ಕೊರೊನಾ ಭಯ; ವಲಸಿಗರ ಚಿತ್ತ ಹಳ್ಳಿಗಳತ್ತ…

Home ಲೇಖನಗಳು ಕೃಷಿ ಕೊರೊನಾ ಭಯ; ವಲಸಿಗರ ಚಿತ್ತ ಹಳ್ಳಿಗಳತ್ತ…

ಕೊರೊನಾ ಭಯ; ವಲಸಿಗರ ಚಿತ್ತ ಹಳ್ಳಿಗಳತ್ತ…

ಭಾರತ ಹಳ್ಳಿಗಳ ನಾಡು, ಕೃಷಿ ಇಲ್ಲಿನ ಒಂದು ಸಂಸ್ಕೃತಿ. ವ್ಯವಸಾಯ ಜನರ ಮೂಲ ಉದ್ಯೋಗ. ಹಳ್ಳಿಗಳಲ್ಲಿ ವಾಸಿಸುವ ಜನರೆಲ್ಲಾ ಶ್ರಮಜೀವಿಗಳು.

ರೈತರೆಲ್ಲರೂ ಸೌಹಾರ್ದತೆಯ ಸಂಕೇತಗಳು. ಇಂತಹ ನೆಮ್ಮದಿಯ ಹಳ್ಳಿಗೂಡಿಗೆ ಕಳೆದೊಂದು ವಾರದಿಂದ ಮೂಲ ವಲಸಿಗರ ಆತಂಕ ಎದುರಾಗಿದೆ.

ಹಳ್ಳಿಗಳಲ್ಲಿ ಯಾರು ದುಡಿಯುವವರು ನಮಗೆ ಹತ್ತು ಸಾವಿರ ಸಂಬಳ ಸಿಕ್ಕರೆ ಸಾಕು ಎಂದು ಕೃಷಿಗೆ ಬೆನ್ನು ತೋರಿಸಿದ್ದ ನಮ್ಮ ಯುವ ಪಡೆ ಇಂದು ಕೊರೊನಾದಿಂದ ಬದುಕಿದೆಯಾ ಬಡಜೀವವೇ ಎಂಬಂತೆ ತಮ್ಮ ತಮ್ಮ ಗೂಡುಗಳನ್ನು ಸೇರಿವೆ.ಅದರಲ್ಲಿ ಕೆಲವರು ಅನಿವಾರ್ಯವಾಗಿ ದುಡಿಯಲು ನಗರಕ್ಕೆ ಹೋಗಿದ್ದರೆ, ಇನ್ನೂ ಕೆಲವರು ಕೈಲಾಗದೇ ಹೋದವರು.

ಈಗಿರುವ ಪೀಳಿಗೆಗೆ ಕೃಷಿಯೆಂದರೆ ಸ್ವಲ್ಪ ನಿರ್ಲಕ್ಷವೇ ಜಾಸ್ತಿ. ಏಕೆಂದರೆ ಅದರಲ್ಲಿ ನಮಗೆ ಲಾಭವಿಲ್ಲ ಎಂಬ ನಂಬಿಕೆ. ಎಷ್ಟೇ ಹಣ ಗಳಿಸಿದರೂ ತಿನ್ನಲು ಅನ್ನವೇ ಬೇಕಲ್ಲವೇ? ಎಷ್ಟೋ ಯುವಕರು ಲಾಕ್‍ಡೌನ್ ಆದ ನಂತರ ವೈರಸ್‍ನಿಂದ ಅಲ್ಲದೇ ಹಸಿವಿನಿಂದ ನಾವು ನರಳುವುದು ಬೇಡ ಎಂದು ನಗರದಿಂದ ಗುಳೇ ಬಂದದ್ದನ್ನು ಕಾಣುತ್ತೇವೆ. ಇದನ್ನೇ ಪ್ರಕೃತಿಯ ನಿಯಮ ಎನ್ನುವುದು. 

ಜನನ, ಮರಣ, ಪ್ರಕೃತಿ ಇವ್ಯಾವೂ ನಮ್ಮ ಕೈಯೊಳಗೆ ಇಲ್ಲ. ನಾವು ಯಾವಾಗ ಹುಟ್ಟಬೇಕು, ಯಾವಾಗ ಸಾಯಬೇಕು, ಹೇಗೆ ಅದು ಸಂಭವಿಸಬಹುದು ಎಂಬ ಪರಿಕಲ್ಪನೆ ಯಾರಿಗೂ ಗೊತ್ತಿಲ್ಲ. ಈ ಮೇಲಿನ ತತ್ವವನ್ನು ನಾವು ಒಪ್ಪಿ ನಡೆದರೆ ಸನ್ಮಾರ್ಗದಲ್ಲಿ ಸಾಗಲು ಕಷ್ಟವೆನಿಸುವುದಿಲ್ಲ. ಆದರೂ ಬಹಳಷ್ಟು ಯುವಕರು ವಿದೇಶದಿಂದ ಹಿಂತಿರುಗಿ ಬಂದಾಗ ಯಾವ ತಂದೆ-ತಾಯಿಯೂ ಒಳಗೆ ಬರಬೇಡ ಎನ್ನಲಿಲ್ಲ. ಹೆತ್ತ ಕರುಳಿಗೆ ಮಗ/ಮಗಳು ಕಣ್ಮುಂದೆ ಇದ್ದರೆ ಸಾಕು ಎನ್ನುವ ಮನೋಭಾವನೆಯಿರುತ್ತದೆ. ಆದರೂ ಸ್ವಲ್ಪಗಟ್ಟಿ ಮನಸ್ಸು ಮಾಡಿ ಹೊರಗಡೆಯಿಂದ ಬಂದವರನ್ನು ಮನೆಯಲ್ಲಿಯೇ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ಸೋಂಕಿನಿಂದ ಮುಕ್ತಿ ಪಡೆಯಬೇಕು. ಸಾಮಾಜಿಕ ಹಾಗೂ ವೈಯಕ್ತಿಕ ಅಂತರವನ್ನು ಕಾಪಾಡಿಕೊಳ್ಳುವುದರಿಂದ ಕುಟುಂಬಕ್ಕೂ ಮತ್ತು ಸಮಾಜಕ್ಕೂ ಒಳಿತು ಎಂಬುದನ್ನು ತಾವುಗಳು ತೋರಿಸಿಕೊಟ್ಟಿದ್ದರೆ ಉತ್ತಮ. ಬಹಳ ಹಳ್ಳಿಗಳಲ್ಲಿ ಇಂದು ನೈರ್ಮಲ್ಯದ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಸೋಂಕು ಹರಡಿದರೆ ಮುಂದಾಗುವುದನ್ನು ಊಹಿಸಲು ಅಸಾಧ್ಯ. 

ಈ ವೈರಾಣು ಸೋಂಕಿತರಿಗೆ 14 ದಿನಗಳವರೆಗೆ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಯುವಕರು ನಮಗೆಲ್ಲಾ ಏನೂ ಆಗಿಲ್ಲವೆಂದು ಊರು ಸುತ್ತುವುದನ್ನು ಬಿಟ್ಟು ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು. ಕೆಲ ಹಳ್ಳಿಗಳಲ್ಲಂತೂ ಯುವಕರ ಬೈಕ್ ಸವಾರಿ ಇನ್ನೂ ಜೋರಾಗಿಯೇ ಇದೆ. ಇಂಥವರಿಗೆ ದೇಹದ ಮೇಲೆ ಸೀಲ್ ಹಾಕಲು ನಮ್ಮ ಪೊಲೀಸ್ ಇಲಾಖೆಯೂ ಸಿದ್ದವಿದೆ. ಮನೆಯ ಹಿರಿಯರು ಸ್ವಲ್ಪ ಮಕ್ಕಳಿಗೆ ಬುದ್ದಿವಾದ ಹೇಳಿ ಮನೆಯಲ್ಲೇ ಕೂರಿಸಿದರೆ ಸಮಾಜಕ್ಕೆ ಒಳಿತು.

ಯುವ ಜನತೆಗೆ ಕೆಲ ಸಲಹೆಗಳೇನೆಂದರೆ ಬರೀ ಕೃಷಿಯಿಂದ ಲಾಭವಾಗಲಿಲ್ಲವೆಂದರೆ ಉಪಕಸುಬು ಗಳನ್ನು ಮಾಡಿ. ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಹೀಗೆ ಹಲವಾರು ಉದ್ದಿಮೆಗಳಿವೆ. ಇವುಗಳಲ್ಲಿ ತಮಗಿಷ್ಟವಾದ ಉದ್ದಿಮೆಯನ್ನು ಮಾಡಲು ತೊಂದರೆಯೇನು. ಒಮ್ಮೆ ನಷ್ಟವಾದರೂ ಆಗಲಿ ಗೆಲ್ಲುವ ಛಲ ನಿಮ್ಮಲ್ಲಿ ಹುಟ್ಟುವುದಿಲ್ಲವೇ? ಅದಕ್ಕೆ ನಾನು ಹೇಳುವುದು ಮೊದಲು ನಿಮ್ಮ ಮನಸ್ಸನ್ನು ಹತೋಟಿಗೆ ತೆಗೆದುಕೊಳ್ಳಿ.

ಒಬ್ಬ ವ್ಯಕ್ತಿಯ ಉದ್ಧಾರ–ಅವನತಿ ಅದೃಷ್ಟವನ್ನು ಅವಲಂಬಿಸಿಲ್ಲ. ಅದು ಅವನ ಆತ್ಮಸ್ಥೈರ್ಯದ ಮೇಲೆ ಅವಲಂಬಿತವಾಗಿದೆ. ಮನಸಿನ ಮೇಲೆ ಹತೋಟಿ ಸಾಧಿಸಿದವರು ಅದ್ಭುತ ಸಾಧನೆಯನ್ನು ಮಾಡುವರು. ಮನಸ್ಸಿನ ಗುಲಾಮರಾದವರು ಇಂದ್ರಿಯಗಳ ದಾಸರಾಗಿ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುವರು ಎಂದು ಬಹಳ ವರ್ಷಗಳ ಹಿಂದೆ ಶರಣರು ಹೇಳಿದ್ದಾರೆ. ದೇಹ ಒಂದೆಡೆ ಸ್ಥಿರವಾಗಿ ಕುಳಿತರೂ ಮನಸ್ಸು ಎಲ್ಲೆಲ್ಲೋ ಹೋಗಿ ಬರುತ್ತದೆ. ಹೇಗೆ ನಿಮ್ಮೂರೇ ನಿಮಗೆ ಶಾಶ್ವತವೋ, ನೀವೆಲ್ಲಾ ಬೇರೆ ಬೇರೆ ನಗರಗಳನ್ನು ಸುತ್ತಿ ಮತ್ತೆ ಸ್ವಸ್ಥಾನಕ್ಕೆ ಬಂದಂತೆ. ಆದುದರಿಂದ ಇನ್ಮುಂದೆಯಾದರೂ ತಾವುಗಳು ಕೃಷಿ ಕಾಯಕದಲ್ಲಿ ಮನಸ್ಸು ಮಾಡಿ ಒಳ್ಳೆಯ ಪ್ರಗತಿ ಸಾಧಿಸಿರಿ.


ಕೊರೊನಾ ಭಯ; ವಲಸಿಗರ ಚಿತ್ತ ಹಳ್ಳಿಗಳತ್ತ... - Janathavani
ಎಂ.ಜಿ. ಬಸವನಗೌಡ

ತೋಟಗಾರಿಕೆ ವಿಜ್ಞಾನಿಗಳು,
ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ.
9483426955
[email protected]

error: Content is protected !!