ಜಿಲ್ಲಾ ಮಂತ್ರಿಗಳನ್ನು ದೂರುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಲಿ

ಜಿಲ್ಲಾ ಮಂತ್ರಿಗಳನ್ನು ದೂರುವುದನ್ನು  ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಲಿ

ಶಾಸಕ ಬಿ.ಪಿ.ಹರೀಶ್ ಅವರಿಗೆ ಮಾಜಿ ಶಾಸಕ ಎಸ್.ರಾಮಪ್ಪ ಸಲಹೆ

ಹರಿಹರ,ಮಾ.13-  ಶಾಸಕ ಬಿ.ಪಿ.ಹರೀಶ್ ವಿನಾಕಾರಣ  ಜಿಲ್ಲಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ದೂರುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಲಿ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಾಸಕ ಹರೀಶ್ ಸಭೆ ಸಮಾರಂಭಗಳಲ್ಲಿ, ಪತ್ರಿಕಾಗೋಷ್ಠಿ ಗಳಲ್ಲಿ ಪದೇ ಪದೇ ಜಿಲ್ಲಾ ಮಂತ್ರಿಗಳನ್ನು ದೂರುವುದನ್ನು ಕರಗತ ಮಾಡಿಕೊಂಡಿದ್ದು, ಅದನ್ನು  ನಿಲ್ಲಿಸಿ ಅವರೊಂದಿಗೆ ಸಮಾಧಾನದಿಂದ ಚರ್ಚೆಗಳನ್ನು ಮಾಡಿ  ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಬೈರನಪಾದ ಏತ ನೀರಾವರಿ ಯೋಜನೆಗೆ ಬಹಳಷ್ಟು ಪ್ರಯತ್ನ ಮಾಡಿ ಒಂದು ಹಂತಕ್ಕೆ ತಂದಿದ್ದೆ, ಆದರೆ ಅದು ಕಾರ್ಯಗತವಾಗಲಿಲ್ಲ. ಈಗ ಅದನ್ನು ಹರೀಶ್ ಮುನ್ನಡೆಸಿ ಯೋಜನೆ ತರುವ ನಿಟ್ಟಿನಲ್ಲಿ ಜಿಲ್ಲಾ ಮಂತ್ರಿಗಳು ಹಾಗು ಇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದ ಅಭಿವೃದ್ಧಿ ಗೆ ಹೆಚ್ಚು ಒತ್ತು ಕೊಟ್ಟು ರೈತರ ಅನುಕೂಲಕ್ಕೆ ಪ್ರಯತ್ನಿಸಬೇಕು ಎಂದರು. 

ನಾನು ಶಾಸಕನಾಗಿದ್ದಾಗ ನಮ್ಮ ಪಕ್ಷದ ಆಡಳಿತ ರಾಜ್ಯದಲ್ಲಿ ಇರಲಿಲ್ಲ .ಆದರೂ ನಾನು ಪ್ರಯತ್ನಪಟ್ಟು ವಿಶ್ವಾಸಕ್ಕೆ ತೆಗೆದುಕೊಂಡು ಸುಮಾರು ನೂರಾರು ಕೋಟಿ ರೂ, ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೆ. ಆಗಿನ ಅನುದಾನದ ಕಾಮಗಾರಿಗಳೇ ಈಗಲೂ ನಡೆಯುತ್ತಿವೆ. ಹೊಸ ಯಾವುದೇ ಕಾಮಗಾರಿ ಗಳು ಕ್ಷೇತ್ರಕ್ಕೆ ಬಂದಿಲ್ಲ. ನಗರದ ರಸ್ತೆಗಳೆಲ್ಲಾ ಗುಂಡಿ ಬಿದ್ದು ಹಾಳಾಗಿವೆ. ಇದಲ್ಲದರ ಬಗ್ಗೆ ಚಿಂತನೆ ಮಾಡಲಿ ಎಂದು ಹೇಳಿದರು.

ದಾವಣಗೆರೆ ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಶಾಸಕ ಹರೀಶ್ ಹರಿಹರ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸಬೇಕು.

ಹರಿಹರ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಪದೇ ಪದೇ ಜಿಲ್ಲಾ ಮಂತ್ರಿ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆ ತೀರಾ ಅವಹೇಳನಕರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ ಮಾತನಾಡಿ, ಜಿಲ್ಲಾ ಮಂತ್ರಿಗಳಿಂದ ಜಿಲ್ಲೆಗೆ ಬಹಳಷ್ಟು ಅನುಕೂಲವಾಗಿದೆ. ಅವರನ್ನು ಜರಿದು ಮಾತನಾಡುವುದರಿಂದ ದೊಡ್ಡವನಾಗುತ್ತೇನೆ ಎಂದು ತಿಳಿದುಕೊಂಡಿದ್ದರೆ ಅದು ಹರೀಶ್ ಅವರ ಭ್ರಮೆ ಮಾತ್ರ ಎಂದರು. 

ಈ ಸಂದರ್ಭದಲ್ಲಿ ದಾವಣಗೆರೆ-ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹರಳಹಳ್ಳಿ ಜಬ್ಬಾರ್ ಖಾನ್, ನಗರಸಭಾ ಮಾಜಿ ಸದಸ್ಯ ಹಬಿಬುಲ್ಲಾ ಗನ್ನೇವಾಲೆ, ಕಾಂಗ್ರೆಸ್ ಮುಖಂಡರಾದ ಸಿ.ಎನ್.ಹುಲಿಗೇಶ್, ಎಂ.ಆರ್.ಸೈಯದ್ ಸನಾವುಲ್ಲಾ, ಆಸಿಫ್ ಪೈಲ್ವಾನ್, ಅಬ್ದುಲ್ಲಾ  ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

error: Content is protected !!