ದಾವಣಗೆರೆ, ಫೆ.21- ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ಕೂಡಲೇ ಕಡಿತಗೊಳಿಸದಿದ್ದರೇ ಆಮ್ ಆದ್ಮಿ ಪಕ್ಷ ಬೀದಿಗಿಳಿದು ಪ್ರತಿಭಟನೆ ಮಾಡಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಉಭಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು
ತನ್ನ ಪಂಚ ಗ್ಯಾರಂಟಿಗಳ ಮುಖೇನ ಸಾರ್ವಜನಿಕರ ಮೂಗಿಗೆ ತುಪ್ಪ ಸವರುತ್ತಾ ಜನರನ್ನು ಸುಲಿಗೆ ಮಾಡುತ್ತಿದೆ. ಆಸ್ತಿ ತೆರಿಗೆ ಶುಲ್ಕ, ವಾಹನ ನೋಂದಣಿ ಶುಲ್ಕ, ಸಾರಿಗೆ ಪ್ರಯಾಣ ದರ, ನೀರಿನ ಸುಂಕ, ಆರೋಗ್ಯ ಸೇವಾ ಶುಲ್ಕ, ವಿದ್ಯುತ್ ಹಾಗೂ ಲಿಕ್ಕರ್ ಸೇರಿದಂತೆ ಇನ್ನೂ ಅನೇಕ ವಲಯ ಹಾಗೂ ಸೇವೆಗಳ ಮೇಲೆ ಬೆಲೆ ಏರಿಕೆಗೊಳಿಸಿ ನಾಗರಿಕರಿಗೆ ತೊಂದರೆ ಮಾಡುತ್ತಿದೆ ಎಂದು ದೂರಿದರು.
ಕೇಂದ್ರ ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರೈಲು ದರ ಸೇರಿದಂತೆ ಅನೇಕ ವಸ್ತುವಿನ ಬೆಲೆ ಏರಿಕೆಗೊಳಿಸಿ ಜನ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಮಂಡಿಸಿದ
ಮೊನ್ನೆಯ ಬಜೆಟ್‌ನಲ್ಲಿ 12 ಲಕ್ಷದ ವರೆಗೂ ತೆರಿಗೆ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿದೆ ಎಂದು ಪ್ರಶಂಸಿಸಿದರು.
ಮಾರ್ಚ್ 7ಕ್ಕೆ ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಬೆಲೆ ಏರಿಕೆ ಕಡಿತಗೊಳಿಸಬೇಕು ಮತ್ತು ದಾವಣಗೆರೆ ಜಿಲ್ಲೆಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್, ಸಿಡ್ಲಪ್ಪ ಸುರೇಶ್, ಕೆ. ರವೀಂದ್ರ ಸುದ್ದಿಗೋಷ್ಠಿಯಲ್ಲಿದ್ದರು.