ಸ್ಥಾಯಿ ಸಮಿತಿ ರಚನೆಯಲ್ಲಿ ಆಡಳಿತಕ್ಕೆ ಹಿನ್ನಡೆ ಕೋರ್ಟ್‌ನತ್ತ ಮುಖಮಾಡುವ ವಿರೋಧಿಗಳು

ಸ್ಥಾಯಿ ಸಮಿತಿ ರಚನೆಯಲ್ಲಿ ಆಡಳಿತಕ್ಕೆ ಹಿನ್ನಡೆ ಕೋರ್ಟ್‌ನತ್ತ ಮುಖಮಾಡುವ ವಿರೋಧಿಗಳು

ರಾಣೇಬೆನ್ನೂರು, ಫೆ.20- ನೂರು ವಿಷಯಗಳ ವಿಷಯ ಪಟ್ಟಿಯ ಸರ್ವ ಸದಸ್ಯರ ಸಾಧಾರಣ ಸಭೆ ಇಂದು ಮಧ್ಯಾಹ್ನ ನಡೆದು 87 ವಿಷಯಗಳು ಅಲ್ಪಸ್ವಲ್ಪ ಚರ್ಚೆಗಳೊಂದಿಗೆ ಸರ್ವ ಸಮ್ಮತದೊಂದಿಗೆ ನಿರ್ಣಯಿಸಲ್ಪಟ್ಟವು.

ನಗರಸಭೆ ಸ್ಥಾಯಿ ಸಮಿತಿ ರಚನೆಯ 88ನೇ ವಿಷಯ ಕುರಿತು ಮಂಡನೆ, ಅನುಮೋದನೆಗಳು ಸಹ ನಡೆದವು. ಆಗ ವಿರೋಧಿ ಬಣದ ಪ್ರಕಾಶ ಬುರುಡಿಕಟ್ಟಿ ಉಪಸೂಚನೆ ನೀಡಿದ್ದು, ಅದನ್ನು ಮತಕ್ಕೆ ಹಾಕದೇ ಅಧ್ಯಕ್ಷರು ಸಭೆ ಮುಂದೂಡಿ ಹೊರ ನಡೆದಿದ್ದು, ನಿಯಮ ಬಾಹಿರವಾಗಿದೆ ಎಂದು ಹೇಳಲಾಗಿದೆ.

ಬಿರುಕು ಬಿಟ್ಟ ಬಿಜೆಪಿಯ ಒಂದು ಬಣದ ಜೊತೆ ಸೇರಿ ರಾಣೇಬೆನ್ನೂರು ನಗರಸಭೆಯ ಆಡಳಿತ ವಹಿಸಿಕೊಂಡಿದ್ದ ಕಾಂಗ್ರೆಸ್‌ನ ಚಂಪಕ ಬಿಸಲಳ್ಳಿ ಅವರು ಅಧ್ಯಕ್ಷರಾಗಿ ಇಂದು ಬೆಳಿಗ್ಗೆ ಪ್ರಥಮ ಸಭೆ ನಡೆಸಿ, ಒಂದು ವರ್ಷದ ಬಜೆಟ್‌ಗೆ ಸರ್ವಾನುಮತದ ಒಪ್ಪಿಗೆ ಪಡೆದು ಸರ್ವರೊಂದಿಗೆ ಹೋಳಿಗೆ ಊಟ ಸವಿದಿದ್ದರು.

ಸ್ಥಾಯಿ ಸಮಿತಿ ರಚನೆಯಲ್ಲಿ ಆಡಳಿತ ಬಣಕ್ಕೆ ಬಹುಮತ ದೊರೆಯಲಾರದು ಎಂಬುದನ್ನು ಅಧ್ಯಕ್ಷರು ಮನಗಂಡು ಇಂದಿನ ಸಾಧಾರಣ ಸಭೆಯನ್ನು ಮುಂದೂಡಿದ್ದು, ಜೊತೆಗೆ ಅವರ ಸಭೆಯ ನಡಾವಳಿಕೆಗಳು ಕಾನೂನು ಬಾಹಿರವಾಗಿವೆ. ಕಾರಣ ಈ ವಿಚಾರವಾಗಿ ಅಧಿಕಾರಿಗಳಿಂದ ನಮಗೆ ನ್ಯಾಯ ಸಿಗದಿದ್ದರೆ ನ್ಯಾಯಾಲಯಕ್ಕೆ ತೆರಳುವುದಾಗಿ ಪ್ರಕಾಶ್ ಬುರುಡಿಕಟ್ಟಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.

ಬುರಡಿಕಟ್ಟಿ ಜೊತೆಯಲ್ಲಿ ಮಾಜಿ ಅಧ್ಯಕ್ಷರಾದ ರೂಪಾ ಚಿನ್ನಿಕಟ್ಟಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿದ್ದಪ್ಪ ಬಾಗಲರ,  ಪ್ರಕಾಶ ಪೂಜಾರ, ಹನುಮಂತಪ್ಪ ಹೆದ್ದೇರಿ,ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರ, ಪಾಂಡುರಂಗ ಗಂಗಾವತಿ ಸೇರಿದಂತೆ ಬುರಡಿಕಟ್ಟಿ ಬಣದ ಸದಸ್ಯರು ಇದ್ದರು.

error: Content is protected !!