ಹರಿಹರ, ಫೆ. 23 – ಮಾ.18ರಿಂದ 22ರ ವರೆಗೆ ನಡೆಯುವ ನಗರ ದೇವತೆ ತಾಯಿ ಊರಮ್ಮನ ಉತ್ಸವವನ್ನು ಮೌಢ್ಯಾಚರಣೆ ರಹಿತ ಆಚರಿಸುವಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಗ್ರೇಡ್-2 ತಹಶೀಲ್ದಾರ್ಗೆ ನಿನ್ನೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ತಾಲ್ಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಅವರು, ಐದು ದಿನಗಳ ಕಾಲ ನಡೆಯುವ ಉತ್ಸವದ ಹೆಸರಲ್ಲಿ ಅಮಾಯಕ ನಾಗರಿಕರು ಮೌಢ್ಯಾಚರಣೆಗಳನ್ನು ಆಚರಿಸುತ್ತಾರೆ, ಇನ್ನು ಕೆಲವರು ಮೌಢ್ಯಾಚರಣೆ ನಡೆಸಲು ಪ್ರೇರಣೆ ನೀಡುತ್ತಾರೆ ಎಂದು ತಿಳಿಸಿದರು.
ಅರೆ ಬೆತ್ತಲೆ ಅಥವಾ ಬೇವಿನ ಉಡುಗೆ ಆಚರಣೆ : ಉತ್ಸವದ ನಿಮಿತ್ತ ನಗರದ ದೇವಸ್ಥಾನ ರಸ್ತೆಯಲ್ಲಿ ರಚಿಸಲಾಗುವ ಚೌಕಿಮನೆ ಎದುರು ಹಾಗೂ ಇತರೆಡೆ ನೂರಾರು ಪುರುಷ, ಮಹಿಳೆಯರು ಭಕ್ತಿ, ಹರಕೆಯ ಹೆಸರಲ್ಲಿ ಅರೆಬೆತ್ತಲೆ, ಬೇವಿನ ಉಡುಗೆ ಸೇವೆಯೆಂಬ ಮೌಢ್ಯವನ್ನು ಆಚರಿಸುತ್ತಾರೆ ಎಂದರು.
ಬೇವಿನ ಸೇವೆ ಮಾಡುವುದು ಅನಿವಾರ್ಯವಾದರೆ ಪುರುಷರು, ಮಹಿಳೆಯರು ದೇಹದ ಮೇಲಿನ ಬಟ್ಟೆ ಯನ್ನು ತೆರವುಗೊಳಿಸದೆ ಬಟ್ಟೆಗಳ ಮೇಲೆಯೇ ಬೇವನ್ನು ಲಗತ್ತಿಸಿಕೊಂಡು ಹರಕೆಯ ಪ್ರಕ್ರಿಯೆಯನ್ನು ನೆರೆವೇರಿಸ ಬೇಕು. ಯಾವುದೇ ಕಾರಣಕ್ಕೂ ಮಹಿಳೆಯರು ವಿವಸ್ತ್ರ ರಾಗಿ ಬೇವಿನ ಉಡುಗೆ ಆಚರಿಸಬಾರದು ಎಂದು ಹೇಳಿದರು.
ಕೋಣಗಳ ಬಲಿ ನಿಷೇಧ : ಕಾನೂನು, ನಿಬಂಧನೆಗಳ ಅನ್ವಯ ದೇವ, ದೇವಿಯ ಹೆಸರಲ್ಲಿ ಕೋಣವನ್ನು ಬಲಿ ನೀಡುವಂತಿಲ್ಲ. ಹೀಗಾಗಿ ಈ ಉತ್ಸವದಲ್ಲಿ ಕೋಣಗಳ ಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಹೊರೆ ತಗ್ಗಿಸುವುದು : ಉತ್ಸವ, ಆಚರಣೆಯ ಹೆಸರಲ್ಲಿ ಶ್ರೀಮಂತರ ಅನುಕರಣೆ ಮಾಡುವ ಬಡವರು, ದಲಿತರು ಮತ್ತು ಹಿಂದುಳಿದ ವರ್ಗದವರು ಕುರಿಗಳ ಬಲಿ ನೀಡುತ್ತಾ, ಸಾಲದ ಸುಳಿಗೆ ಸಿಲುಕುತ್ತಾರೆ, ಆ ಸಾಲ ಮತ್ತು ಬಡ್ಡಿ ತೀರಿಸಲು ಕುಟುಂಬದ ಸದಸ್ಯರೆಲ್ಲರೂ ಹಲವು ವರ್ಷಗಳವರೆಗೆ ದುಡಿಯಬೇಕಾಗುತ್ತದೆ. ದೇವ, ದೇವತೆಗಳಿಗೆ ಮನುಷ್ಯನ ಭಕ್ತಿ, ಭಾವ ಮುಖ್ಯವೇ ಹೊರತು, ಪ್ರಾಣಿಗಳ ಬಲಿ ನೀಡುವುದಲ್ಲ ಎಂದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ರಚಿಸಿದ ದೇಶದ ಸಂವಿಧಾನದಲ್ಲೂ ಕೂಡ ದೇಶದ ನಾಗರಿಕರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬೆಳೆಸಲು ಆದ್ಯತೆ ನೀಡುವ ಆಶಯ ವ್ಯಕ್ತಪಡಿಸಲಾಗಿದೆ.
ಈ ಕಾರಣದಿಂದಾಗಿ ಹರಿಹರದ ಗ್ರಾಮದೇವತೆ ಉತ್ಸವದಲ್ಲಿ ಭಕ್ತಿ, ಭಾವದ ಪರಾಕಾಷ್ಟೆ ಇರಲಿ, ಮೌಢ್ಯಾಚರಣೆಗಳು ತೊಲಗುವಂತೆ ತಾಲ್ಲೂಕು ಮತ್ತು ಜಿಲ್ಲಾಡಳಿತವು ಬೀದಿ ನಾಟಕ, ಕರಪತ್ರ ವಿತರಣೆ, ಧ್ವನಿವ ರ್ಧಕದ ಮೂಲಕ ವ್ಯಾಪಕ ಪ್ರಚಾರ ಕಾರ್ಯ ನಡೆಸುವ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಬೇಕಾಗಿ ನಮ್ಮ ಸಂಘಟನೆಯು ಆಗ್ರಹಿಸುತ್ತದೆ ಎಂದರು.
ಈ ವೇಳೆ ಕ.ದ.ಸಂ.ಸ ಮುಖಂಡರಾದ ಕಡ್ಲೆಗೊಂದಿ ತಿಮ್ಮಣ್ಣ, ಸಂಜೀವ್, ಅಂಜಿನಪ್ಪ, ಪರಶುರಾಮ್, ಧನು ಕುಮಾರ್, ಬಸವರಾಜ್ ಇದ್ದರು.