ಮಲ್ಲಿಕಾರ್ಜುನ್ ಖರ್ಗೆ
ದಾವಣಗೆರೆ, ಫೆ. 25- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಪ್ಪು ಕಾಯ್ದೆಗಳು ರೈತ ವಿರೋಧಿ ಅಷ್ಟೇ ಅಲ್ಲದೇ ಜನವಿರೋಧಿಯಾಗಿದೆ. ಈ ಬಗ್ಗೆ ಮುಂದಿನ ಲೋಕಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಅವರು, ಇಂದು ನಗರದ ಎಂಬಿಎ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕಾಯ್ದೆಗಳ ವಿರುದ್ಧ ಪಕ್ಷದ ನಾಯಕ ರಾಹುಲ್ ಗಾಂಧಿ ಪಂಜಾಬ್ನಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸಿದರು. ಈಗ ರೈತರು ಹೋರಾಟವನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ. ಅಷ್ಟೇ ಅಲ್ಲದೇ ಸಣ್ಣ-ಪುಟ್ಟ ಪಕ್ಷಗಳೊಂದಿಗೂ ಚರ್ಚೆ ನಡೆಸಿ, ಮುಂದಿನ ಲೋಕಸಭೆ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ತಂದಿರುವ ಮೂರು ಕಾಯ್ದೆಗಳ ಪೈಕಿ ಎಪಿಎಂಸಿ ಕಾಯ್ದೆ ಎಪಿಎಂಸಿ ನಾಶ ಮಾಡಿ, ಶ್ರೀಮಂತರು, ಕಾರ್ಪೋರೇಟ್ ಕಂಪನಿಗಳ ಮುಂದೆ ರೈತರು ಕೈ ಚಾಚುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಿದೆ. ಗುತ್ತಿಗೆ ಆಧಾರದ ಮೇಲೆ ರೈತರ ಭೂಮಿ ಪಡೆಯುವ ಕಾರ್ಪೋರೇಟ್ ಕಂಪನಿಗಳು ಅದನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಆಗಲಿದೆ. ಇದರಿಂದ ದೇಶದಲ್ಲಿ ಎರಡು ಹೆಕ್ಟೇರ್ಗಿಂತ ಕಡಿಮೆ ಇರುವ ಶೇ.85.4 ರಷ್ಟು ರೈತರ ಬದುಕು ನಾಶ ಆಗಲಿದೆ. ಇಂಥ ಬೆಳವಣಿಗೆಯಿಂದ ಆಹಾರದ ಕೊರತೆ ಉಂಟಾಗಿ, ಜನರು ಸಂಕಷ್ಟಕ್ಕೆ ಹೋಗಲಿದ್ದಾರೆ. ರೈತರನ್ನು ಕಾರ್ಪೋರೇಟ್ ಕಂಪನಿಗಳು ಗುಲಾಮರನ್ನಾಗಿ ಮಾಡಿಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
1955ರಲ್ಲಿ ಹಿರಿಯ ರಾಜಕಾರಣಿಗಳು, ಸ್ವತಂತ್ರ್ಯ ಹೋರಾಟಗಾರರನ್ನು ಒಳಗೊಂಡಂತಹ ಸರ್ಕಾರ ಅವಶ್ಯಕ ವಸ್ತುಗಳ ಸಂಗ್ರಹಣ ಕಾಯ್ದೆ ಜಾರಿಗೆ ತಂದು ವಸ್ತುಗಳನ್ನು ಕಡಿಮೆ ಬೆಲೆಗೆ ಸಿಗುವಂತಹ ವಾತಾವರಣ ಸೃಷ್ಟಿಸಿ, ಶ್ರೀಮಂತರ ಪರ ನಿಲುವು ಹೊಂದಲಾಗಿದೆ ಎಂದರು.