ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗುರುಪ್ರಸಾದ್
ದಾವಣಗೆರೆ, ಫೆ. 23 – ಮಗುವಿನಲ್ಲಿ ಅಡಗಿರುವ ಕೌಶಲ ಹೊರತರಲು ಪೂರಕ ವಾತಾ ವರಣ ಸೃಷ್ಟಿಸಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿ ಕಾರಿ ಗುರುಪ್ರಸಾದ್ ತಿಳಿಸಿದರು.
ಜಿಲ್ಲಾ ಬಾಲ ಭವನ ಸಮಿತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ಆವರ ಗೆರೆಯ ಸಿದ್ಧಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋ ಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾ ಟಿಸಿ ಅವರು ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಶಿಕ್ಷಕರದಷ್ಟೇ ಅಲ್ಲ, ಪೋಷಕರ ಮೇಲೂ ಇದೆ. ಹಾಗಾಗಿ ಮಕ್ಕಳ ಕನಸುಗಳಿಗೆ ಜೀವ ತುಂಬುವ ಕಾರ್ಯವನ್ನು ಇಬ್ಬರೂ ಮಾಡಬೇಕು ಎಂದರು.
ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಜತೆಗೆ ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಜಿಲ್ಲಾ ಬಾಲಭವನದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವಾರಾಂತ್ಯದ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿನ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಬಾಲ ಭವನ ಉದ್ಯಾನವನ ಮತ್ತು ಪುಟಾಣಿ ರೈಲಿನ ಕಾಮಗಾರಿ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಬಾಲ ಭವನದ ಸಂಯೋಜಕಿ ಎಸ್.ಬಿ.ಶಿಲ್ಪ, ಸಿದ್ಧಲಿಂಗೇಶ್ವರ ಪ್ರೌಢಶಾಲೆಯ ಎ.ಹೆಚ್. ಸಿದ್ಧಲಿಂಗಸ್ವಾಮಿ, ಮುಖ್ಯಶಿಕ್ಷಕಿ ಸಾವಿತ್ರಿ, ಉದಯ ರವಿ ಕಾನ್ವೆಂಟ್ ಶಾಲೆಯ ನಾಗರತ್ನ, ತೌಜು, ಕೆ. ಸರಸ್ವತಿ ಇದ್ದರು.