ದಾವಣಗೆರೆ, ಫೆ. 12- ನಗರದಲ್ಲಿ 2002 ರಲ್ಲಿ ಆಶ್ರಯ ಯೋಜನೆಗೆ ಅಕ್ರಮವಾಗಿ ಒತ್ತು ವರಿ ಮಾಡಿಕೊಂಡಿರುವ 3 ಎಕರೆ ಜಮೀನಲ್ಲಿನ ಮನೆ, ಕಟ್ಟಡಗಳ ತೆರವಿಗೆ ದಾವಣಗೆರೆಯ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶ ನೀಡಿದೆ ಎಂದು ಜಾಗದ ಮಾಲೀಕ ಅರಣಿ ರುದ್ರೇಶ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಆಶ್ರಯ ಯೋಜನೆಯಿಂದ 2002 ರಲ್ಲಿ ಏಕಾಏಕಿ ನಮಗೆ ಸೇರಿದ ಮೂರು ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದ್ದಲ್ಲದೆ ಮನೆಗಳ ನಿರ್ಮಾಣ ಸಹ ಮಾಡ ಲಾಗಿತ್ತು. ಆಗಲೇ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು ಎಂದು ತಿಳಿಸಿದರು.
ಆದರೆ ಈಗ ಎಸ್ಪಿಎಸ್ ನಗರದಲ್ಲಿ ನಿರ್ಮಾಣಗೊಳಿಸಿರುವ 136 ಮನೆಗಳಿರುವ ಸರ್ವೇ ನಂಬರ್ 145/1ಪಿ ಯಲ್ಲಿನ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಮೀನು ತಮಗೆ ಸೇರಿದ್ದು ಎಂದು ಸಾಕ್ಷಿ ಆಧಾರ ಸಮೇತ ನ್ಯಾಯಾಲಯದಲ್ಲಿ ಸಾಬೀತಾಯಿತು. ಜಮೀನಿನ ಒತ್ತುವರಿ ಪ್ರಶ್ನಿಸಿ ದಾವಣಗೆರೆಯ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು. ಅಲ್ಲಿ ನಮ್ಮ ಪರವಾಗಿಯೇ ತೀರ್ಪು ಬಂದಿತ್ತು ಎಂದು ತಿಳಿಸಿದರು.
ಆಶ್ರಯ ಯೋಜನೆ, ಜಿಲ್ಲಾಡಳಿತದ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಸುದೀರ್ಘ ವಿಚಾರಣೆಯ ನಂತರ ಉಚ್ಚ ನ್ಯಾಯಾಲಯ ಪುನಃ ದಾವಣಗೆರೆಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಆದೇಶಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರು ತಿಂಗಳಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ ಜಾಗದಲ್ಲಿನ ಮನೆಗಳನ್ನು ತೆರವು ಮಾಡಿ, ಜಾಗವನ್ನು ಮಾಲೀಕರಿಗೆ ನೀಡುವಂತೆ ಆದೇಶ ನೀಡಿದೆ. ಅದರ ವಿರುದ್ದ ಆಶ್ರಯ ಸಮಿತಿ, ಸಂಬಂಧಿತರು ನ್ಯಾಯಾಲಯದಲ್ಲಿ ಮತ್ತೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯ ಈ ಬಗ್ಗೆ ಯಾವುದೇ ಆದೇಶ ನೀಡಿಲ್ಲ ಎಂದು ತಿಳಿಸಿದರು.
ಇನ್ನು ಇದರ ಮುಂದಿನ ಕ್ರಮಗಳ ಬಗ್ಗೆ ಮಾ. 5 ರಂದು ನ್ಯಾಯಾಲಯದ ಗಮನಕ್ಕೆ ತರುವಂತೆ ಆದೇಶ ನೀಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಸಂತೋಷ್ ಪಾವಟೆ ಇದ್ದರು.