ಹರಿಹರದಲ್ಲಿನ ಕಾರ್ಯದಕ್ಷತೆ ತರಬೇತಿ ಶಿಬಿರದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಡಿ.ಕುಮಾರ್
ಹರಿಹರ, ಮಾ.6- ಹೊಸ ರೈತ ಸದಸ್ಯರುಗಳಿಗೆ ಸಾಲ ಕೊಡುವ ಉದ್ದೇಶವನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹೊಂದಿದ್ದು, ಈ ನಿಟ್ಟಿನಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಕ್ರಮವಹಿಸಬೇಕು ಎಂದು ಬ್ಯಾಂಕಿನ ಉಪಾಧ್ಯಕ್ಷ ಡಿ. ಕುಮಾರ್ ಹೇಳಿದರು.
ಇಲ್ಲಿನ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಕೃಷಿಯೇತ್ತರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ನಿನ್ನೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವಿಶೇಷ `ಕಾರ್ಯದಕ್ಷತೆ ತರಬೇತಿ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಕೇವಲ ಕೃಷಿ ಸಾಲಕ್ಕೆ ಸೀಮಿತವಾಗಿರದೇ ಕೃಷಿಯೇತರ ಚಟುವಟಿಕೆಗಳ ಲ್ಲಿಯೂ ಸಹ ತೊಡಗಿಸಿಕೊಳ್ಳಬೇಕು. ಸಂಘದ ಸಿಬ್ಬಂದಿಗಳೊಂದಿಗೆ ಆಡಳಿತ ಮಂಡಳಿ ಸದಸ್ಯರೂ ಕೈಜೋಡಿಸಿದರೆ ಸಂಘದ ಅಭಿವೃದ್ದಿ ಸಾಧ್ಯವಾಗು ತ್ತದೆ. ಸಾಲ ವಸೂಲಾತಿಯಲ್ಲಿ ಆಡಳಿತ ಮಂಡಳಿ ಯವರ ಪಾತ್ರ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲಾ ಸಹಕಾರ ಸಂಘಗಳು ಲಾಭ ಗಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಹೆಚ್ ಮಹೇಶ್, ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸುನಿತಾ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡುತ್ತಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇಂದ್ರ ಸರ್ಕಾರ ಕಂಪ್ಯೂಟರೀಕರಣ ಗೊಳಿಸಿದೆ ಎಂದು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆಚ್.ಬಿ ನಾಗರಾಜ್, ಸಂಘದ ನಿರ್ದೇಶಕ ಕೆ. ಮಂಜುನಾಥ ಸೇರಿದಂತೆ ಒಕ್ಕೂಟದ ಸಿಬ್ಬಂದಿ ಕೆ.ಎಂ. ಜಗದೀಶ್ ಮತ್ತು ಆರ್. ಸ್ವಾಮಿ ಮತ್ತಿತರರು ಇದ್ದರು.
ಕೆ.ಟಿ ಶಂಭುಲಿಂಗಪ್ಪ ಪ್ರಾರ್ಥನೆ ಮಾಡಿದರು. ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ ಸ್ವಾಗತಿಸಿದರು. ಸಹಕಾರ ಶಿಕ್ಷಕ ಕೆ.ಹೆಚ್ ಸಂತೋಷ್‍ಕುಮಾರ್ ನಿರೂಪಣೆ ಮಾಡಿದರು.