ದೇವರಬೆಳಕೆರೆ ಚಾನಲ್ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ

ದೇವರಬೆಳಕೆರೆ ಚಾನಲ್ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ

ಹರಿಹರ, ಮಾ.6- ದೇವರಬೆಳಕೆರೆ ಚಾನಲ್ ನೀರು ಸೋರಿಕೆಯಾಗುತ್ತಿರುವುದನ್ನು ತಡಗಟ್ಟ ಬೇಕು  ಮತ್ತು ಚಾನಲ್ ದುರಸ್ತಿಗೊಳಿಸಿ ಕೊನೆ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು   ದಾವಣಗೆರೆ-ಹರಿಹರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. 

ಬೆಳಿಗ್ಗೆ ಪ್ರತಿಭಟನೆ ನಡೆಯುತ್ತಿದ್ದರೂ ಸ್ಥಳಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು ಬರುವುದಾಗಿ ಹೇಳಿ 2-3 ಗಂಟೆ ಆದರೂ ಬಂದಿರುವುದಿಲ್ಲ. ಹಾಗಾಗಿ ನಾವುಗಳು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಬಿಗಿ  ಪಟ್ಟು ಹಿಡಿದ ರೈತರು, ರಸ್ತೆಯ ಮಧ್ಯದಲ್ಲಿ ಕುಳಿತು, ರಾಜ್ಯ ಸರ್ಕಾರ ಮತ್ತು ನೀರಾವರಿ ಇಲಾಖೆ  ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 

ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕ  ಮಾಡಿದ ಸಿಪಿಐ ಸುರೇಶ್ ಸಗರಿ,  ಇನ್ನು ಕೆಲವೇ ನಿಮಿಷಗಳಲ್ಲಿ ಬರುತ್ತಾರಂತೆ  ರಸ್ತೆ  ಬಂದ್ ಮಾಡ ಬೇಡಿ ಎಂದು ಹೇಳಿದಾಗ ಅದಕ್ಕೆ   ರೈತರು  ಮನ್ನಣೆ ನೀಡದ ಕಾರಣ,  ರೈತರು ಮತ್ತು ಸಿಪಿಐ  ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.   ಅಷ್ಟರಲ್ಲಿ ಸ್ಥಳಕ್ಕೆ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಧನಂಜಯ ಮತ್ತು ತಹಶೀಲ್ದಾರ್ ಗುರುಬಸವರಾಜ್ ಆಗಮಿಸಿ, ಚಾನೆಲ್ ನೀರು ಸೋರಿಕೆ ಆಗುತ್ತಿರುವುದನ್ನು ದುರಸ್ತಿ ಪಡಿಸಲು ಮತ್ತು ಹೂಳು ತಗೆಸಲು ಹಣಕಾಸಿನ ಕೊರತೆ   ಇದೆ. ಸರ್ಕಾರಕ್ಕೆ ಸು. 60 ರಿಂದ 70 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ   ಯವರು ಸಹ ರೈತರ ಬಗ್ಗೆ ಬಹಳಷ್ಟು ಕಾಳಜಿ ವಹಿಸಿ ಮತ್ತು ಮುತುವರ್ಜಿಯಿಂದ ಕೆಲಸವನ್ನು ಮಾಡಲಿಕ್ಕೆ ಮುಂದಾಗಿದ್ದಾರೆ. 

ಸರ್ಕಾರದಿಂದ ಹಣ ಬಿಡುಗಡೆ ಆದ ತಕ್ಷಣವೇ ಕಾಮಗಾರಿ  ಆರಂಭಿ ಸುವುದಾಗಿ  ಭರವಸೆ  ನೀಡಿದ ನಂತರ ಪ್ರತಿಭಟನಾ ಕಾರರು ತಮ್ಮ ಗ್ರಾಮಗಳಿಗೆ ವಾಪಸು ತೆರಳಿದರು.   

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ ಮಾತನಾಡಿ, ಕೋಡಿಹಳ್ಳಿ ಗ್ರಾಮದ ಹಾಗು ಸುತ್ತಮುತ್ತಲಿನ ಗ್ರಾಮಗಳಿಗೆ ಚಾನಲ್ ನೀರು ಹರಿಸಲಾಗಿದ್ದರೂ ಇದುವರೆಗೂ ಕೊನೆ ಭಾಗದ ಗ್ರಾಮಗಳಿಗೆ ನೀರು ಬಂದಿರುವುದಿಲ್ಲ. ಹಿಂದಿನ ಭಾಗದ ರೈತರು ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿರುವು ದರಿಂದ ಕೊನೆ ಭಾಗದ ರೈತರಿಗೆ ನೀರು ಬರುತ್ತಿಲ್ಲ. ಇದರಿಂದಾಗಿ ರೈತರು ನೀರಿಗಾಗಿ ಪರದಾಡುವಂತಾಗಿದೆ. ಜಿಲ್ಲಾಧಿಕಾರಿ ಗಳು ಪಂಪ್‌ಸೆಟ್‌ಗಳನ್ನು    ತೆರವುಗೊಳಿಸುವಂತೆ ತಿಳಿಸಿದ್ದರೂ ಸಹ ಇಲ್ಲಿನ ಅಧಿಕಾರಿಗಳಿಗೆ ಅವುಗಳನ್ನು ತೆರವುಗೊಳಿಸುವುದಕ್ಕೆ ಮುಂದಾಗದೆ ಇರೋದಕ್ಕೆ, ಬನ್ನಿಕೋಡ್‌ನಿಂದ ಹಿಡಿದು ಕೋಡಿಹಳ್ಳಿಯವರಗೂ ರೈತರು ಸಂಕಷ್ಟವನ್ನು ಅನುಭವಿಸುವಂತಾಗಿದೆ. 

ಪ್ರತಿಭಟನೆಯಲ್ಲಿ ಕೋಡಿಹಳ್ಳಿ, ಅಗಸನಕಟ್ಟಿ, ಅಮರಾವತಿ, ಸಿದ್ದನೂರು ಭಾಗದ ನೂರಾರು ರೈತರು ಪಾಲ್ಗೊಂಡಿದ್ದರು. ವಿವಿಧ ನಗರಕ್ಕೆ ತೆರಳುವಂತಹ ಬಸ್, ಕಾರು, ಲಾರಿ, ಮುಂತಾದ ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುವಂತೆ ಆಗಿದ್ದು ಕಂಡುಬಂದಿತು.

ಈ ಸಂದರ್ಭದಲ್ಲಿ ಗುತ್ತೂರು ಠಾಣೆ ಪಿಎಸ್ಐ ಮಂಜುನಾಥ್ ಕುಪ್ಪೇಲೂರು,  ನೀರಾವರಿ ಇಲಾಖೆಯ ಇಂಜಿನಿಯರ್ ಕೃಷ್ಣಮೂರ್ತಿ, ಅಮರಾವತಿ ಕೆ.ಬಸವರಾಜ್, ಚಂದ್ರಪ್ಪ, ನಾಗರಾಜ್ ಸಿದ್ದನೂರು, ರಮೇಶ್ ಅಗಸನಕಟ್ಟಿ, ಗ್ರಾಪಂ ಸದಸ್ಯ ನವೀನ್ ಕುಮಾರ್, ಶಿವಕುಮಾರ್, ಯೋಗರಾಜ್, ರಾಜಪ್ಪ, ನಾಗರಾಜ್, ಮಂಜಮ್ಮ, ಪಾಲಾಕ್ಷಪ್ಪ, ನಿಂಗರಾಜ್, ವೀರಣ್ಣ, ವಿರುಪಾಕ್ಷಪ್ಪ, ಪರಮೇಶ್ವರಪ್ಪ, ಶೋಭಕ್ಕ, ಯಲ್ಲಮ್ಮ, ಚೆನ್ನಮ್ಮ, ಮಲ್ಲಿಕಾರ್ಜುನ, ಪೊಲೀಸ್ ಸಿಬ್ಬಂದಿ ಸತೀಶ್, ಸುರೇಶ್, ಕರಿಯಪ್ಪ, ಅರ್ಜುನ್, ಮುರುಳಿಧರ್  ಇತರರು  ಇದ್ದರು.

error: Content is protected !!