ರಾ.ಲ. ಕಾನೂನು ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ ವ್ಯಾಕುಲತೆ
ದಾವಣಗೆರೆ, ಮಾ. 11- ದೇಶದಲ್ಲಿ ಮಕ್ಕಳು ಹಾಗೂ ಮಹಿಳೆಯರ ಪರವಾಗಿ ಎಷ್ಟೋ ಕಾನೂನುಗಳಿದ್ದರೂ ಈಗಲೂ ಸಹ ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಹಿಂಸೆ ಮುಂದುವರೆಯುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ನಗರದ ರಾ.ಲ. ಕಾನೂನು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಹಾಗೂ ಪುರುಷರಲ್ಲಿನ ಅಸಮಾನತೆ, ಸಾಮಾಜಿಕ ಅಂತರ ಕಡಿಮೆ ಮಾಡುವ ಮೂಲಕ ತಾರತಮ್ಯ ನಿವಾರಣೆ ಮಾಡಬೇಕಾಗಿದೆ. ಇಂತಹ ಮಹಿಳೆಯರ ದಿನಾಚರಣೆ ಮೂಲಕ ಕೆಲವು ಅನಿಷ್ಟಗಳನ್ನು ಹೋಗಲಾಡಿಸಲು ಮಹಿಳೆಯರು, ಪು
ರುಷರು ಇಬ್ಬರೂ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಆಧುನಿಕತೆ ಇಷ್ಟೆಲ್ಲಾ ಮುಂದುವರೆದಿದ್ದರೂ ಸಹ ಈಗಲೂ ನಾವುಗಳು ಕೆಲವು ಕಡೆ ಪುರುಷ ಪ್ರಧಾನ ಸಮಾಜ ಕಾಣುತ್ತಿದ್ದೇವೆ. ಮನೆಗಳಲ್ಲೂ ಸಹ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೇ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನ ಸ್ಥಾನದಲ್ಲಿದ್ದಾರೆ. ಇದರಲ್ಲಿ ಹಲವಾರು ಮಹನೀಯರಾದ ರಾಜಾರಾಮ್‍ಮೋಹನ್ ರಾಯ್, ವಿವೇಕಾನಂದ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವಾರು ಪುರುಷರ ಪಾತ್ರವೂ ಇದೆ ಎಂದು ಹೇಳಿದರು.
ಏನೇ ಕಾನೂನು ಇದ್ದರೂ ನಮ್ಮಗಳ ಮನಸ್ಥಿತಿ ಬದಲಾಗದ ಹೊರತು ಸಾಮಾಜಿಕವಾಗಿ ಬದಲಾವಣೆ ತರಲು ಅಸಾಧ್ಯ. ನಮ್ಮಲ್ಲಿ ಮೊದಲು ಬದಲಾವಣೆ ಆಗಬೇಕು. ಕಾನೂನುಗಳಿಗೆ ಗೌರವ ನೀಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ನಮ್ಮಗಳ ಮನಸ್ಸನ್ನು ನಿಗ್ರಹ ಮಾಡಿದಾಗ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಭಾರತದ ಇತಿಹಾಸ ವನ್ನು ಗಮನಿಸಿದಾಗ ಅನೇಕ ಯುದ್ದಗಳು, ಅನೇಕ ರಾಜ ಮನೆತನಗಳ ನಡುವೆ ಹೋರಾಟಗಳು ಮಹಿಳೆಯರ ಕಾರಣದಿಂ ದಲೇ ನಡೆದಿರುವುದು ದುರಾದೃಷ್ಠಕರ ಸಂಗತಿ, ಮಹಿಳೆಯರ ಮೇಲಿನ ದೌರ್ಜನ್ಯ ಗಳಿಗೆ ಮಹಿಳೆಯರೇ ಕಾರಣ ಆಗುತ್ತಿರುವು ದನ್ನು ನಾವು ಕಾಣುತ್ತಿದ್ದೇವೆ. ಮಹಿಳಾ ದಿನಾಚರಣೆಗಳು ಸಕಾರಾತ್ಮಕ ಚಿಂತನೆ ಅಡಿಯಲ್ಲಿ ಆಗಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಮಾತನಾಡಿ, ಸ್ತ್ರೀ ಸಮಾನತೆಗಾಗಿ ಮತ್ತು ಅವರ ಮೇಲೆ ದೌರ್ಜನ್ಯಗಳನ್ನು ತಡೆಯಲು ಮತ್ತು ಹಿಂದಿನ ಕಾಲದಲ್ಲಿದ್ದ ಮಹಿಳೆಯರ ವಿರುದ್ಧದ ಅನೇಕ ಅನಿಷ್ಠ ಪದ್ಧತಿಗಳನ್ನು ತಡೆಗಟ್ಟಲು ಅನೇಕ ಮಹನೀಯರು ಹೋರಾಟ ಮಾಡಿದ ಫಲವಾಗಿ ಇಂದು ಸ್ತ್ರೀಯರು ಸಮಾನತೆ ಪಡೆಯಲು ಸಾಧ್ಯವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸಂವಿಧಾನ ಜಾರಿಗೊಂಡ ಮೇಲೆ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಅಲ್ಲದೇ ಮಹಿಳಾ ದಿನಾಚರಣೆ ಕೇವಲ ಭಾಷಣಕ್ಕೆ ಸೀಮಿತ ವಾಗದೇ ಆರ್.ಎಲ್.ಕಾನೂನು ಕಾಲೇಜು ಸ್ತ್ರೀ ಸಮಾನತೆಗೆ ದುಡಿದವರನ್ನು ಗೌರವಿಸು ತ್ತಿರುವುದು ಶ್ಲ್ಯಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಸ್.ಯತೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆ.ಜೆ.ಎಂ. ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶುಕ್ಲಶೆಟ್ಟಿ, ಸಂಚಾರಿ ಪೊಲೀಸ್ ಅಧಿಕಾರಿ ಶ್ರೀಮತಿ ಶೈಲಜಾ, ನಿವೃತ್ತ ಪ್ರಾಧ್ಯಾಪಕರಾದ ಡಾ.ಅನುರಾಧ ಬಕ್ಕಪ್ಪ ವೇದಿಕೆಯಲ್ಲಿದ್ದರು.