ಹರಿಹರ ಗ್ರಾಮ ದೇವತೆ ಜಾತ್ರೆ ಯಶಸ್ವಿ ಆಚರಣೆಗೆ ಅಗತ್ಯ ಕ್ರಮ
ಹರಿಹರ, ಮಾ. 5 – ಆರ್ಥಿಕ ಸಂಪನ್ಮೂಲಗಳ ಇತಿ ಮಿತಿ ನೋಡಿಕೊಂಡು ನಗರದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಕ್ಕೆ ಸಿದ್ದವಾಗಿರುವೆ. ಜೊತೆಗೆ ಗ್ರಾಮ ದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವ ಸಮಯದಲ್ಲಿ, ಸಕಲ ಭಕ್ತರಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರದ ಸಮಗ್ರ ಅಭಿವೃದ್ಧಿ ಮತ್ತು ಗ್ರಾಮ ದೇವತೆ ಊರಮ್ಮ ದೇವಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು.
ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ. ಅದ್ದರಿಂದ ಗ್ರಾ ಮದೇವತೆ ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಹಾಗೂ ಪರಸ್ಥಳದಿಂದ ಬಂದಂತಹ ಭಕ್ತರಿಗೆ ತೊಂದರೆಗಳಾದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಬೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಬ್ಬದ ಸಮಯದಲ್ಲಿ ವಿದ್ಯುತ್ಯ ವ್ಯತ್ಯಯ ಆಗದಂತೆ ಗಮನಹರಿಸಬೇಕು. ಎಪಿಎಂಸಿ ಮತ್ತು ನಗರದ ಹೊರವಲಯದ ರಸ್ತೆ ದುರಸ್ತಿ ಪಡಿಸಿ ಕಾಮಗಾರಿಯನ್ನು 11-12 ತಾರೀಖಿನಂದು ಮುಗಿಸಬೇಕು.
ನಗರದ ಬಹುತೇಕ ಬಡಾವಣೆಯಲ್ಲಿ ತಾತ್ಕಾಲಿಕ ಮೊಬೈಲ್ ಶೌಚಾಲಯ ನಿರ್ಮಾಣ, ಚೌತಿ ಮನೆಯ ಹತ್ತಿರ ಮೂರು ಕಡೆಗಳಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಬಟ್ಟೆಗಳನ್ನು ಬದಲಿಸಲಿಕ್ಕೆ ವ್ಯವಸ್ಥೆಯನ್ನು ನಿರ್ಮಿತಿ ಕೇಂದ್ರದ ಮೂಲಕ ಮಾಡಲಾಗುತ್ತದೆ. ನೀರಿನ ಸರಬರಾಜಿನ ತೊಂದರೆ ಆಗದಂತೆ ದಾವಣಗೆರೆ ನಗರದಿಂದ ನೀರಿನ ಟ್ಯಾಂಕರ್ ಕಳಿಸುವ ಮತ್ತು ಕಸವನ್ನು ಸಾಗಿಸುವ ಸಲುವಾಗಿ ವಾಹನಗಳ ಕಳಿಸಲಾಗುತ್ತದೆ.
ಹೊನ್ನಾಳಿ, ಮಲೇಬೆನ್ನೂರು ಮತ್ತಿತರೆ ಕಡೆಗಳ ಪೌರ ಕಾರ್ಮಿಕರ ನಿಯೋಜನೆ ಮಾಡಲಾಗುತ್ತದೆ. ಸಣ್ಣ ಟಿಪ್ಪರ್ ಮೂಲಕ ಚೌತಿ ಮನೆಯ ಮುಂಭಾಗದಲ್ಲಿನ ಬೇವಿನ ಸೊಪ್ಪುಗಳು ಹಾಗೂ ಸಮವಸ್ತ್ರವನ್ನು ಸಾಗಿಸಲಾಗುತ್ತದೆ. ಜೊತೆಗೆ ದಾವಣಗೆರೆ ಎಪಿಎಂಸಿ ಯವರ ಸಿಬ್ಬಂದಿ ವತಿಯಿಂದ ಸ್ವಚ್ಛತೆಗೆ ಸಹಕಾರ ಮಾಡಲಾಗುತ್ತದೆ.
ಹೊರಗಡೆ ಪ್ರದೇಶದಲ್ಲಿ ಸ್ಟ್ರೀಟ್ ಲೈಟ್ ಹಾಕಲಾಗುತ್ತದೆ. ಮತ್ತು ಶೀಘ್ರದಲ್ಲೇ ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿ ಮಾಡಿ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಪರಸ್ಥಳದಿಂದ ಬರುವಂತ ಜನರಿಗೆ ಮತ್ತು ವಾಹನ ಸವಾರರಿಗೆ ಟ್ರಾಪಿಕ್ ಸಮಸ್ಯೆಗಳು ಬರದಂತೆ ಎಪಿಎಂಸಿ, ಎಸ್.ಜೆ.ವಿ.ಪಿ. ಕಾಲೇಜು ಆವರಣ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ.
ಕಳ್ಳತನ ತಡೆಯಲು ಹೆಚ್ಚಿನ ಪೊಲೀಸ್ ನಿಯೋಜನೆ, ಪ್ರಮುಖ ವೃತ್ತ ಮತ್ತು ಹೊರವಲಯದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ. 24/7 ನೀರು ಸರಬರಾಜು ತೊಂದರೆ ಆಗದಂತೆ ಅತಿ ಶೀಘ್ರದಲ್ಲೇ ಕವಲೆತ್ತು ಬಳಿ ಇರುವಂತ ಜಾಕ್ ವೇಲ್ ನಲ್ಲಿ ಹೊಸದಾಗಿ ಮೋಟರ್ ಅಳವಡಿಸಲಾಗುತ್ತದೆ.
ಹಬ್ಬದ ಸಂದರ್ಭದಲ್ಲಿ ಸಾಂಕ್ರಾಮಿಕ ಹೆಚ್ಚಳದಿಂದಾಗಿ, ಆರೋಗ್ಯ ಸಮಸ್ಯೆಗಳು ಆಗದಂತೆ, ಆರೋಗ್ಯ ಚಿಕಿತ್ಸಾ ಕೇಂದ್ರದ ಟೆಂಟ್ ನಿರ್ಮಿಸಿ ಆ ಸ್ಥಳದಲ್ಲಿ ವೈದ್ಯರ ಮತ್ತು ಆರೋಗ್ಯ ಸಿಬ್ಬಂದಿಗಳ ನೇಮಕ ಮಾಡಲಾಗುತ್ತದೆ. ಸೊಳ್ಳೆ ನಿಯಂತ್ರಣ ದೃಷ್ಟಿಯಿಂದ ಎಲ್ಲಾ ಬಡಾವಣೆಯಲ್ಲಿ ಪಾಂಗಿಂಗ್ ಮಾಡಲಾಗುತ್ತದೆ. ಜೊತೆಗೆ ಡಿಡಿಟಿ ಪೌಡರ್ ಸಿಂಪಡಣೆ ಮಾಡಲಾಗುತ್ತದೆ. ಬೆಂಕಿಯ ಅವಘಡ ಆಗದಂತೆ ತಡೆಯಲು ಅಗ್ನಿಶಾಮಕ ದಳದ ಸಿಬ್ಬಂದಿಗಳ ನಿಯೋಜಿಸಲಾಗುತ್ತದೆ. ಅಧಿಕಾರಿ ಗಳು ನಿರ್ಲಕ್ಷ್ಯ ತೋರಿದ್ದು, ಗಮನಕ್ಕೆ ಬಂದರೆ, ಮತ್ತೊಮ್ಮೆ 16 ನೇ ತಾರೀಕು ಸಭೆ ಆಯೋಜಿಸಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದಾಗಿ ಹೇಳಿದರು.
ಜಾತ್ರಾ ಮಹೋತ್ಸವದ ವೇಳೆ ಫ್ಲೆಕ್ಸ್ ಹಾಕುವಾಗ ನಗರಸಭೆಯಿಂದ ಅನುಮತಿ ಪಡೆದು ಹಾಕಬೇಕು, ಅನಧಿಕೃತವಾಗಿ ಹಾಕಿದರೆ, ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ನಗರಸಭೆ ಹಿರಿಯ ಸದಸ್ಯರಾದ ಎ. ವಾಮನಮೂರ್ತಿ, ಪಿ.ಎನ್. ವಿರೂಪಾಕ್ಷಪ್ಪ, ಆರ್.ಸಿ. ಜಾವಿದ್, ಎಸ್.ಎ. ವಸಂತ್, ಕೆ.ಬಿ. ರಾಜಶೇಖರ್, ಬಾಬುಲಾಲ್, ಲಕ್ಷ್ಮೀ ಮೋಹನ್, ಮುಜಾಮಿಲ್ ಬಿಲ್ಲು, ಅಬ್ದುಲ್ ಅಲಿಂ, ಉಷಾ ಮಂಜುನಾಥ್, ಸಾವಿತ್ರಮ್ಮ, ದಾದಾ ಖಲಂದರ್, ಎಸ್.ಕೆ. ಶಾಹಜಾದ್, ಸನಾವುಲ್ಲಾ, ಹನುಮಂತಪ್ಪ. ರಜನಿಕಾಂತ್, ಸಿಪಿಐ ದೇವಾನಂದ್ ಸಲಹೆಗಳನ್ನು ನೀಡಿದರು.
ದಾವಣಗೆರೆ ಉಪವಿಭಾಗ ಧಿಕಾರಿ ಸಂತೋಷ ಕುಮಾರ್, ಜಿಲ್ಲಾಯೋಜನಾಧಿಕಾರಿ ಮಹಾಂತೇಶ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಗುತ್ತೂರು,
ಸದಸ್ಯರಾದ ಕೆ.ಜಿ. ಸಿದ್ದೇಶ್, ದಿನೇಶ್ ಬಾಬು, ಪಕ್ಕಿರಮ್ಮ, ನಾಗರತ್ನಮ್ಮ, ಬಿ. ಅಲ್ತಾಫ್, ನಾಮನಿರ್ದೇಶನ ಸದಸ್ಯರಾದ ಜೊಸೆಫ್ ದಿವಾಕರ್, ಸಂತೋಷ ದೊಡ್ಡಮನೆ, ಎಇಇ ವಿನಯ್ ಕುಮಾರ್, ಮ್ಯಾನೇಜರ್ ನಿರಂಜನಿ, ಜಲಸಿರಿ ಇಲಾಖೆ ಅಧಿಕಾರಿ ನವೀನ್ ಕುಮಾರ್, ಬೆಸ್ಕಾಂ ಇಲಾಖೆ ಅಧಿಕಾರಿ ಲಕ್ಷ್ಮಣ್, ಆರೋಗ್ಯ ಇಲಾಖೆ ರವಿಪ್ರಕಾಶ್, ನಾಗರಾಜ್, ಆರ್.ಐ ರಮೇಶ್, ಕೇಸ್ ವರ್ಕರ್ ರಾಮು, ಪರಸಪ್ಪ, ಗಾಯಿತ್ರಾ, ಲತಾ, ನಾಗರತ್ನಮ್ಮ, ಮನಸೂರು ಮದ್ದಿ, ಮಾರುತಿ ವಕೀಲರು ಇತರರು ಹಾಜರಿದ್ದರು.