ಮಲೇಬೆನ್ನೂರು, ಮಾ. 13 – ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವವು ಗುರುವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ರಥದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಬಳಿಕ ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ ನಂತರ ಭಕ್ತರು ಗೋವಿಂದ… ಗೋವಿಂದಾ ಎಂಬ ಜಯಘೋಷದೊಂದಿಗೆ ತೇರನ್ನು ಎಳೆದು ಸಂಭ್ರಮಿಸಿದರು.
ರಥೋತ್ಸವದ ವೇಳೆ ಭಕ್ತರು ರಥದ ಮೇಲೆ ಬಾಳೆಹಣ್ಣು, ಮಂಡಕ್ಕಿ, ಮೆಣಿಸಿನಕಾಳುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು. ಗ್ರಾಮದ ಶ್ರೀ ಬೀರ ಲಿಂಗೇಶ್ವರ, ಯಲವಟ್ಟಿಯ ಶ್ರೀ ಆಂಜ ನೇಯ ಸ್ವಾಮಿ ಹಾಗೂ ಜಿ. ಬೇವಿನಹ ಳ್ಳಿಯ ಶ್ರೀ ಆಂಜನೇಯ ಸ್ವಾಮಿ ಜೊತೆಗೂಡಿ ಜರುಗಿದ ರಥೋತ್ಸವಕ್ಕೆ ವೀರಗಾಸೆ, ಡೊಳ್ಳು, ಭಜನೆ, ಹಲಗೆ ಸೇರಿದಂತೆ ವಿವಿಧ ಕಲಾ ಮೇಳಗಳು ಮೆರಗು ತಂದವು. ರಥೋತ್ಸವದ ಅಂಗ ವಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಜವಳ ಮುದ್ರೆ ಇತ್ಯಾದಿ ಕಾರ್ಯಕ್ರಮ ಗಳು ನಡೆದವು. ಶ್ರೀ ಅಂಬಾ ಭವಾನಿ ದೇವಸ್ಥಾನದ ಆವರಣದಲ್ಲಿ ಮರಾಠ ಸಮಾಜದಿಂದ ಮತ್ತು ಶ್ರೀ ಆಂಜ ನೇಯ ಸ್ವಾಮಿ ದೇವಸ್ಥಾನ ಆವರಣ ದಲ್ಲಿ ಗ್ರಾಮ ಸಹಾಯಕ ರಂಗನಾಥ್, ಧರ್ಮರಾಜ್, ಚಮನ್ ಸಾಬ್ ಮತ್ತಿತರರು ಸೇರಿ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಸಂಜೆ ಓಕಳಿ ನಂತರ ಕಂಕಣ ವಿಸರ್ಜನೆ ಮಾಡಲಾಯಿತು.
ನಾಳೆ ಶುಕ್ರವಾರ ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7.30 ರಿಂದ ಶ್ರೀ ರಂಗನಾಥ ಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಜಿ. ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಭೂತನ ಸೇವೆ ನಡೆಯಲಿದ್ದು, ನಂತರ ದೇವರ ಉತ್ಸವ ಜರುಗಲಿದೆ ಎಂದು ಗ್ರಾಮದ ಗೌಡ್ರ ಬಸವರಾಜಪ್ಪ ತಿಳಿಸಿದ್ದಾರೆ.