ದಾವಣಗೆರೆ, ಮಾ.5- ಬಜೆಟ್‌ನಲ್ಲಿ ಭದ್ರಾ ಕಾಲುವೆಗಳ ಆಧುನಿಕರಣಕ್ಕೆ ಕನಿಷ್ಠ 2 ಸಾವಿರ ಕೋಟಿ ರೂಪಾಯಿ ನೀಡಿ, ಕೊನೆ ಭಾಗದ ರೈತರಿಗೆ ನೀರು ತಲುಪುವಂತೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ರೈತರ ಒಕ್ಕೂಟವು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ರೈತ ಮುಖಂಡರು, ಜಿಲ್ಲೆಯ ರೈತರ ಜೀವನಾಡಿಯಾದ ಭದ್ರಾ ಡ್ಯಾಮಿನ ಕಾಲುವೆಗಳಲ್ಲಿ ಗಿಡ-ಗಂಟೆ ಬೆಳೆದು ಹೂಳು ತುಂಬಿದ್ದರಿಂದ ಈ ಭಾಗದ ರೈತರಿಗೆ ನೀರು ಕಾಣದಂತಾಗಿದೆ. ಹಾಗಾಗಿ ಕಾಲುವೆ ಆಧುನಿಕರಣಕ್ಕೆ ಬಜೆಟ್ ನೆರವು ಆಗಲಿ ಎಂದರು.
1972 ರಲ್ಲಿ ಭದ್ರಾ ಡ್ಯಾಮನ್ನು ಗಾರೆ, ಸುಣ್ಣ, ಕಲ್ಲುಗಳಿಂದ ನಿರ್ಮಿಸಲಾಗಿದ್ದು, ಸಹಜವಾಗಿ ಬುಡದಲ್ಲಿ ನೀರು ಸೋರಿಕೆಯಾಗುತ್ತಿದೆ. ಕ್ರಸ್ಟ್ ಗೇಟುಗಳು ಹಳೆಯದಾಗಿವೆ. ಅವುಗಳನ್ನು ರೀಕಂಡೀಷನ್ ಮಾಡಿಸಿಲ್ಲ. ಇದರಿಂದ ಅಭದ್ರತೆ ಕಾಡುತ್ತಿದೆ. ಹಾಗಾಗಿ ಭದ್ರಾ ಡ್ಯಾಮ್ ಸುರಕ್ಷತೆಗೆ ಸಮೀಕ್ಷೆ ನಡೆಸಿ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಬಜೆಟ್ ಸಹಾಯ ಮಾಡಬೇಕಿದೆ ಎಂದು ಹೇಳಿದರು.
ರೈತರು ಬೆವರು ಸುರಿಸಿ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಇ-ಟೆಂಡರ್ ಪದ್ಧತಿಯನ್ನು ಕಡ್ಡಾಯಗೊಳಿಸಬೇಕು. ತೂಕದಲ್ಲಿನ ವಂಚನೆ ತಪ್ಪಿಸಲು ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ವೇಬ್ರೀಡ್ಜ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷಿ-ತೋಟಗಾರಿಕೆ ಇಲಾಖೆಗಳಲ್ಲಿ ಹನಿ ನೀರಾವರಿ ಸೇರಿದಂತೆ ಯಂತ್ರೋಪಕರಣಗಳ ಖರೀದಿಗೆ ನೀಡುವ ಸಹಾಯ ಧನವನ್ನು ನೇರವಾಗಿ ರೈತನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜನಾಯ್ಕ, ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, 6ನೇ ಕಲ್ಲು ವಿಜಯಕುಮಾರ, ಅತಿಥ್ ಅಂಬರಕರ್, ಮಾಜಿ ಮೇಯರ್ ಹೆಚ್.ಎನ್. ಗುರುನಾಥ್ ಇತರರಿದ್ದರು.