ವಿದ್ಯಾವಂತರು ಸ್ವಾರ್ಥಿಗಳಾಗದೇ ಊರಿಗೆ, ಬಂಧು-ಮಿತ್ರರಿಗೆ ಆದ್ಯತೆ ಕೊಡಿ

ವಿದ್ಯಾವಂತರು ಸ್ವಾರ್ಥಿಗಳಾಗದೇ ಊರಿಗೆ, ಬಂಧು-ಮಿತ್ರರಿಗೆ ಆದ್ಯತೆ ಕೊಡಿ

ಹನಗವಾಡಿಯಲ್ಲಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ 

ಮಲೇಬೆನ್ನೂರು, ಮಾ.23- ಒಂದು ಊರು ಕೇವಲ ಆರ್ಥಿಕ ಅಭಿವೃದ್ಧಿ ಎಂದು ನಾವು ಹೇಳಲ್ಲ, ಆರ್ಥಿಕವಾಗಿ ಯಾರೂ ಬೇಕಾದರೂ ಅಭಿವೃದ್ಧಿ ಆಗಬಹುದು. ಆದರೆ, ಸಾಹಿತ್ಯಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಆ ಊರು ಪ್ರಗತಿ ಕಂಡರೆ ಅದನ್ನು ನಿಜವಾದ ಸಾಧನೆ ಎನ್ನುತ್ತೇವೆ ಎಂದು ಸಾಣೇಹಳ್ಳಿ ಮಠದ  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹನಗವಾಡಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ ಮತ್ತು ಮಾನವ ಬಂಧುತ್ವ ವೇದಿಕೆ ಹಾಗೂ ಜಯಲಕ್ಷ್ಮಿ ನಾಟಕ ಸಂಘ (ದಾವಣಗೆರೆ) ಇವರ ಸಹಯೋಗದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಯಲ್ಲೇಶ್ ಯಾಳಗಿ ವಿರಚಿತ `ಮಗ ಹೋದರೂ ಮಾಂಗಲ್ಯ ಬೇಕು’ (ಹೆತ್ತವಳ ಹಾಲು ವಿಷವಾಯ್ತು) ಎಂಬ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಊರುಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗದೇ ಆತ್ಮ ಬಲವನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸ ಗಳನ್ನು ಮಾಡಿದರೆ ಆ ಊರು ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಸ್ವಾಮೀಜಿ ಯುವಕರಿಗೆ ಕಿವಿಮಾತು ಹೇಳಿದರು.

ವೃತ್ತಿ ರಂಗಭೂಮಿ ನಶಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ರುದ್ರಪ್ಪ ಹನಗವಾಡಿ ಅವರು ಆಸಕ್ತಿ ವಹಿಸಿ, ಕಲಾವಿದರನ್ನು ಕರೆಸಿ, ನಾಟಕ ಪ್ರದರ್ಶನ ಮಾಡಿಸುತ್ತಿರುವುದು ಮಾದರಿ ಕೆಲಸವಾಗಿದೆ.

ಹನಗವಾಡಿಗೆ ತನ್ನದೇ ಆದ ಇತಿಹಾಸ ಇದೆ. ಹೆಚ್.ಸಿದ್ದವೀರಪ್ಪನವರು ಒಬ್ಬ ಶ್ರೇಷ್ಠ ರಾಜಕಾರಣಿಯಾಗಿ, ಸಮಾಜಮುಖಿಯಾದಂತಹ ಕೆಲಸ ಮಾಡಿದವರು. ಅಂತಹ ಊರಿನಲ್ಲಿ ಅನೇಕ ಜನ ಪ್ರತಿಭಾವಂತರಿದ್ದೀರಿ. 

ಅವರಂತೆ ನೀವು ಸಮಾಜ ಮುಖಿ ಕೆಲಸ ಮಾಡಿ ಸಾಧಕರಾಗ ಬೇಕೆಂದು ಶ್ರೀಗಳು ಹಿತ ನುಡಿದರು. 

ವಿದ್ಯಾವಂತರಾದವರು ಇತ್ತೀಚೆಗೆ ಸ್ವಾರ್ಥಿಗಳಾಗುತ್ತಿದ್ದು, ನೌಕರಿ ಅಥವಾ ವ್ಯಾಪಾರ ಸಿಕ್ಕ ನಂತರ ಎಲ್ಲರನ್ನು ಮರೆತು, ತಾನು, ತನ್ನ ಹೆಂಡತಿ, ಮಕ್ಕಳಿಗೆ ಸಿಮೀತರಾಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ ಶ್ರೀಗಳು, ಊರಿನಿಂದ ಬೆಳೆದು ಹೊರಗಡೆ ಹೋದವರು ಊರಿಗಾಗಿ, ತನ್ನ ಬಂಧು-ಮಿತ್ರರಿಗಾಗಿ ಸಮಯ ಕೊಟ್ಟು, ಅವರ ಏಳಿಗೆಗೂ ಶ್ರಮಿಸಿ ಎಂದರು.

ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ರುದ್ರಪ್ಪ ಹನಗವಾಡಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಡಾ. ಎ.ಬಿ.ರಾಮಚಂದ್ರಪ್ಪ, ಡಾ. ಸುರೇಶ್ ಹನಗವಾಡಿ, ಡಾ. ರವೀಂದ್ರ ಬಣಕಾರ್, ಡಾ. ಮೀರಾ ಸುರೇಶ್ ಹನಗವಾಡಿ ಅವರನ್ನು ಸನ್ಮಾನಿಸಲಾಯಿತು.

ಡಾ. ದಾದಾಪೀರ್ ನವಿಲೇಹಾಳ್ ಅವರು ಅಭಿನಂದನಾ ನುಡಿಗಳನ್ನಾಡಿದರು.

ಜಿ.ಪಂ. ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ್, ಬಿಜೆಪಿ ಮುಖಂಡ ಚಂದ್ರಶೇಖರಪ್ಪ ಪೂಜಾರ್, ಗ್ರಾ.ಪಂ. ಅಧ್ಯಕ್ಷ ಬಿ.ಎನ್.ತಿಪ್ಪೇಶಿ, ಉಪಾಧ್ಯಕ್ಷರಾದ ದಾಕ್ಷಾಯಣಮ್ಮ ಸಣ್ಣಬಸಪ್ಪ, ಗ್ರಾ.ಪಂ. ಸದಸ್ಯ ಎಸ್.ಎಂ.ರೇವಣಸಿದ್ದಪ್ಪ, ತಾ.ಕೃಷಿಕ ಸಮಾಜದ ಅಧ್ಯಕ್ಷ ಸಾರಥಿ ಮಂಜುನಾಥ್, ಪಿಎಸಿಎಸ್ ಅಧ್ಯಕ್ಷ ಮಂಜುನಾಥ್ (ಅಪ್ಪಿ), ಬಿ.ನಿಂಗಪ್ಪ, ಶಂಭುಲಿಂಗಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!