ದಾವಣಗೆರೆ, ಮಾ.6- ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆಯ ಸಾಂಖ್ಯಿಕ ಅಧಿಕಾರಿ ಡಾ.ಜಿ.ಎಸ್. ನಾಗರಾಜು ಅವರ ಮನೆಯಲ್ಲಿ 1 ಕೆ.ಜಿ 597 ಗ್ರಾಂ ಚಿನ್ನಾಭರಣ ಸೇರಿ ಅಪಾರ ಪ್ರಮಾಣದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ನಾಗರಾಜು ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದರು. ಘೋಷಿತ ಆದಾಯಕ್ಕಿಂತ ಶೇ 150ಕ್ಕೂ ಹೆಚ್ಚು ಪ್ರಮಾಣದ ಆಸ್ತಿ ಹೊಂದಿರುವುದು ಗೊತ್ತಾಗಿದ್ದು, ಪರಿಶೀಲನೆ ಮುಂದುವರಿದಿದೆ.
‘ಎಸ್.ನಿಜಲಿಂಗಪ್ಪ ಬಡಾವಣೆಯ ಮನೆ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಕಚೇರಿ, ಪಾಲಕರ ಮನೆ, ಫಾರಂಹೌಸ್ ಹಾಗೂ ಕುಟುಂಬದ ಹಿಡಿತದಲ್ಲಿರುವ ಸಹಕಾರ ಸಂಘ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. 5 ಕೆ.ಜಿ. 240 ಗ್ರಾಂ ಬೆಳ್ಳಿ ವಸ್ತುಗಳು, 38 ಎಕರೆ ಕೃಷಿ ಭೂಮಿ, 4 ಮನೆ ಹಾಗೂ 1 ನಿವೇಶನ, ಅಂದಾಜು 32 ಲಕ್ಷ ರೂ. ಮೌಲ್ಯದ ಪೀಠೋಪಕರಣ ಹಾಗೂ 38 ಲಕ್ಷ ರೂ. ಮೌಲ್ಯದ ವಾಹನಗಳು ಪತ್ತೆಯಾಗಿವೆ’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ತಿಳಿಸಿದ್ದಾರೆ.
ಪರಿಶೀಲನೆಯ ಸಂದರ್ಭದಲ್ಲಿ ಅಂಕಿತ ಅಧಿಕಾರಿ ಕಚೇರಿಯ ಎರಡು ರೆಫ್ರಿಜಿರೇಟರ್ನಲ್ಲಿ ಆಹಾರದ ಮಾದರಿಗಳು ಕೊಳೆತ ಸ್ಥಿತಿಯಲ್ಲಿ ಸಿಕ್ಕಿವೆ. ಹೋಟೆಲ್, ಕಲ್ಯಾಣ ಮಂಪಟ, ಬೀದಿ ಬದಿ ಅಂಗಡಿ ಸೇರಿ ಹಲವೆಡೆ ಸಂಗ್ರಹಿಸಿದ್ದ ಇಡ್ಲಿ, ವಡೆ, ಸಾಂಬಾರು, ದೋಸೆ, ಉಪ್ಪಿನಕಾಯಿಯಂತಹ ಹಲವು ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸದೇ ಇಟ್ಟುಕೊಂಡಿದ್ದು ಅನುಮಾನ ಮೂಡಿಸಿದೆ.
ಆಹಾರದ ಮಾದರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಅವುಗಳನ್ನು ಸಂಗ್ರಹಿಸಿದ ಸ್ಥಳದ ಮಾಹಿತಿಯನ್ನು ನಮೂದಿಸಬೇಕು. ನಿಯಮಗಳನ್ನು ಪಾಲಿಸದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವುದು ಹಾಗೂ ಕಚೇರಿಯ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದು ಪತ್ತೆಯಾಗಿದೆ. ಈ ಬಗ್ಗೆಯೂ ಲೋಕಾಯುಕ್ತಕ್ಕೆ ವರದಿ ಮಾಡಲಾಗುವುದು ಎಂದು ಕೌಲಾಪುರೆ ಮಾಹಿತಿ ನೀಡಿದ್ದಾರೆ.
ನಾಗರಾಜು ಅವರು ದಾವಣಗೆರೆಯ ಜತೆಗೆ ಹಾವೇರಿ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಹೊಣೆಯನ್ನು ಪ್ರಭಾರಿಯಾಗಿ ನಿಭಾಯಿಸುತ್ತಿದ್ದರು.