5 ಕೋ. ಮೌಲ್ಯದ ಪಾಲಿಕೆ ಜಾಗ ಕಬಳಿಸಲು ಬಿಜೆಪಿ ಸಂಚು

ನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಆರೋಪ

ದಾವಣಗೆರೆ, ಏ.3- ನಾಗರಿಕರ ಹಿತರಕ್ಷಣೆಗಾಗಿ ಮೀಸಲಿಟ್ಟಿದ್ದ ನಗರ ಪಾಲಿಕೆಗೆ ಸೇರಿದ 25 ಕೋಟಿ ರೂ. ಮೌಲ್ಯದ ನಿವೇಶನವನ್ನು ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಮಂಜೂರು ಮಾಡಿಸಿಕೊಂಡು ಜಾಗ ಕಬಳಿಸಲು ಬಿಜೆಪಿಯವರು ತೆರೆಮರೆ ಕಸರತ್ತು ನಡೆಸುತ್ತಿದ್ದು, ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಸ್ಪಷ್ಟಪಡಿಸಿದ್ದಾರೆ.

ನಗರದ ಎಂಸಿಸಿ ಬಿ ಬ್ಲಾಕ್‍ನಲ್ಲಿ ಪಾಲಿಕೆಗೆ ಸೇರಿದ ನಿವೇಶನ 3681/10, 3681/10ಎ, 3681/11 ಹಾಗೂ 3681/12 ಅಡಿ ನಿವೇಶನ ಇದ್ದು, ಇದರ ಒಟ್ಟು ಮೌಲ್ಯ 25 ಕೋಟಿಗ ಳಾಗಿವೆ. ಈ ನಿವೇಶನದಲ್ಲಿ ಈ ಭಾಗದ ನಾಗರಿ ಕರಿಗಾಗಿ ಒಳಾಂಗಣ ಕ್ರೀಡಾಂಗಣ, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಪಾಲಿಕೆಗೆ ಆದಾಯ ಬರುವಂತೆ ಕ್ರಮ ಕೈಗೊಳ್ಳಲು ನಗರ ಪಾಲಿಕೆಯ ಆಡಳಿತ ವರ್ಗಕ್ಕೆ ಈ ಭಾಗದ ನಾಗರಿಕರು, ಹಿತರಕ್ಷಣಾ ಸಮಿತಿಯವರು ಹಾಗೂ ಕ್ರೀಡಾ ಪಟುಗಳ ಜೊತೆ ಸೇರಿ ಮನವಿ ನೀಡಿ ಒತ್ತಾಯ ಮಾಡಿದ್ದೇವೆ. ಇತ್ತೀಚೆಗೆ ಶಾಸಕ ಎಸ್.ಎ. ರವಿಂದ್ರನಾಥ್ ಅವರೂ ಸಹ ಸ್ಪಂದಿಸಿ, ಈ ನಿವೇಶನವನ್ನು ನಾಗರಿಕರ ಉಪಯೋಗಕ್ಕೆ ನೀಡುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯಕ್ಕೆ ಜಾಗ ಮಂಜೂರಾತಿ ಮಾಡುವಂತೆ ಅಧ್ಯಕ್ಷ ವೀರೇಶ್ ಹನಗವಾಡಿ ಮನವಿ ಪತ್ರ ನೀಡಿದ್ದು, ಪಾಲಿಕೆ ಆಯುಕ್ತರು ನಮ್ಮ ಗಮನಕ್ಕೆ ತಂದಿಲ್ಲ. ಜಾಗ ಕಬಳಿಸಲು ಸದ್ದಿಲ್ಲದೇ ಬಿಜೆಪಿಯವರು ಕಸರತ್ತು ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಇವು ಅವಕಾಶವನ್ನು ಕೊಡುವುದಿಲ್ಲ. `ನಮ್ಮ ಜಾಗ ನಮ್ಮ ಹಕ್ಕು’ ಘೋಷ ವಾಕ್ಯದೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. 

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯಡಿ ದಾವೆ ಹೂಡುತ್ತೇವೆ ಎಂದರು.

2023 ರ ಚುನಾವಣೆಯಲ್ಲಿ ಸೋಲು ಖಚಿತ ಎಂಬ ಕಾರಣಕ್ಕಾಗಿ ಆರ್‍ಎಸ್‍ಎಸ್‍ನ ವರು ಹಿಜಾಬ್ ಆಯಿತು, ಈಗ ಹಲಾಲ್ ಮತ್ತು ಜಟ್ಕಾ ಕಟ್ ಈ ರೀತಿಯ ಸರಣಿಗಳನ್ನು ಬಿಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ. ದಾವಣಗೆರೆ ಪಾಲಿಕೆಯಲ್ಲಿಯೂ ಕೂಡ ದುರಾ ಡಳಿತದಿಂದ ಅಧಿಕಾರ ಹಿಡಿದು ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, ಬೆಲೆ ಏರಿಕೆಯ ವೈಫಲ್ಯ ಮುಚ್ಚಲು ಹಿಜಾಬ್, ಹಲಾಲ್, ಜಟ್ಕಾ ಕಟ್ ವಿಚಾರ ಗಳನ್ನು ಜನರ ಮುಂದಿಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಎ. ನಾಗರಾಜ್, ಗಣೇಶ್ ಹುಲ್ಮನಿ ಇದ್ದರು.

error: Content is protected !!