4 ಕ್ಷೇತ್ರಗಳಲ್ಲಿಯೂ ಒತ್ತಡ
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನಾಲ್ಕು ಕ್ಷೇತ್ರಗಳಿಂದಲೂ ಒತ್ತಡ ಇದೆ. ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಹೊನ್ನಾಳಿ, ಹರಿಹರ, ದಾವಣಗೆರೆ ಉತ್ತರ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಜನರು ಕೇಳಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಬಗ್ಗೆ ಯಾವುದೇ ನಿರ್ಧಾರ ಈವರೆಗೂ ತೆಗೆದುಕೊಂಡಿಲ್ಲ ಎಂದು ಜಿ. ಬಿ. ವಿನಯ್ ಕುಮಾರ್ ಸ್ಪಷ್ಟನೆ ನೀಡಿದರು.
ದಾವಣಗೆರೆ, ಫೆ. 23 – ನಮ್ಮ ಹೋರಾಟ ಯಾವುದೇ ಕ್ರೆಡಿಟ್ ಪಡೆಯಲು ಅಲ್ಲ. ತಾಳಿದವನು ಬಾಳಿಯಾನು ಎಂಬಂತೆ ನಿಧಾನವಾದರೂ ಮುಂದೊಂದು ದಿನ ದೊಡ್ಡ ಜವಾಬ್ದಾರಿ ಸಿಗುತ್ತದೆ ಎಂಬ ದೃಢವಾದ ನಂಬಿಕೆ ನನ್ನದು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಎಸ್. ಎಸ್. ಬಡಾವಣೆ ಎ ಬ್ಲಾಕ್ 10 ನೇ ಕ್ರಾಸ್ ನಲ್ಲಿರುವ ಸ್ವಾಭಿಮಾನಿ ಬಳಗದ ಗೃಹ ಕಚೇರಿಯಲ್ಲಿ ಇಂದು ಆಯೋಜಿಸಿದ್ದ `ಸಂವಿಧಾನವೇ ನಮ್ಮ ಸಿದ್ಧಾಂತ’ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ರಾಜ್ಯದ ಎಲ್ಲಾ ತಾಲ್ಲೂಕುಗಳಿಗೂ ಭೇಟಿ ನೀಡಿ, ಸ್ವಾಭಿಮಾನಿ ಕ್ರಾಂತಿ ಮೊಳಗಿಸಲಾಗುತ್ತದೆ. ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ವಿಚಾರಗಳನ್ನು ಜನರ ಮುಂದಿಡಲಾಗುವುದು ಎಂದು ಹೇಳಿದರು.
15 ರಿಂದ 20 ದಿನಗಳ ಕಾಲ ಕಲ್ಯಾಣ ಕರ್ನಾಟಕದಲ್ಲಿ ವಾಸ್ತವ್ಯ ಮಾಡಿ, ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಜ್ಞೆ ಮೂಡಿಸುವ ಪ್ರಯತ್ನ ನಡೆಸುತ್ತೇವೆ ಎಂದರು.
ಭಯ ಮುಕ್ತ ವಾತಾವರಣ ನಿರ್ಮಾಣ ಆದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಂತೆ. ದಾಸ್ಯ, ಗುಲಾಮಗಿರಿಯತ್ತ ಸಾಗಿದರೆ ಶಕ್ತಿ ಕುಂಠಿತವಾಗುತ್ತದೆ. ರಾಜಕಾರಣಕ್ಕೆ ಹೆದರಿ, ಸಣ್ಣಪುಟ್ಟ ಹುದ್ದೆ ಹೋಗುತ್ತವೆ ಎಂಬ ಕಾರಣಕ್ಕೆ ದಾಸರಾಗಿ ಕೆಲವರು ಬದುಕುತ್ತಿದ್ದಾರೆ. ಅವರಿನ್ನೂ ಭಯದಿಂದ ಹೊರಗೆ ಬಂದಿಲ್ಲ. ಭಯದಿಂದ ಜನರನ್ನು ಹೊರ ತರಲು ಸಾಧ್ಯವಿರುವುದು ಶಿಕ್ಷಣದಿಂದ ಮಾತ್ರ ಎಂದರು.
ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲ, ಗ್ರಂಥಾಲಯ ಇದ್ದರೂ ಕಾರ್ಯಾಚರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮರಾಠಿಗರು ಕಲ್ಲು ಹೊಡೆದಾಗ ಕನ್ನಡ ಜಾಗೃತವಾಗುತ್ತದೆ. ಆಗ ಭಾವಾನಾತ್ಮಕವಾಗಿ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತದೆ. ಆದರೆ, ಕನ್ನಡ ಉಳಿಯಬೇಕು, ಬೆಳೆಯಬೇಕು ಎಂದರೆ ಸರ್ಕಾರಿ ಶಾಲೆಗಳು ಉಳಿಯುವ ಜೊತೆಗೆ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಬಳಗದ ಪ್ರಮುಖರಾದ ರಾಜು ಮೌರ್ಯ, ವಿರೂಪಾಕ್ಷಪ್ಪ ಪಂಡಿತ್, ಗೀತಾ ಮುರುಗೇಶ್, ಕೇಶವಮೂರ್ತಿ, ಗಂಗಾಧರ್, ಪುರಂದರ ಲೋಕಿಕೆರೆ, ಶಿವಕುಮಾರ್ ಡಿ. ಶೆಟ್ಟರ್, ಮೊಹಮ್ಮದ್ ಸಾಧಿಕ್, ಎಂ. ಪ್ರವೀಣ್ ಕುಮಾರ್, ಎಂ. ರಾಮಕೃಷ್ಣ, ಸುದೀಪ್, ರಾಜು ಕಣಗಣ್ಣನವರ್, ಶರತ್ ಕುಮಾರ್, ಶಿವಕುಮಾರ್ ಸಂಬಳಿ, ವಸಂತಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ರಾಜ್ಯದ ಬೇರೆ ಬೆೇರೆ ಜಿಲ್ಲೆಗಳಿಂದಲೂ ಸ್ವಾಭಿಮಾನಿ ಬಳಗದ ಕಾರ್ಯವೈಖರಿ ಮೆಚ್ಚಿ ಆಗಮಿಸಿದ್ದು ವಿಶೇಷವಾಗಿತ್ತು.