ಅದು ಸ್ವಾತಂತ್ರ್ಯ ಪೂರ್ವದ ಸಮಯ. ಭಾರತ ಅಂದರೆ ಏಕೀಕೃತ ಹಿಂದೂ ಸ್ಥಾನ ದೇಶದ ಮೈಸೂರು ರಾಜ್ಯ. ಅಂದರೆ ಹಿಂದಿನ ಮೈಸೂರು ಸಂಸ್ಥಾನವು ಮೈಸೂರಿನ ಯದುವಂಶದ ಅರಸರ ಅಂದರೆ ಮೈಸೂರು ಒಡೆಯರ ಒಡೆತನದಲ್ಲಿತ್ತು.
ಮೈಸೂರು ಒಡೆಯರ ಆಳ್ವಿಕೆಯ ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸದನಕ್ಕೆ ಜನರು ತಮ್ಮ ತಮ್ಮ ತಾಲ್ಲೂಕಿನಿಂದ ಜನಪ್ರತಿನಿಧಿ ಗಳನ್ನು ಆಯ್ಕೆ ಮಾಡಿ ಕಳಿಸುವ ಪದ್ಧತಿ ಇತ್ತು. ಮೈಸೂರು ಪ್ರಜಾಪ್ರತಿನಿಧಿ ಸದನದ ಸದಸ್ಯರು ಎಂದು ಕರೆಯ ಲಾಗುತ್ತಿತ್ತು. ಇಂದಿನ ಕರ್ನಾಟಕ ವಿಧಾನಮಂಡಲದ ಕೆಳ ಸದನವಾದ ವಿಧಾನಸಭೆಯ ಸದಸ್ಯರಂತೆ ಅವರು ಸಾರ್ವಜನಿಕ ಸೇವೆಯ ಅಧಿಕಾರ ಹೊಂದಿದ್ದರು.
`ನಮ್ಮ ಅಜ್ಜನವರಾದ ಡಿ.ಜಿ.ಶಂಕ್ರಪ್ಪಗೌಡ ಅವರು 1936 ಮತ್ತು 1941ರಲ್ಲಿ ಎರಡು ಬಾರಿ ಮೈಸೂರು ಪ್ರಜಾಪ್ರತಿನಿಧಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.’ ಅವರು ಮೊದಲ ಬಾರಿ ಆಯ್ಕೆಯಾಗಿ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಅಧಿವೇಶನಕ್ಕೆ ಹೋದಾಗ ಹೊಸ ಸದಸ್ಯರೊಂದಿಗೆ ಅವರನ್ನು ಮೈಸೂರು ಮಹಾರಾಜರ ಪ್ರತಿನಿಧಿ ಸ್ವಾಗತಿಸಿದ ಸಂದರ್ಭದ ಅಪರೂಪದ ಫೋಟೋ. ಇತ್ತೀಚಿಗೆ ಹಳೆಯ ದಾಖಲೆಗಳನ್ನು ಹುಡುಕುತ್ತಿದ್ದಾಗ ಈ ಫೋಟೋ ಸಿಕ್ಕಿದ್ದು, ತುಂಬಾ ಸಂತಸವಾಗಿ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಡಿ.ಜಿ. ಶಂಕ್ರಪ್ಪಗೌಡರ ಸಮುದಾಯ ಸೇವೆಯನ್ನು ಪರಿಗಣಿಸಿ, ಅಂದಿನ ಮೈಸೂರು ಮಹಾರಾಜರು ನಮ್ಮ ಅಜ್ಜನವರಿಗೆ `ಲೋಕ ಸೇವಾ ನಿರತ’ ಎಂಬ ಬಿರುದು ನೀಡಿ ಗೌರವಿಸಿದ್ದರು ಎಂಬುದನ್ನು ಈಗಲೂ ಈ ಭಾಗದ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ನಮ್ಮ ಅಜ್ಜ ಶಂಕ್ರಪ್ಪಗೌಡರಿಗೆ ಜನಸೇವೆ ಹವ್ಯಾಸ ಮೂಡಿದ್ದು, ಅವರ ತಂದೆ – ತಾಯಿಯಿಂದ ಬಂದ ಬಳುವಳಿ. ಆ ಲೋಕಸೇವೆಯ ಅಂದರೆ ಜನಸೇವೆಯ ಪರಂಪರೆ ನಮ್ಮ ಮನೆತನದಲ್ಲಿ ಹಾಗೆಯೇ ಮುಂದುವರೆದಿದೆ ಎಂದು ಹೇಳಲು ಸಂತಸವೆನಿಸುತ್ತದೆ.
– ಡಿ.ಎಸ್.ಸುರೇಂದ್ರ
(ಶಾಸಕ ಡಿ ಜಿ ಶಾಂತನಗೌಡರ ಪುತ್ರ)
ನಿರ್ದೇಶಕರು, ಡಿಸಿಸಿ ಬ್ಯಾಂಕ್, ದಾವಣಗೆರೆ