ಮಲೇಬೆನ್ನೂರು, ಫೆ.20- ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ಜಮೀನುಗಳಿಗೆ ಇನ್ನೂ ಸಮರ್ಪಕವಾಗಿ ನೀರು ಹರಿದು ಬರುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ನೀರು ಹರಿಸುವ ಕುರಿತು ನಾವು ಎಷ್ಟು ಪ್ರತಿಭಟನೆಗಳನ್ನು ಮಾಡಿದ್ದರೂ ಸಹ ಇದುವರೆಗೆ ನಮ್ಮ ಭಾಗಕ್ಕೆ ಭದ್ರಾ ಕಾಡಾ ಅಧ್ಯಕ್ಷರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಸಂಸದರಾಗಲೀ, ಶಾಸಕರಾಗಲೀ, ಜಿಲ್ಲಾಧಿಕಾರಿಗಳಾಗಲೀ ಒಮ್ಮೆಯೂ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿಲ್ಲ ಎಂದು ಕೊನೆ ಭಾಗದ ರೈತರು ದೂರಿದ್ದಾರೆ.
ಮಂಗಳವಾರ ಮಲೇಬೆನ್ನೂರಿನಲ್ಲಿ ಭದ್ರಾ ಅಧೀಕ್ಷಕ ಇಂಜಿನಿಯರ್ ಅವರು ಇಂಜಿನಿಯರ್‌ಗಳಿಗೆ ನಮ್ಮ ಸಮ್ಮುಖದಲ್ಲೇ ನೀರಿನ ಗೇಜ್ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹೇಳಿದರು. ಆದರೆ, ಕೊಮಾರನಹಳ್ಳಿ ಬಳಿ ಕಾಲುವೆಯಲ್ಲಿ ಗುರುವಾರ 4.6 ಅಡಿ ನೀರು ಮಾತ್ರ ಹರಿಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.
ಕೊನೆ ಭಾಗದ ಎಲ್ಲಾ ರೈತರಿಗೆ ನೀರು ಸಿಗಬೇಕಾದರೆ ಕನಿಷ್ಠ 5 ಅಡಿ ನೀರು ಹರಿಸಬೇಕೆಂದು ಶ್ರೀನಿವಾಸ್ ಅವರು ಇಂಜಿನಿಯರ್‌ಗಳಿಗೆ ಫೋನ್ ಮೂಲಕ ಒತ್ತಾಯಿಸಿದರು.
ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಹ ಭದ್ರಾ ಕಾಡಾ ಅಧ್ಯಕ್ಷರು ಇತ್ತ ಕಡೆ ಮುಖ ಮಾಡದಿರುವುದು ತುಂಬಾ ನೋವಿನ ಸಂಗತಿ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಹೇಳಿದರು.
ಬೇಸಿಗೆ ಸಮಯ ಆಗಿರುವುದರಿಂದ
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೊನೆ ಭಾಗಕ್ಕೆ ನೀರು ಹರಿಸಲು ಗಮನ ಹರಿಸುವಂತೆ ಹೊಸಳ್ಳಿ ದ್ಯಾವಪ್ಪ ರೆಡ್ಡಿ, ಹೊಳೆಸಿರಿಗೆರೆಯ ತಿಪ್ಪೇರುದ್ರಪ್ಪ, ಪಾಲಾ ಕ್ಷಪ್ಪ, ಭಾನುವಳ್ಳಿಯ ಹೆಚ್.ಕೆ.ನಾರಾಯಣಪ್ಪ, ಗುತ್ತ್ಯೆಪ್ಪ ಮತ್ತಿತರರು ಆಗ್ರಹಿಸಿದ್ದಾರೆ.