ಬಿ.ವೈ. ವಿಜಯೇಂದ್ರರ ನೇತೃತ್ವದಲ್ಲೇ ಪಂಚಾಯ್ತಿ ಚುನಾವಣೆ ನಡೆಯಲಿವೆ

ಬಿ.ವೈ. ವಿಜಯೇಂದ್ರರ ನೇತೃತ್ವದಲ್ಲೇ  ಪಂಚಾಯ್ತಿ ಚುನಾವಣೆ ನಡೆಯಲಿವೆ

ದಾವಣಗೆರೆ, ಫೆ.23- ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ವಿಧಾನಸಭಾ ಚುನಾವಣೆಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿಯೇ ನಡೆಯಲಿವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ನಾಯಕರಿಗೆ ವಿಜಯೇಂದ್ರ ಅವರ ಮೇಲೆ ವಿಶ್ವಾಸವಿದೆ. ಅವರ ನಾಯಕತ್ವದ ಬಗೆಗೆ ಆಕ್ಷೇಪ ಹೊಂದಿರುವ ಭಿನ್ನಮತೀಯರು ಹೈಕಮಾಂಡ್‌ ಸಂಪರ್ಕಿಸುವುದು ಒಳಿತು. ಹಾದಿ–ಬೀದಿಯಲ್ಲಿ ನಾಯಕರನ್ನು ಟೀಕೆ ಮಾಡುವುದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಒಬ್ಬ ಭ್ರಷ್ಟ ರಾಜಕಾರಣಿ. ರಾಜಕಾರಣಕ್ಕೆ ಬರುವುದಕ್ಕೂ ಮುನ್ನ ಅವರ ಆಸ್ತಿ ಎಷ್ಟಿತ್ತು ಎಂಬುದು ಗೊತ್ತಿದೆ. ಸ್ವಕ್ಷೇತ್ರ ಬಬಲೇಶ್ವರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತಿಯನ್ನು ಅವರು ಎಂದಿಗೂ ತೋರಿಲ್ಲ. ಕಾಂಗ್ರೆಸ್‌ನ ಪ್ರಭಾವಿ ನಾಯಕರೊಂದಿಗೆ ಅವರು ಹೊಂದಾಣಿಕೆ ಮಾಡಿಕೊಂಡಿಲ್ಲವೇ ? ಎಂದು ಪ್ರಶ್ನಿಸಿದರು. ಮಾಜಿ ಸಚಿವ ಕುಮಾರ ಬಂಗಾರಪ್ಪ ಕಾಂಗ್ರೆಸ್‌ನಲ್ಲಿ ಅನಾಥ ಶಿಶುವಾಗಿದ್ದರು. ಚುನಾವಣೆಯಲ್ಲಿ ಸೋಲು ಕಂಡಿದ್ದ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ. ಪಕ್ಷದ ನಾಯಕರ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಕಾಂಗ್ರೆಸ್‌ ವಿರುದ್ಧ ಹೋರಾಟ ಮಾಡಲಿ  ಎಂದು ಹೇಳಿದರು.

error: Content is protected !!