ನವಜಾತ ಶಿಶು ಕಳವು ಪ್ರಕರಣದ ಅಹೋರಾತ್ರಿ ಧರಣಿ ತಾತ್ಕಾಲಿಕ ಹಿಂಪಡೆ

ದಾವಣಗೆರೆ, ಏ.3- ನಗರದ ನಗರದ ಹಳೇ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ 15 ದಿನಗಳ ಹಿಂದೆ ನವಜಾತ ಶಿಶು ಕಳುವಾಗಿರುವ ಪ್ರಕರಣ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಅಹೋರಾತ್ರಿ ಧರಣಿಯನ್ನು ಇಂದು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಗಡುವು: ಹೆರಿಗೆ ಆಸ್ಪತ್ರೆ ಮುಂಭಾಗದಲ್ಲಿ ಮಗುವಿನ ಪೋಷಕರ ಸಹಿತ ಕಳೆದ 10 ದಿನಗಳಿಂದ ಹೋರಾಟ ನಡೆಸಲಾಗುತ್ತಿತ್ತು. ಇಂದಿಗೆ ಅಹೋರಾತ್ರಿ ಧರಣಿಯು 5ನೇ ದಿನಕ್ಕೆ ಕಾಲಿಟ್ಟಿತ್ತು. ಕಳೆದ 15 ದಿನಗಳ ಈ ಪ್ರಕರಣ ಇತ್ಯರ್ಥ ಹಾಗೂ ಮಗುವಿನ ಪತ್ತೆ ವಿಚಾರವಾಗಿ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಆಗಮಿಸು ವಂತೆ ಧರಣಿ ನಿರತರು ಬಿಗಿಪಟ್ಟು ಹಿಡಿದಿದ್ದರು. ಸಂಜೆ ನಗರ ಡಿವೈಎಸ್ಪಿ ಗುರುಬಸವರಾಜ್ ಅವರು ಧರಣಿ ನಿರತ ಸ್ಥಳಕ್ಕಾಗಮಿಸಿ ಮಗುವಿನ ಪೋಷಕರಿಗೆ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರುಗಳೊಂದಿಗೆ ಮಾತನಾಡಿ ಹೋರಾಟ ಕೈ ಬಿಡುವಂತೆ ಮನವೊಲಿಸಿದ್ದಾರೆ.

ಈಗಾಗಲೇ ನವಜಾತ ಶಿಶುವಿನ ಪತ್ತೆ ಕಾರ್ಯ ಮುಂದುವರೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿರುವ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಯುತ್ತಿದ್ದು, ಬೆಂಗಳೂರಿನಿಂದ ತಾಂತ್ರಿಕ ತಜರನ್ನು ಕರೆಸಿ, ತನಿಖೆ ನಡೆಸಲಾಗುತ್ತಿದೆ. ಅತಿ ಶೀಘ್ರದಲ್ಲಿ ಮಗುವನ್ನು ಹುಡುಕಿ ಕೊಡುವ ದೃಢ ಭರವಸೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರತಿನಿಧಿಯಾಗಿ ಆಗಮಿಸಿದ್ದ ಡಿವೈಎಸ್ಪಿ ಗುರುಬಸವರಾಜ್ ನೀಡಿದ್ದಾರೆ. ಇದಕ್ಕಾಗಿ 10 ದಿನಗಳ ಕಾಲಾವಕಾಶ ಕೇಳಿದ್ದು, ಅಲ್ಲಿಯ ತನಕ ಗಡುವು ನೀಡಲಾಗಿದೆ ಎಂದು ಜೆಡಿಎಸ್‍ನ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜೆ. ಅಮಾನುಲ್ಲಾ ಖಾನ್ ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಕಾರ್ಮಿಕ ಮುಖಂಡ ಕಾಂ. ಉಮೇಶ್ ಅವರು ಹೋರಾಟಗಾರರಿಗೆ ಹಾಗೂ ಶಿಶುವಿನ ಕುಟುಂಬಸ್ಥರಿಗೆ ಸಮಜಾಯಿಷಿ ಹೇಳಿದ ಕಾರಣ ಅಹೋರಾತ್ರಿ ಧರಣಿ ಹಿಂದಕ್ಕೆ ಪಡೆಯಲಾಗಿದೆ ಎಂದು ಟಿ. ಅಸ್ಗರ್ ಹೇಳಿದ್ದಾರೆ.

ಈ ವೇಳೆ ಮಗುವಿನ ಪೋಷಕರಾದ ಉಮೇಸಲ್ಮಾ, ಇಸ್ಮಾಯಿಲ್ ಜಬೀವುಲ್ಲಾ, ಎಂ. ಕರಿಬಸಪ್ಪ, ಜಬೀನಾ ಖಾನಂ, ಮನ್ಸೂರ್ ಅಲಿ ಸೇರಿದಂತೆ ಇತರರು ಇದ್ದರು. 

error: Content is protected !!