ಹರಿಹರ, ಫೆ.20- ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಂಡರೆ ಅಗಾಧ ಜ್ಞಾನ ಸಂಪಾದಿಸಬಹುದು ಎಂದು ಹಿರಿಯ ಸಾಹಿತಿ ಬಾ.ಮ ಬಸವರಾಜಯ್ಯ ಪ್ರತಿಪಾದಿಸಿದರು.
ನಗರದ ಎಂ.ಕೆ.ಇ.ಟಿ. ಸಿಬಿಎಸ್ ಶಾಲೆಯಲ್ಲಿ ಗುರುವಾರ ನಡೆದ ಗ್ರಂಥಾಲಯ ದಿನಾಚರಣೆ ಮತ್ತು ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಗಳನ್ನಷ್ಟೇ ಓದದೇ, ಅನೇಕ ಹಿರಿಯ ಸಾಹಿತಿಗಳ ಕೃತಿ ಹಾಗೂ ಗ್ರಂಥಗಳನ್ನು ಓದಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಬಾಲ್ಯದಿಂದಲೇ ಓದುವ ಹವ್ಯಾಸ ಬೆಳೆಸಿಕೊಂಡರೆ ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಬಹುದು. ಓದು ಮಕ್ಕಳಲ್ಲಿ ಜಾಣ್ಮೆ, ಕ್ರಿಯಾಶೀಲತೆ ಹಾಗೂ ಬೌದ್ಧಿಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಆಡಳಿತಾಧಿಕಾರಿ ಡಾ.ಬಿ.ಟಿ ಅಚ್ಯುತ್ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ವಿದ್ಯಾರ್ಥಿಗಳು ಗೂಗಲ್ ಶೋಧಕ್ಕೆ ಬಲಿಯಾಗುತ್ತಿದ್ದಾರೆ. ಇದು ಪರಿಪೂರ್ಣ ಜ್ಞಾನ ನೀಡುವುದಿಲ್ಲ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಕುಲಕರ್ಣಿ ಮಾತನಾಡಿ, ಓದುವ ಆಸಕ್ತಿ ಇರುವ ಮಕ್ಕಳಿಗೆ ಇಲ್ಲಿ ಪೂರಕ ವಾತಾವರಣ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಗ್ರಂಥ ಪಾಲಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.