ಬಾಗಳಿ: `ಗೋಣಿ ಬಸವೇಶ್ವರ ಚರಿತ್ರೆ’ ನಾಟಕ ಪ್ರದರ್ಶನದಲ್ಲಿ ಎಚ್.ಎನ್. ಕೊಟ್ರಪ್ಪ
ಹರಪನಹಳ್ಳಿ.ಮಾ.13-ಹದಿನೈದನೇ ಶತಮಾನದಲ್ಲಿ ಸಮಾಜದ ಉದ್ದಾರ ಹಾಗೂ ಧರ್ಮ ಪ್ರಚಾರ ಕೈಗೊಂಡ ಸಂತ, ಕೂಲಹಳ್ಳಿ ಗೋಣಿಬಸವೇಶ್ವರ ಎಂದು ನಾಟಕ ರಚನೆಕಾರ ಎಚ್.ಎನ್ ಕೊಟ್ರಪ್ಪ ತಿಳಿಸಿದರು.
ಬಾಗಳಿ ಗ್ರಾಮದಲ್ಲಿ ಅಭಿನಯಿಸಲಾದ `ಗೋಣಿಬಸವೇಶ್ವರ ಚರಿತ್ರೆ’ ಐತಿಹಾಸಿಕ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗೋಣಿಬಸವೇಶ್ವರ ಪೌರಾಣಿಕ ನಾಟಕದ ಕರ್ತೃವೂ ಆಗಿರುವ ಅವರು ಮಾತನಾಡಿದರು.
ಮೂರು ತಲೆಮಾರುಗಳಿಂದ ವಿಶ್ವಕಲಾ ಯುವಕ ರೈತ ನಾಟ್ಯ ಸಂಘ ಬಾಗಳಿ ಇವರ ವತಿಯಿಂದ ನಾಡಿನಾದ್ಯಂತ ನಿರಂತರವಾಗಿ `ಗೋಣಿ ಬಸವೇಶ್ವರ ಪವಾಡ ಹಾಗೂ ಜೀವನ ಚರಿತ್ರೆ’ಯ ನಾಟಕ ನೂರಾರು ಪ್ರದರ್ಶನಗಳನ್ನು ಕಂಡಿರುವುದು ಹೆಮ್ಮೆಯ ಸಂಗತಿ. ತಂತ್ರಜ್ಞಾನ ಹಾಗೂ ಜಾಗತಿಕವಾಗಿ ಸಮಾಜವು ಎಷ್ಠೇ ಮುಂದುವರಿದಿದ್ದರೂ ಅಜ್ಜನ ಜೀವನ ಚರಿತ್ರೆಯ ಕುರಿತು ಪ್ರತಿ ವರ್ಷ ಪ್ರದರ್ಶನಗೊಳ್ಳುವ ನಾಟಕವನ್ನು ಇಂದಿಗೂ ಉತ್ಸಾಹ ಕಳೆದುಕೊಳ್ಳದೇ ನೋಡುತ್ತಿರುವುದು ಅಜ್ಜನ ಪವಾಡವೇ ಸರಿ ಎಂದರು.
ಸುಮಾರು 60 ವರ್ಷಗಳಿಂದ ಪೌರಾಣಿಕ ಕತೆಯನ್ನು ಪ್ರತೀ ಪಾತ್ರಧಾರಿಯು ಅದರ ಜೀವಂತಿಕೆಯನ್ನು ಯಥಾವತ್ತಾಗಿ ಕಟ್ಟಿ ಕೊಡುವುದನ್ನು ಇಂದಿಗೂ ಮುಂದುವರೆಸಿರುವುದು ಅಜ್ಜನ ಮೇಲಿನ ಭಕ್ತಿ ಮತ್ತು ಶ್ರದ್ದೆಯೇ ಕಾರಣ, ಈ ರೀತಿಯ ನಾಟಕಗಳು ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿವೆ. ಹಾಗಾಗಿ ಯುವ ಪಾತ್ರಧಾರಿಗಳನ್ನು ಸರ್ಕಾರವು ಗುರುತಿಸಿ, ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ಬಯಲಾಟ ಅಕಾಡೆಮಿ ತಾಲ್ಲೂಕು ಅಧ್ಯಕ್ಷ ಕೆ ರುದ್ರಪ್ಪ, ನಿವೃತ್ತ ಲೋಕಾಯುಕ್ತ ಪೋಲೀಸ್ ಅಧಿಕಾರಿ ಸಿ ಕೊಟ್ರೇಶ್, ನಿವೃತ್ತ ಮುಖ್ಯ ಶಿಕ್ಷಕ ವಿ. ಬಿ. ಮಲ್ಲೇಶ್, ಎಚ್. ಎಂ. ಪ್ರಕಾಶ್, ಎನ್. ಮಂಜುನಾಥ, ಬಣಕಾರ ರಾಜಶೇಖರ್, ಬಣಕಾರ ಮಂಜುನಾಥ, ವಿ. ಬಿ. ವೀರೇಶ್ ಹಾಗೂ ಹಿರಿಯ ಕಲಾವಿದರು ಸೇರಿದಂತೆ ಇತರರಿದ್ದರು.