ದಾವಣಗೆರೆ, ಫೆ. 20- ಜಗಳೂರು ತಾಲ್ಲೂಕಿನ ದಿದ್ದಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಸೌಮ್ಯ ದಯಾನಂದ ಅವರ ‘ಸಂಜೆ ಐದರ ಸಂತೆ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರದ ಘಟಕದ ಪುರಸ್ಕಾರ ಲಭಿಸಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ವಿವಿಧ 52 ದತ್ತಿ ಪ್ರಶಸ್ತಿಗಳಿಗಾಗಿ ಬರಹಗಾರರಿಂದ 2023ರಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಕವನ ಸಂಕಲನ ವಿಭಾಗದಲ್ಲಿ ಸೌಮ್ಯ ದಯಾನಂದ ಕೃತಿಗೆ ಪ್ರೊ. ಡಿ. ಸಿ. ಅನಂತ ಸ್ವಾಮಿ ದತ್ತಿ ಕವನ ಸಂಕಲನ ಪುರಸ್ಕಾರ ದೊರೆತಿದೆ.
ದೇಶ, ವಿದೇಶಗಳಿಂದ 4 ಸಾವಿರಕ್ಕೂ ಅಧಿಕ ಕೃತಿಗಳು ಸಲ್ಲಿಕೆಯಾಗಿದ್ದು, 12 ಪರಿಣಿತರ ಸಮಿತಿ ಆಯ್ಕೆ ಮಾಡಿದ ಪಟ್ಟಿಯನ್ನು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ನೇತೃತ್ವದ ತಂಡ ಪರಿಶೀಲಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಸೌಮ್ಯ ದಯಾನಂದ ಅವರು ಹಲವಾರು ಕಥೆ, ಲೇಖನಗಳನ್ನೂ ಬರೆದಿದ್ದಾರೆ. ದಾವಣಗೆರೆ ಜಿಲ್ಲಾ ಸಾವಿತ್ರಿಬಾಯಿ ಫುಲೆ ಉತ್ತಮ ಶಿಕ್ಷಕಿ ಪ್ರಶಸ್ತಿ, ದಾವಣಗೆರೆ ಮಹಾನಗರ ಪಾಲಿಕೆಯಿಂದ ಕೊಡಲಾಗುವ ರಾಜ್ಯೋತ್ಸವ ಪ್ರಶಸ್ತಿಗಳೂ ಲಭಿಸಿವೆ.
ಸೌಮ್ಯ, ದಾವಣಗೆರೆಯ ಹಿರಿಯ ನ್ಯಾಯವಾದಿ ಎಲ್. ದಯಾನಂದ ಅವರ ಧರ್ಮಪತ್ನಿ. ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೂವಿನಹೊಳೆ ಗ್ರಾಮದವರಾದ ಸೌಮ್ಯ, `ಮಾಸ್ತಿಯವರ ಸಣ್ಣ ಕಥೆಗಳಲ್ಲಿ ಸ್ತ್ರೀ ಸಂವೇದನೆ’ ವಿಷಯ ಕುರಿತು ದಾವಣಗೆರೆ ವಿವಿಯಲ್ಲಿ ಪಿಹೆಚ್‌ಡಿ ಪದವಿಗೆ ಮಹಾಪ್ರಬಂಧ ಮಂಡಿಸಲು ಸಿದ್ಧತೆ ನಡೆಸಿದ್ದಾರೆ.