ದಾವಣಗೆರೆ, ಫೆ. 27 – ತಾಲ್ಲೂಕಿನ ಜುಮ್ಮಾಪುರದಲ್ಲಿ 60 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಜುಮ್ಮಾಪುರದ ಕುಮಾರ್ ಎಂಬುವರು ಬುಧವಾರ ರಾತ್ರಿ ಗ್ರಾಮಕ್ಕೆ ತೆರಳುವಾಗ ರಸ್ತೆ ಬದಿಯ ಬಾವಿಗೆ ಬಿದ್ದಿದ್ದರು. ಬಾವಿ ಖಾಲಿ ಇರುವುದರಿಂದ ಸೊಂಟ, ಬೆನ್ನುಮೂಳೆಗೆ ಬಲವಾದ ಪೆಟ್ಟುಬಿದ್ದು ನರಳುತ್ತಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಏಣಿಯ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗೇಶ್, ಸಿಬ್ಬಂದಿಗಳಾದ ಭೀಮರಾವ್, ಪ್ರೇಮಾನಂದ ಶೆಟ್ಟಿ, ಸುಭಾನ್, ಪ್ರದೀಪ್ ಕುಮಾರ್, ಪರಶುರಾಮ ಪೂಜಾರ, ಶಿವರಾಜ್ ಜಮಖಂಡಿ, ಗೋಪಾಲ್ ದಮಣೇಕರ, ಗಂಗಾ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.