ಸೂರ್ಯನಿಂದಲೇ ಸಕಲ ಜೀವಂತಿಕೆ

ಸೂರ್ಯನಿಂದಲೇ ಸಕಲ ಜೀವಂತಿಕೆ

 ಹಿರಿಯ ಪ್ರವಚನಕಾರ ಗೋಪಾಲಚಾರ್ ಮಣ್ಣೂರ್

ದಾವಣಗೆರೆ, ಫೆ.24- ಜಗತ್ತನ್ನು ಬೆಳಗುವ ಸೂರ್ಯ, ಸಕಲ ಜೀವರಾಶಿಗಳ ಜೀವಂತಿಕೆಗೆ ಮೂಲ ಕಾರಣನಾಗಿದ್ದಾನೆ ಎಂದು ಹಿರಿಯ ಪ್ರವಚನಕಾರ ಗೋಪಾಲಚಾರ್ ಮಣ್ಣೂರ್ ಹೇಳಿದರು.

ನಗರದ ಆದರ್ಶ ಯೋಗ ಪ್ರತಿಷ್ಠಾನದ ವತಿಯಿಂದ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಥಸಪ್ತಮಿ ಹಾಗೂ ಮಹಾಕುಂಭಮೇಳದ ಅಮೃತ ತೀರ್ಥ ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇಶದ ಅನೇಕ ಹಬ್ಬಗಳಲ್ಲಿ ರಥಸಪ್ತಮಿಯು ಸಹ ವಿಶೇಷ ಆಚರಣೆಯಾಗಿದೆ. ಇದನ್ನು ಸೂರ್ಯ ಜಯಂತಿ ಎಂತಲೂ ಹೇಳುತ್ತಾರೆ. ಈ ದಿನದಂದು ಸೂರ್ಯ ಅರುಣ ಎಂಬ ಸಾರಥಿಯೊಂದಿಗೆ ತನ್ನ ಏಳು ಕುದುರೆಗಳುಳ್ಳ ವಿಶೇಷ ರಥದಲ್ಲಿ ಕುಳಿತು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರಪಂಚದ ಪರ್ಯಟನೆ ಪ್ರಾರಂಭಿಸುತ್ತಾನೆ ಎಂದು ಅವರು ವಿವರಿಸಿದರು.

ಪರ್ಯಟನೆ ವೇಳೆ ಸೂರ್ಯನು ಭೂಮಿಗೆ ಸ್ವಲ್ಪ ಹತ್ತಿರ ಬರುವನು ಎಂಬ ನಂಬಿಕೆಯೂ ಇದೆ. ಆದ್ದರಿಂದ ರಥಸಪ್ತಮಿ ಎಂಬ ಹೆಸರು ಪ್ರತೀತವಾಯಿತು ಎಂದು ಹೇಳಿದರು.

ಒಂದು ವೇಳೆ 15 ದಿವಸ ಸೂರ್ಯೋದಯ ಆಗದಿದ್ದಲ್ಲಿ ನಾವುಗಳಾರೂ ಬದುಕಿರಲು ಸಾಧ್ಯವಿಲ್ಲ. ಆದ್ದರಿಂದ ಅವಶ್ಯವಾಗಿ ಎಲ್ಲರೂ ಪ್ರತಿನಿತ್ಯ ಕೃತಜ್ಞತಾ ಭಾವದಿಂದ ಸೂರ್ಯ ನಮಸ್ಕಾರ, ಸೂರ್ಯ ಮಂತ್ರ, ಸ್ತೋತ್ರ, ಜಪ ಮಾಡಿ ಪೂಜಿಸಿ ವಂದಿಸಬೇಕು ಎಂದು ಮಾಹಿತಿ ನೀಡಿದರು.

ಈ ವೇಳೆ ಯೋಗ ಗುರು ರಾಘವೇಂದ್ರ ಗುರೂಜಿ, ಎನ್‌.ವಿ. ಸುನೀಲ್‌ ಕುಮಾರ್, ವೀರಭದ್ರಸ್ವಾಮಿ, ಯೋಗ ಶಿಕ್ಷಕ ಪ್ರಭುಸ್ವಾಮಿ ಹಿರೇಮಠ್, ಅಂಜಲಿದೇವಿ, ಕೆ.ಇ.ಬಿ.ಯ ನರಸಿಂಹಮೂರ್ತಿ, ಡಿ.ಹೆಚ್‌.ಎಂ. ವೇದಾವತಿ, ಹೆಚ್‌. ಸಂತೋಷ್, ರೇಖಾ ಕಲ್ಲೇಶ್, ಶಾಂತಮ್ಮ ಗಾಣಿಗೇರ್ ಇತರರು ಇದ್ದರು.

error: Content is protected !!