ದಾವಣಗೆರೆ, ಫೆ.20- ಮಹಾನಗರ ಪಾಲಿಕೆಯ ಜಲಸಿರಿ ಯೋಜನೆ ಯಡಿಯಲ್ಲಿ ಬಾತಿಯಲ್ಲಿ ನಿರ್ಮಾಣಗೊಂಡಿರುವ ನೀರು ಶುದ್ದೀಕರಣ ಘಟಕ ಡಬ್ಲ್ಯೂಟಿಪಿ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಪ್ರಗತಿ ಪರಿಶೀಲನೆ ನಡೆಸಿ, ಪರೀಕ್ಷಾರ್ಥ ಕಾರ್ಯಾರಂಭಗೊಳಿಸಿದರು. ಪೂರ್ಣ ಪ್ರಮಾಣದ ಕಾರ್ಯಾರಂಭಕ್ಕೆ ಅಗತ್ಯವಿರುವ ಕೆಲಸಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾಮಗಾರಿಯಿಂದ ನಗರಕ್ಕೆ 40 ಎಂ.ಎಲ್.ಡಿ ನೀರು ಅಧಿಕವಾಗಿ ಪೂರೈಸಲು ಸಹಕಾರಿಯಾಗುತ್ತದೆ. ಅಲ್ಲದೇ ಕುಂದುವಾಡ ಕೆರೆಯಿಂದ ಪ್ರತಿದಿನ ಪೂರೈಸಲಾಗುತ್ತಿರುವ ಪ್ರಮಾಣವನ್ನು ಕಡಿತಗೊಳಿಸಿ, ಬೇಸಿಗೆಗೆ ನೀರನ್ನು ಶೇಖರಿಸಿಡಲು ಸಾಧ್ಯವಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಅನುಕೂಲವಾಗುವಂತೆ ಕ್ರಮ ವಹಿಸಲು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್ ಅವರು, ಬಾತಿ ನೀರು ಶುದ್ಧೀಕರಣ ಘಟಕ ಕಾಮಗಾರಿ ಹಲವು ವರ್ಷಗಳಿಂದ ಪ್ರಗತಿ ಕಂಡಿರಲಿಲ್ಲ. ಇದೀಗ ಸಚಿವರ ಮಾರ್ಗದರ್ಶನದಲ್ಲಿ ಆ ಕೆಲಸ ಆಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಮಹಾಪೌರರಾದ ಚಮನ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಆಶಾ ಉಮಾಶಂಕರ್, ಸುಧಾ ಇಟ್ಟಿಗುಡಿ ಮಂಜುನಾಥ್, ಪಾಲಿಕೆ ಆಯುಕ್ತರಾದ ರೇಣುಕಾ ಮತ್ತು ಇತರೆ ಅಧಿಕಾರಿಗಳು ಹಾಜರಿದ್ದರು.