ಕೊಮಾರನಹಳ್ಳಿಯ ನಮ್ಮ ತಾಂಡಾದಲ್ಲಿ 15 ವರ್ಷ ದೊಳಗಿನ ಮಕ್ಕಳೂ ಕುಡಿಯುವುದನ್ನು ಕಲಿತಿದಿದ್ದಾರೆ. ಬಹುತೇಕ ಮಕ್ಕಳು 10ನೇ ತರಗತಿ ಒಳಗೆ ಶಾಲೆ ಬಿಟ್ಟು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಪಾದಿಸಿದ ಹಣದಲ್ಲಿ ಕುಡಿಯುವುದನ್ನು ಕಲಿತಿದ್ದಾರೆ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ.
– ಅಣ್ಣಾನಾಯ್ಕ, ಅಧ್ಯಕ್ಷ ಸಂತ ಶ್ರೀ ಸೇವಾಲಾಲ್ ಯುವಕರ ಸಂಘ, ಕೊಮಾರನಹಳ್ಳಿ.
ಮಲೇಬೆನ್ನೂರು, ಫೆ. 21- ಕೊಮಾರನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಮದ್ಯದಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ, ಸದ್ಗುರು ಸಂತ ಶ್ರೀ ಸೇವಾಲಾಲ್ ಯುವಕರ ಸಂಘದ ಸದಸ್ಯರು ಗುರುವಾರ ಮಲೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮದ ಬಂಜಾರ ತಾಂಡಾದಲ್ಲಿ ಅಕ್ರಮ ಮದ್ಯದಂಗಡಿಗಳ ಹಾವಳಿ ಹೆಚ್ಚಾಗಿದೆ. ರಾಜಾರೋಷವಾಗಿ ಬೀದಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ತಾಂಡಾದ ಪುರುಷರು, ಮಹಿಳೆಯರು ಮದ್ಯಪಾನ ಮಾಡಿ, ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ಈ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಮದ್ಯಪಾನದಿಂದ ತಾಂಡಾದ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಆದ್ದರಿಂದ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಪಿಎಸ್ಐ ಪ್ರಭು ಕೆಳಗಿನಮನಿಯವರಿಗೆ ಸಂಘದ ಅಣ್ಣಾನಾಯ್ಕ, ಗೌರವ ಅಧ್ಯಕ್ಷ ಪರಮೇಶ್ ನಾಯ್ಕ, ಸದಸ್ಯರಾದ ರಂಗಾನಾಯ್ಕ, ಕುಮಾರನಾಯ್ಕ, ರಾಮಾನಾಯ್ಕ, ಎನ್. ನಾಗರಾಜ್ ಮತ್ತಿತರರು ದೂರು ನೀಡಿದ್ದಾರೆ.