ಮಕ್ಕಳ ಉಜ್ವಲ ಭವಿಷ್ಯಕ್ಕೆ ಮೌಲ್ಯಧಾರಿತ ಶಿಕ್ಷಣ ಅಗತ್ಯ

ಮಕ್ಕಳ ಉಜ್ವಲ ಭವಿಷ್ಯಕ್ಕೆ ಮೌಲ್ಯಧಾರಿತ ಶಿಕ್ಷಣ ಅಗತ್ಯ

ಎಸ್ಸೆಸ್ಸೆಲ್ಸಿ ಫಲಿತಾಂಶ ಪುನಶ್ಚೇತನ ಕಾರ್ಯಾಗಾರದಲ್ಲಿ ಕಾಗಿನೆಲೆ ಶ್ರೀ ಅಭಿಮತ

ಮಲೇಬೆನ್ನೂರು, ಫೆ. 23- ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಬೆಳ್ಳೂಡಿ ಶಾಖಾಮಠದ ಚಂದ್ರಗುಪ್ತ ಮೌರ್ಯ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಫಲಿತಾಂಶ ಪುನಶ್ಚೇತನ ಕಾರ್ಯಾಗಾರ’ವನ್ನು ಉದ್ಘಾಟಿಸಿ  ಅವರು ಮಕ್ಕಳಿಗೆ ಆತ್ಮವಿಶ್ವಾಸದ ಪ್ರೇರಣಾ ಮಾತುಗಳನ್ನಾಡಿದರು.

ಗುಣಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಅಂಕ ಗಳಿಕೆಯ ಪುನಶ್ಛೇತನ ಶಿಬಿರವು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಾಗಾ ರವಾಗಿದೆ. ಶ್ರೀಮಠದಿಂದ ಸುಮಾರು ಮೂರು ತಿಂಗಳಿನಿಂದ ಈ ಶಿಬಿರ ಮಾಡಲು ತಯಾರಿ ಮಾಡಲಾಗಿತ್ತು. ಆದರೆ, ಶ್ರೀಮಠದ ವಿದ್ಯಾರ್ಥಿ ಗಳ ಜೊತೆಯಲ್ಲಿ ಹರಿಹರ ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳಿಗೂ ಈ ಕಾರ್ಯಾ ಗಾರದ ಉಪಯೋಗ ಸಿಗಬೇಕೆಂಬ ಉದ್ದೇಶ ದಿಂದ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಮಾಡಲಾಗುತ್ತಿದೆ  ಎಂದು ತಿಳಿಸಿದರು.

ಪರೀಕ್ಷೆ ಎಂದರೆ ಭಯ, ಒತ್ತಡ ಇದ್ದೆ ಇರುತ್ತದೆ. ಅದನ್ನು ಹೋಗಲಾಡಿಸಲು ಮತ್ತು ಅಂಕ ಗಳಿಕೆಯಲ್ಲಿ ಉತ್ಸಾಹ ಬರುವ ನಿಟ್ಟಿನಲ್ಲಿ ರಾಜ್ಯದ ಪರೀಕ್ಷಾ ಬೋರ್ಡ್‌ನಲ್ಲಿ ಕಾರ್ಯ ನಿರ್ವಹಿಸಿದ ಗುಣಮಟ್ಟದ ಸಂಪನ್ಮೂಲ ಹಾಗೂ ನುರಿತ ಅನುಭವಿ ವ್ಯಕ್ತಿಗಳಿಂದ ಮಕ್ಕಳಿಗೆ ಇಂದು ಕಾರ್ಯಾಗಾರ ಮಾಡಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಕನಕ ಗುರುಪೀಠದ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಮೊಗಾದಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ಜೀವನದ ಹಂತದಲ್ಲಿ ಕಠಿಣ ಪ್ರಯತ್ನ ಮಾಡಿದಾಗ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. 

ಶ್ರೀಮಠದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಮೂರು ತಿಂಗಳಿಗೊಮ್ಮೆ ಇಂತಹ ಉಪಯುಕ್ತ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು. 

ಕಾರ್ಯಾಗಾರದ ಪ್ರಾಯೋಕತ್ವ ವಹಿಸಿಕೊಂಡಿದ್ದ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಇಂತಹ ಗುಣಮಟ್ಟದ ಪುನಶ್ಚೇತನ ಶಿಬಿರ ನಡೆಯುತ್ತಿರುವುದು ಪ್ರಥಮವಾಗಿದೆ. ಮಕ್ಕಳು ಇಂತಹ ಒಳ್ಳೆಯ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಎಸ್‌ಕೆಬಿ ಪ್ರಸಾದ್, ಸ್ಪರ್ಧಾತ್ಮಕ ಪರೀಕ್ಷೆಗಳ ತಜ್ಞ ಎಂ.ಶಿವಕುಮಾರ್, ಕೌಶಲ್ಯ ಅಭಿವೃದ್ಧಿ ತರಬೇತುದಾರರಾದ ಅಶೋಕ್, ಶಿಕ್ಷಣ ತಜ್ಞರಾದ ನಿಂಗಪ್ಪ ಉಪ್ಪಾಳ್, ರಾಯ್ ಎಲ್. ಅರಸಿದ್ಧಿ, ಬಿ.ಸಿ. ತುಂಬಗಿ, ಶಶಿಕುಮಾರ್, ಕೆ.ವಿ. ವೆಂಕಟೇಶ್ ಬಾಬು ಇವರುಗಳು ಪರೀಕ್ಷೆ – ಅಂತಿಮ ಹಂತದ ಸಿದ್ಧತೆಯ ಜತೆಗೆ ಹೆಚ್ಚು ಅಂಕ ಗಳಿಸುವುದು ಹೇಗೆ ? ಮತ್ತು ಎಸ್ಸೆಸ್ಸೆಲ್ಸಿ ನಂತರ ಶೈಕ್ಷಣಿಕ ಅವಕಾಶಗಳು ಹಾಗೂ ಕೆರಿಯರ್ ಗೈಡ್‌ಲೈನ್ಸ್ ವಿಷಯಗಳ ಕುರಿತು ನೀಡಿದ ವಿಶೇಷ ಉಪನ್ಯಾಸ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಮುಖದಲ್ಲಿ ಆತ್ಮವಿಶ್ವಾಸದ ನಗೆ ಮೂಡಿಸಿತು. 

ಸಂಸ್ಥೆಯ ಕಾರ್ಯದರ್ಶಿ ಎಸ್.ನಿಂಗಪ್ಪ, ಶೈಕ್ಷಣಿಕ ನಿರ್ದೇಶಕರಾದ ಶೃತಿ ಇನಾಮ್ದಾರ್ ಉಪಸ್ಥಿತರಿದ್ದರು.

error: Content is protected !!