ವಿಜೃಂಭಣೆಯ ಅಜ್ಜಯ್ಯನ ಬೆಳ್ಳಿ ರಥೋತ್ಸವ, ಪಾಲಿಕೋತ್ಸವ

ವಿಜೃಂಭಣೆಯ ಅಜ್ಜಯ್ಯನ ಬೆಳ್ಳಿ ರಥೋತ್ಸವ, ಪಾಲಿಕೋತ್ಸವ

ಮಲೇಬೆನ್ನೂರು, ಮಾ.6- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಬೆಳ್ಳಿ ರಥೋತ್ಸವ ಮತ್ತು ಪಾಲಿಕೋತ್ಸವ ಇಂದು ವಿಜೃಂಭಣೆ ಯಿಂದ ಜರುಗಿದವು.

ಅಜ್ಜಯ್ಯನಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಮಹಾ ರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು. ಭಾಜಾ – ಭಜಂತ್ರಿಗಳೊಂದಿಗೆ ಅಜ್ಜಯ್ಯನ ಉತ್ಸವ ಮೂರ್ತಿ ರಥಾರೋಹಣ ಮಾಡಿದ ಬಳಿಕ ನಂದಿಗುಡಿ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೆಳ್ಳಿ ರಥಕ್ಕೆ ಅಷ್ಟೋತ್ತರ ಮಹಾ ಪೂಜೆ ಸಲ್ಲಿಸಿ, ರಥದ ಗಾಲಿಗೆ ತೆಂಗಿನ ಕಾಯಿ ಒಡೆದು ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಈ ವೇಳೆ ಭಕ್ತರು ಕರಿಬಸವೇಶ್ವರ ಮಹಾರಾಜ್ ಕಿ ಜೈ, ಭವರೋಗ ನಿವಾರಕ ಅಜ್ಜಯ್ಯ, ಹರಹರ ಮಹಾ ದೇವ ಎಂಬ ಜಯ ಘೋಷಣೆಯೊಂದಿಗೆ ದೇವಸ್ಥಾನದ ಪ್ರಾಂಗಣದಲ್ಲಿ ಬೆಳ್ಳಿ ರಥವನ್ನು ಎಳೆದು ಸಂಭ್ರಮಿಸಿದರು.

ಬಾಜಾ ಭಜಂತ್ರಿಗಳು, ಡೊಳ್ಳು ಕುಣಿತ, ವೀರಗಾಸೆ, ವೀರಭದ್ರ ದೇವರ ಒಡಪು ಮುಂತಾದ ಕಲಾ ಮೇಳಗಳು ರಥೋತ್ಸವಕ್ಕೆ ಮೆರುಗು ತಂದವು. ಬೆಳ್ಳಿ ರಥವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಪಾಲಿಕೋತ್ಸವ : ರಾತ್ರಿ ನಡೆದ ಅಜ್ಜಯ್ಯನ ಪಾಲಿಕೋತ್ಸವವೂ ವೈಭವದೊಂದಿಗೆ ನಡೆಯಿತು. ಹೂವಿನಿಂದ ಅಲಂಕಾರ ಗೊಂಡ ಟ್ರ್ಯಾಕ್ಟರ್‌ನಲ್ಲಿ ಅಜ್ಜಯ್ಯನ ಉತ್ಸವ ಮೂರ್ತಿ ಪ್ರತಿಷ್ಟಾಪಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಡಿಸಿದ ಪಟಾಕಿಗಳ ಸಿಡಿತ ಬಾನಂಗಳದಲ್ಲಿ ಮೂಡಿಸಿದ ಬಣ್ಣ ಬಣ್ಣದ ಚಿತ್ತಾರಗಳು ಎಲ್ಲರ ಗಮನ ಸೆಳೆದೆವು. ಸಾವಿರಾರು ಭಕ್ತರು ರಥೋತ್ಸವ ಹಾಗೂ ಪಾಲಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಮತ್ತು ಟ್ರಸ್ಟಿಗಳು ಹಾಜರಿದ್ದು, ಈ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

error: Content is protected !!