ಗ್ರಾ.ಪಂ.ಒಪ್ಪಿಗೆ ನೀಡಿದರೆ ಮುಂದಿನ ವರ್ಷದಲ್ಲೇ ಕ್ರಮ: ಸಚಿವ ನಾಗೇಶ್
ಬೆಳಲಗೆರೆ ಶತಮಾನೋತ್ಸವ ಶಾಲಾ ಕಟ್ಟಡ ಉದ್ಘಾಟನೆ
ದಾವಣಗೆರೆ, ಅ. 28- ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂರ್ನಾಲ್ಕು ಗ್ರಾಮಗಳಿಗೆ ಅನುಕೂಲವಾಗುವಂತೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಶಾಲೆ ಪ್ರಾರಂಭಿಸಲು ಚಿಂತನೆ ನಡೆಸಲಾ ಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಚನ್ನಗಿರಿ ತಾಲ್ಲೂಕು ಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಶತಮಾನೋತ್ಸವ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಆಯಾ ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಿ ಒಪ್ಪಿಗೆ ಸೂಚಿಸಿ ಪತ್ರ ನೀಡಿದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿಯೇ ಶಾಲೆ ಪ್ರಾರಂಭವಾಗುವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಾಲೆಯು 2 ಕಿ.ಮೀ. ಗಿಂತ ಹೆಚ್ಚು ದೂರವಿದ್ದರೆ, ಅಂತಹ ಕಡೆ ಮಕ್ಕಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಯೋಜಿಸ ಲಾಗುವುದು, ಆದರೆ ಶಿಕ್ಷಣ ಇಲಾಖೆ ಯಿಂದಲೇ ಬಸ್ ವ್ಯವಸ್ಥೆ ಮಾಡುವ ಚಿಂತನೆ ಇಲ್ಲ. ಬದಲಾಗಿ ಬೇರೆ ಸ್ವರೂಪದ ಬಗ್ಗೆ ಯೋಜಿಸಲಾಗುವುದು ಎಂದರು.
ಬೆಳಲಗೆರೆ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶತಮಾನೋತ್ಸವ ಶಾಲಾ ಕಟ್ಟಡ ಉತ್ತಮವಾಗಿ ನಿರ್ಮಾಣ ಗೊಂಡಿದ್ದು, ನೀಡಿರುವ ಅನುದಾನ ಸಂಪೂರ್ಣವಾಗಿ ಸದ್ವಿನಿಯೋಗವಾಗಿದೆ. ಮಕ್ಕಳ ಶಿಕ್ಷಣಕ್ಕೆ ಶಾಲಾ ಕೊಠಡಿ ಕೇವಲ ನಿಮಿತ್ತ ಮಾತ್ರ. ಶಾಲಾ ಆವರಣವೂ ಕೂಡ ಮಕ್ಕಳಿಗೆ ಹೊಸ ಹೊಸ ಶಿಕ್ಷಣಕ್ಕೆ ಪೂರಕವಾಗಿ ಆಲೋಚನೆಗಳು ಬರುವಂತಿರಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 48 ಸಾವಿರ ಶಾಲೆಗಳಿದ್ದು, ಅದರಲ್ಲಿ 29,300 ಶಾಲೆಗಳು ಉತ್ತಮ ಶಾಲೆಗಳಾಗಿವೆ. 14 ಸಾವಿರ ಶಾಲೆಗಳಲ್ಲಿ ಅಲ್ಪಸ್ವಲ್ಪ ಕೊರತೆಗಳಿದ್ದರೆ, 7-8 ಸಾವಿರ ಶಾಲೆಗಳಲ್ಲಿ ಹೆಚ್ಚು ಕೊರತೆಗಳಿವೆ. ಖಾಸಗಿ ಶಾಲೆಗಳು ಕೇವಲ ಹಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಆದರೆ ಸರ್ಕಾರಿ ಶಾಲೆಗಳು ಕೇವಲ ಒಬ್ಬ ಕಲಿಯುವ ವಿದ್ಯಾರ್ಥಿ ಇದ್ದರೂ ಶಾಲೆಗಳನ್ನು ನಡೆಸುತ್ತಿವೆ ಎಂದು ಹೇಳಿದರು.
ಶಾಲೆಗಳ ಅಭಿವೃದ್ಧಿಯಲ್ಲಿ ಹಳೆಯ ವಿದ್ಯಾಥಿಗಳ ಕೊಡುಗೆ, ಗ್ರಾಮಸ್ಥರ ಸಹಕಾರ ಹಾಗೂ ಎಸ್.ಡಿ.ಎಂ.ಸಿ ಸಮಿತಿಯ ಸಮನ್ವಯತೆ ಮಹತ್ವದ್ದು. ಸರ್ಕಾರಿ ಶಾಲೆಗಳಲ್ಲಿ ಕಲಿಯುವುದು ಕೀಳರಿಮೆ ಎಂದು ಭಾವಿಸದೇ ಮಕ್ಕಳನ್ನು ದಾಖಲಿಸಿ ಪ್ರೋತ್ಸಾಹಿಸಬೇಕು. ಇತ್ತೀಚೆಗೆ ನಡೆದ ಯು.ಪಿ.ಎಸ್.ಸಿ ಗೆ ಆಯ್ಕೆಯಾದ ರಾಜ್ಯದ 38 ಅಭ್ಯರ್ಥಿಗಳಲ್ಲಿ ಸುಮಾರು 20 ಅಭ್ಯರ್ಥಿಗಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತಿರುವುದು ಸರ್ಕಾರಿ ಶಾಲೆಗಳ ಮೌಲ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.
ಪಟೇಲರು ಓದಿದ್ದು ಸರ್ಕಾರಿ ಶಾಲೆಯಲ್ಲಿ
ರಾಜ್ಯ, ರಾಷ್ಟ್ರ ಕಂಡ ಅಪರೂಪದ ನಾಯಕ, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಅವರ ಭಾಷಾ ಪ್ರೌಢಿಮೆ, ಅನುಭವ, ಇಂಗ್ಲೀಷ್ ಜ್ಞಾನ, ಸಾಹಿತ್ಯ ಜ್ಞಾನ ಯಾರಿಗಿಂತ ಕಡಿಮೆ ಇತ್ತು? ಯುಪಿಎಸ್ಸಿನಲ್ಲಿ ಈಚೆಗೆ ಉತ್ತೀರ್ಣರಾದ ರಾಜ್ಯದ 36 ಮಕ್ಕಳಲ್ಲಿ 20 ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿದವರು. ಅದರಲ್ಲೂ ಸರ್ಕಾರಿ ಶಾಲೆಯಲ್ಲಿ ಓದಿದವರು. ಆದರೆ, ನಮ್ಮ ಪಾಲಕರಿಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆ, ಕನ್ನಡ ಮಾಧ್ಯಮದಲ್ಲಿ ಓದಿಸಲು ಧೈರ್ಯವಿಲ್ಲ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ
ಬೆಳಲಗೇರೆ ಗ್ರಾಮದಲ್ಲಿ ಶಿಕ್ಷಕರ ವರ್ಗಾವಣೆಗೆ ಕೈಗೊಂಡಿರುವ ಕ್ರಮದಿಂದ ಶಿಕ್ಷಕರು ಪರದಾಡುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಶ್, ಮೂರು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಎರಡು ದಿನದಿಂದ ಮತ್ತೆ ಶುರುವಾಗಿದ್ದು, ಎಲ್ಲ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ ಶಿಕ್ಷಕರನ್ನು ನೇಮಕಾತಿ ಮಾಡುವುದು ಮಕ್ಕಳಿಗೆ ಪಾಠ ಮಾಡುವುದಕ್ಕಾಗಿ ಹೊರತು ಸಂಸಾರ ನೋಡಿ ಕೊಳ್ಳುವುದಕ್ಕಲ್ಲ ಎಂದು ಹೇಳಿದರು.
ಶಿಕ್ಷಕರ ಸಮಸ್ಯೆಗಿಂತ ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ. ಬಳಿಕ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ ವಿರೋಧಿಸಿ ಒಂದು ಪತ್ರವು ನಮಗೆ ಬಂದಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ಕೇವಲ ಮಾದರಿ ಶಾಲೆಯಿದ್ದರೆ ಸಾಲದು ಮಾದರಿ ಶಿಕ್ಷಕರಿರಬೇಕು. ಆಗ ಮಾತ್ರ ಮಕ್ಕಳು ಶಾಲೆಗೆ ಸೇರಲು ಇಷ್ಟಪಡುತ್ತಾರೆ. ಒಂದು ಶಾಲೆಯನ್ನು ಉಳಿಸಿ ಬೆಳೆಸುವುದು ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳ ಕೈಯಲ್ಲಿದೆ. ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನು ನೀಡಬೇಕು ಎಂದರು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಪ್ರತಿ ಗ್ರಾ.ಪಂ. ಮಟ್ಟದಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಶಾಲೆಗಳು ಆಗಬೇಕು. ಹೆಚ್ಚಿನ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ನೀಡಬೇಕು. ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಕಟ್ಟಡಗಳ ನಿರ್ಮಾಣ ಹೊಣೆಯನ್ನು ಎಸ್ಡಿಎಂಸಿ ಗೆ ವಹಿಸಬೇಕು. ನಮ್ಮ ಗ್ರಾಮದ ಶಾಲೆ ಎಂಬ ಅಭಿಮಾನ ಬರುವುದರಿಂದ ಗುಣಮಟ್ಟದ ಕಟ್ಟಡಗಳು ನಿರ್ಮಾಣವಾಗುತ್ತವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನೀತಿ ನಿಯಮಗಳನ್ನು ರೂಪಿಸುವಾಗ ಕೇವಲ ಸರ್ಕಾರ, ಕಾರ್ಯದರ್ಶಿಗಳ ಮಟ್ಟದಲ್ಲಿ ಮಾತ್ರವಲ್ಲ, ಶಿಕ್ಷಕ ಸಮುದಾಯದಿಂದಲೂ ಅಭಿಪ್ರಾಯ, ಸಲಹೆಗಳನ್ನು ಪಡೆದಾಗ ಮಾತ್ರ ನೀತಿ ನಿಯಮಗಳು ಪರಿಣಾಮಕಾರಿಯಾಗಬಲ್ಲವು ಎಂದರು.
ಗ್ರಾ.ಪಂ. ಅಧ್ಯಕ್ಷ ಜಯಪ್ಪ ದೇವೀರಿ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ (ಅಭಿವೃದ್ಧಿ) ಹೆಚ್.ಕೆ. ಲಿಂಗರಾಜ್, ಬಿಇಒ ಕೆ. ಮಂಜುನಾಥ್, ಗಣ್ಯರಾದ ಅನಿತ್ಕುಮಾರ್, ಬಾತಿ ನಾಗರಾಜಪ್ಪ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು, ವಿವಿಧ ಅಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.