ಆದಿತ್ಯ ಬಿರ್ಲಾ ಶಾಲೆಯಲ್ಲಿ ಕೊಲ್ಯಾಜ್ ಬಿಡುಗಡೆ
ಹರಿಹರ, ಏ. 14- ಬೇಸಿಗೆ ಬಂತೆಂದರೆ ಸಾಕು ಎಲ್ಲೆಡೆ ನೀರಿನ ಅಭಾವ. ನಮ್ಮದು ಕೃಷಿ ಪ್ರಧಾನ ದೇಶ. ರೈತರಿಗೆ ತಮ್ಮ ಬೆಳೆಗಳನ್ನು ಬೆಳೆಯಲು ನೀರು ಅತ್ಯವಶ್ಯ. ಹಾಗಾಗಿ ಈ ಬಾರಿ ನಮ್ಮ ಪ್ರಧಾನಿಯವರು `ಕ್ಯಾಚ್ ದಿ ರೇನ್’ ನೀರನ್ನು ಸಂರಕ್ಷಿಸಿ ಎಂದು ಕರೆ ಕೊಟ್ಟಿದ್ದಾರೆ. ಆ ಪ್ರಯುಕ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗುರು ದ್ರೋಣಾಚಾರ್ಯ ಸಮ್ಮಾನ ಪುರಸ್ಕೃತ ಚಿತ್ರಕಲಾವಿದ ಡಾ|| ಜಿ.ಜೆ. ಮೆಹೆಂದಳೆಯವರು ಜಲ ಸಂರಕ್ಷಣೆ ಅಭಿಯಾನದ ಅಂಗವಾಗಿ ಈ ಕೊಲ್ಯಾಜ್ ಚಿತ್ರ ರಚಿಸಿ ಆ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
`ಕ್ಯಾಚ್ ದಿ ರೇನ್’ ಜಲ ಸಂರಕ್ಷಣೆ ಅಭಿಯಾನದ ಕೊಲ್ಯಾಜನ್ನು ಆದಿತ್ಯ ಬಿರ್ಲಾ ವಿದ್ಯಾಲಯದ ಪ್ರಾಂಶುಪಾಲ ಝಾನ್ ದಿನಕರನ್ ರವರು ಆದಿತ್ಯ ಬಿರ್ಲಾ ಶಾಲೆಯ ಆವರಣದಲ್ಲಿ ಬಿಡುಗಡೆ ಮಾಡಿದರು. ಕೊಲ್ಯಾಜ್ ಚಿತ್ರ ಬಿಡುಗಡೆ ನಂತರ ಮಾತನಾಡಿದ ಅವರು ತಾವು ಸಣ್ಣವರಿದ್ದಾಗ 1980 ರಲ್ಲಿ ಆಟದ ನಂತರ ಹಾಗೆ ನಲ್ಲಿ ನೀರಿಗೆ ಬಾಯಿ ಹಚ್ಚಿ ನೀರು ಕುಡಿಯುತ್ತಿದ್ದೆವು. ಆಗ ಫಿಲ್ಟರ್ ನೀರಿನ ದೃಶ್ಯ ಕಂಡುಬಂದಿರಲಿಲ್ಲ. ಅಂದರೆ ನೀರು ಕೂಡಾ ಅಷ್ಟು ಶುದ್ಧವಾಗಿತ್ತು. ಆದರೆ ದಿನಕಳೆದಂತೆ ಇಂದು ನೀರನ್ನು ಕೊಂಡು ತೆಗೆದುಕೋಳ್ಳುತ್ತಿ ದ್ದೇವಲ್ಲದೇ ನೀರಿನ ಶುದ್ದತೆ ಕೊರತೆಯಾಗಿ ನಾವೆಲ್ಲ ಫಿಲ್ಟರ್ ನೀರಿಗೆ ಮೊರೆ ಹೋಗಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಒಂದಿನ ನೀರಿನ ಹಾಹಾಕಾರವೆರಗಬಹುದು ಎಂದರು.
ಶಾಲೆಯ ವಿಜ್ಞಾನ ಶಿಕ್ಷಕರಾದ ಆರ್.ಎಸ್. ದೇವರಾಜ್, ಕೆ. ಸಂತೋಷ್, ಲಿಸ್ಸಿ ಬೆನ್ನಿ, ಶಶಿಧರ್ ಎಸ್. ಸಿಗ್ಲಿ, ಶಾಂತಿ ಎನ್., ಲಕ್ಷ್ಮಿ ಜಿ., ಯು. ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.