ಅನುಭವದ ಸಂಗಮ. ಮನೆಗೊಬ್ಬರು ಹಿರಿಯರು ಇರಲೇಬೇಕು. ಹಿರಿಯರು ಮನೆಯಲ್ಲಿದ್ದರೆ ಮನೆಗೊಂದು ಭೂಷಣ. ಕೌಟುಂಬಿಕ, ಸಾಮಾಜಿಕ ಸಾಮರಸ್ಯ ಕಾಪಾಡುವಲ್ಲಿ ಹಿರಿಯರ ಪಾತ್ರ ಅಮೋಘ.
ಅಧುನಿಕತೆಯ ಅಮಲಿನಲ್ಲಿ ಕೊಚ್ಚಿಹೋಗುತ್ತಿರುವ ನಾವು ಇಂದಿನ ಯಾಂತ್ರಿಕ ಬದುಕಿಗೆ ದಾಸರಾಗದೇ ಭಾರತೀಯ ಸಂಸ್ಕೃತಿ ಸಂಸ್ಕಾರಗಳ ಸುಧೆಯನ್ನು ಹೊರಹೊಮ್ಮಿಸುತ್ತ, ಬಾಂಧವ್ಯದ ಬೇರುಗಳಾದ ಹಿರಿಯ ಜೀವಿಗಳನ್ನು ಅತ್ಯಂತ ಗೌರವಯುತವಾಗಿ ಪ್ರೀತ್ಯಾದರದಿಂದ ನೋಡುತ್ತ ಅವರ ಬದುಕಿನ ಮುಸ್ಸಂಜೆ ಆನಂದಮಯವಾಗಿರಲು ಕಾರಣರಾಗೋಣ.


ಪ್ರಕಾಶ ತದಡಿಕರ, ಮುಂಬಾಯ್
98217 13603

error: Content is protected !!